ಕಾರವಾರ: 2024ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಸಾಧನೆಗೈದ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಇಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ ಅವರು ಸನ್ಮಾನಿಸಿದರು.
ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯ ಮಟ್ಟದಲ್ಲಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಸುದೀರ್ಘವಾದ ಸಂವಾದ ನಡೆಸಿ, ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಆಯ್ಕೆ, ವೃತ್ತಿಪರ ಆಯ್ಕೆ, ಗುರಿ ಮತ್ತು ಪೂರ್ವತಯಾರಿ ಕುರಿತು ಚರ್ಚಿಸಿ, ಅಗತ್ಯ ಮಾರ್ಗದರ್ಶನ ನೀಡಿದರು.
ಕಲಾ ವಿಭಾಗದಲ್ಲಿ ಅಂಕಿತಾ ಸತೀಶ್ ಹೆಗ್ಡೆ, ದಿವ್ಯಾ ಎಸ್ ಗುಣೇಕಾರ್, ಜಾಯಿಬಾ ಎಮ್ ಮಿರ್ಚಿವಾಲೆ, ವಾಣಿಜ್ಯ ವಿಭಾಗದಲ್ಲಿ ಧ್ಯಾನ ರಾಮಚಂದ್ರ ಭಟ್, ಅಮಿತ್ ಎಮ್ ಹೆಗಡೆ, ರಮ್ಯಾ ಹೆಗಡೆ ಹಾಗೂ ವಿಜ್ಞಾನ ವಿಭಾಗದಲ್ಲಿ ಸಿಂಚನಾ ಗಣಪತಿ ಹೆಗಡೆ, ಶ್ರಾವ್ಯ ಶ್ರೀಧರ್ ಭಟ್, ಯಶಸ್ವಿನಿ ಎಸ್ ಹೆಗಡೆ, ಸನ್ಮತಿ ಹೆಗಡೆ ಹಾಗೂ ಸಾಯಿಶ್ರೀ ಶೇಟ್ ಜಿಲ್ಲಾ ಮಟ್ಟದಲ್ಲಿ ಅಗ್ರ ಶ್ರೇಣಿಯಲ್ಲಿರುವ ವಿದ್ಯಾರ್ಥಿ ಸಾಧಕರಾಗಿದ್ದು, ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸತೀಶ ಬಿ ನಾಯ್ಕ್ ಹಾಗೂ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.