ಶಿರಸಿ : ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಸಮಾಜದಲ್ಲಿ ಆಗುತ್ತಿರುವ ಅನುಚಿತ ಘಟನೆಗಳಿಂದ ರಕ್ಷಣೆ ನೀಡುವಂತೆ ಆಗ್ರಹಿಸಿ ಶಿರಸಿ ವೀರಶೈವ ಅಭಿವೃದ್ಧಿ ಸಂಘ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ಶಿರಸಿ ತಾಲೂಕು ಘಟಕದ ಪಧಾಧಿಕಾರಿಗಳು, ಸದಸ್ಯರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಶಿರಸಿ ಉಪವಿಭಾಗದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕಾಲೇಜು ಆವರಣದಲ್ಲಿ ನೇಹಾ ನಿರಂಜನ ಹಿರೇಮಠ ಎಂಬ ವಿದ್ಯಾರ್ಥಿನಿಯ ಬರ್ಬರ ಹತ್ಯೆ ನಡೆದಿದ್ದು ವಿಷಾದನೀಯ. ಖಂಡನೀಯ ಕೂಡ. ಈ ಕೃತ್ಯದಲ್ಲಿ ಭಾಗಿಯಾದವರನ್ನು ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮುಂದೆ ಕೂಡ ಇಂತಹ ದುರ್ಘಟನೆ ನಡೆಯದಂತೆ ಮಹಿಳೆಯರಿಗೆ ವಿದ್ಯಾರ್ಥಿನಿಯರಿಗೆ ಹೆಚ್ಚಿನ ರಕ್ಷಣೆ ನೀಡಬೇಕು. ರಾಜ್ಯದಲ್ಲಿ ತಾಯಂದಿರ, ಅಕ್ಕ ತಂಗಿಯರ, ಮಹಿಳೆಯರ ಹಾಗೂ ವಿದ್ಯಾರ್ಥಿಗಳ ಮಾನ, ಪ್ರಾಣ ಹಾಗೂ ಗೌರವವನ್ನು ಕಾಪಾಡುವ ಹೊಣೆ ಘನ ಸರಕಾರದಾಗಿದ್ದು, ಸಮಸ್ತ ಮಾನವ ಸಮಾಜದ ಪರವಾಗಿ ಮೇಲೆ ತಿಳಿಸಿದ ಪ್ರಕರಣವನ್ನು ಘಂಭೀರವಾಗಿ ಪರಿಗಣಿಸಿ, ಸಮಾಜದ ಸರ್ವತೋಮುಖ ಉನ್ನತಿಗಾಗಿ ಶ್ರಮಿಸಿ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.