Slide
Slide
Slide
previous arrow
next arrow

ಅರಣ್ಯವಾಸಿಗಳಿಗೆ ಅನ್ಯಾಯ ಮಾಡಿರುವವರ ವಿರುದ್ಧದ ನ್ಯಾಯದ ಚುನಾವಣೆ: ಡಾ.ಅಂಜಲಿ

300x250 AD

ಜೊಯಿಡಾ: ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಚುನಾವಣೆಯಲ್ಲ. ಕುಣಬಿ ಸಮಾಜಕ್ಕೆ ಅನ್ಯಾಯ ಮಾಡುತ್ತಿರುವ, ದಶಕಗಳಿಂದ ಅರಣ್ಯ ಹಕ್ಕು ನೀಡದ ಕೇಂದ್ರ ಸರ್ಕಾರದ ವಿರುದ್ಧದ ಚುನಾವಣೆ; ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅನ್ಯಾಯದ ವಿರುದ್ಧದ ನ್ಯಾಯದ ಚುನಾವಣೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ವಾಗ್ದಾಳಿ ನಡೆಸಿದರು.

ಕುಂಬಾರವಾಡದ ಕ್ಷೇತ್ರಪಾಲ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ವರ್ಷಗಟ್ಟಲೆ ದೆಹಲಿಯ ಗಡಿಯಲ್ಲಿ ಅನ್ನದಾತರು ಪ್ರತಿಭಟನೆ ನಡೆಸಿದರೂ ಎಸಿ ರೂಮಿಂದ ಪ್ರಧಾನಿಯಾಗಲಿ, ಒಬ್ಬನೇ ಒಬ್ಬ ಬಿಜೆಪಿ ನಾಯಕನಾಗಲಿ ಅವರ ಅಳಲು ಕೇಳಲು ಬಂದಿಲ್ಲ. ಬದಲಿಗೆ ಅವರನ್ನ ಭಯೋತ್ಪಾದಕರೆಂದು ಸಂಬೋಧಿಸಿದರು. ಮೇಲೆ ನೋಡಿ ಮತ ಹಾಕಿ ಎಂದು ಬಿಜೆಪಿಗರು ಹೇಳುತ್ತಾರೆ. ಹಾಗಾದರೆ ಇವರೆಲ್ಲ ಯಾಕೆ ಚುನಾವಣೆ ನಿಲ್ಲುತ್ತಾರೆ, ದೇಶದೆಲ್ಲೆಡೆ ಮೋದಿಯವರನ್ನೇ ನಿಲ್ಲಿಸಿಬಿಡಿ. ಬಿಜೆಪಿಗರು 15 ಲಕ್ಷ ಹಾಕುತ್ತಾರೆಂದು ಸಾಲಿನಲ್ಲಿ ನಿಂತು ಎಲ್ಲರೂ ಖಾತೆ ತೆರೆದರು. 15 ಲಕ್ಷವಲ್ಲ, 15 ಪೈಸೆಯನ್ನೂ ಬಂದಿಲ್ಲ ಎಂದರು.

30 ವರ್ಷ ಜಿಲ್ಲೆಯನ್ನ ಬಿಜೆಪಿಗೆ ಕೊಟ್ಟಿದ್ದೀರಿ, ಐದು ವರ್ಷಕ್ಕಾಗಿ ಒಂದು ಅವಕಾಶ ನನಗೆ ಕೊಡಿ. ‌ನಂತರ ಬದಲಾವಣೆ ನೀವೇ ನೋಡಿ. ನಿಮ್ಮ ಕಷ್ಟಗಳನ್ನ ದೆಹಲಿಯವರೆಗೆ ಕೊಂಡೊಯ್ಯಲು, ನಿಮ್ಮನ್ನ ಪ್ರತಿನಿಧಿಸಲು ಅವಕಾಶ ನೀಡುವ ಚುನಾವಣೆ ಇದು. ಬಿಜೆಪಿ ಅಭ್ಯರ್ಥಿ ಕಾಗೇರಿಯವರು ನನಗಿಂತ ಹಿರಿಯರು. ವೈಯಕ್ತಿಕವಾಗಿ ಯಾರನ್ನೂ ಟೀಕೆ ಮಾಡಬಾರದು. ಆದರೆ ಆರು ಬಾರಿ ಶಾಸಕರಾಗಿದ್ದರೂ ಕ್ಷೇತ್ರದ ಜನಕ್ಕಾಗಿ ಅವರು ಏನು ಮಾಡಿದರು? ಶಿಕ್ಷಣ ಮಂತ್ರಿಯಾಗಿದ್ದಾಗ ಒಂದೇ ಒಂದು ಬಾರಿ ಜೊಯಿಡಾಕ್ಕೆ ಬಂದಿದ್ದರಾ? ಇದು ದೇಶಕ್ಕಾಗಿ ನಡೆಯುತ್ತಿರುವ ಚುನಾವಣೆ, ಸ್ಥಳೀಯ ಸಮಸ್ಯೆಗಳದ್ದಲ್ಲ ಎಂದು ಬಿಜೆಪಿಗರು ಹೇಳುತ್ತಾರೆ. ಚುನಾವಣೆ ಎಂದ ಮೇಲೆ ಸ್ಥಳೀಯ ಸಮಸ್ಯೆಗಳ ಆಧಾರದ ಮೇಲೆಯೇ ಚುನಾವಣೆ ಆಗಬೇಕಲಾ. ವೈದ್ಯೆ ವೃತ್ತಿ ಬಿಟ್ಟು ಜನ ಸೇವೆಗಾಗಿ ಬಂದು ಒಂದೇ ಅವಧಿಯಲ್ಲಿ ಖಾನಾಪುರದಲ್ಲಿ ನೀರು, ರಸ್ತೆ, ಶಾಲೆಗಳನ್ನ ಮಾಡಿಸಿದ್ದೇನೆ, ಆರು ಬಾರಿ ಆಯ್ಕೆಯಾದ ಕಾಗೇರಿ ಮಾಡಿದ್ದೇನು ಎಂದು ಪ್ರಶ್ನಿಸಿದರು.

ಕುಣಬಿ ಸಮಾಜವನ್ನು ಎಸ್ಟಿಗೆ ಸೇರಿಸಬೇಕೆಂಬ ವಿಚಾರ ಕೇಂದ್ರದಲ್ಲಿದೆ. ಕುಂಬ್ರಿ ಮರಾಠ ಸಮಾಜಕ್ಕೆ ಅನ್ಯಾಯ ಆಗುತ್ತಿರುವುದು ಕೇಂದ್ರದಿಂದ. ಅರಣ್ಯ ಅತಿಕ್ರಮಣದಾರರ ಸಮಸ್ಯೆ ಪರಿಹಾರ ಆಗಬೇಕಿರುವುದು ಕೇಂದ್ರದಿಂದ. ಹಳ್ಳಿಯಿಂದ ದಿಲ್ಲಿಗೆ ನಿಮಗೆ ಸಾಥ್ ನೀಡಲು ಒಂದು ಮತ ನನಗೆ ನೀಡಿ. ಸರ್ಕಾರಕ್ಕಲ್ಲ, ಪಕ್ಷಕ್ಕಲ್ಲ, ನಿಮ್ಮ ಸ್ವಾರ್ಥಕ್ಕಾಗಿ, ಅನ್ನ ಕೊಟ್ಟ, ಶಿಕ್ಷಣ ನೀಡಿದ ಕಾಂಗ್ರೆಸ್‌ಗೆ ಮತ ನೀಡಬೇಕಿದೆ ಎಂದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಾಷ್ಟ್ರಕ್ಕೆ ಸಂವಿಧಾನ ಎಂಬ ಗ್ರಂಥ ನೀಡಿದ್ದಾರೆ. ಆ ಮೂಲಕ ಪವಿತ್ರವಾದ ಮತದಾನ ಎಂಬ ಹಕ್ಕು ನೀಡಿದ್ದಾರೆ. ಆ ಮತ ಚಲಾಯಿಸುವ ಪೂರ್ವ ಯೋಚಿಸಿ. ಬಡವರ ಕಲ್ಯಾಣ, ಕ್ಷೇತ್ರದ ಅಭಿವೃದ್ಧಿ, ಮಹಿಳೆಯರ ಕಲ್ಯಾಣ ಮಾಡುವವರಿಗೆ ಮತ ನೀಡಿ. ಆ ಕೆಲಸವನ್ನ ಡಾ.ಅಂಜಲಿಯವರು ಮಾಡುತ್ತಾರೆ. ನಿಮ್ಮೆಲ್ಲರ ಕಷ್ಟ ದೂರವಾಗಲು ಅವರಿಗೇ ಮತ ಚಲಾಯಿಸಿ. ಬಿಜೆಪಿಗರು ಮಾಡಿದ ಕೆಲಸವೇನಿಲ್ಲ, ಮೇಲೆ ನೋಡಿ ಎಂದು ಸೂರ್ಯ- ಚಂದ್ರ ತೋರಿಸುತ್ತಾರಷ್ಟೇ ಎಂದರು.

300x250 AD

ಅರಣ್ಯ ಅತಿಕ್ರಮಣದಾರರ ಜ್ವಲಂತ ಸಮಸ್ಯೆಗೆ ಪರಿಹಾರ ಸಿಗಬೇಕೆಂದು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇವೆ. ಅದರಲ್ಲೇ ನನ್ನ ಕೂದಲೂ ಹಣ್ಣಾಯಿತು. ಆದರೆ ಈವರೆಗೆ ಕೇಂದ್ರದಿಂದ ಸರಿಯಾಗಿ ಸ್ಪಂದನೆ ಸಿಕ್ಕಿಲ್ಲ. ಹಳೆಯ ಅತಿಕ್ರಮಣ ಇರವವರಿಗೆ ಹಕ್ಕುಪತ್ರ ಮಂಜೂರಿಸಲು ಎಲ್ಲಾ ಪ್ರಯತ್ನ ಮಾಡುತ್ತೇನೆ. ೧೭- ೦೪- ೧೯೭೨ರ ಪೂರ್ವ ಅತಿಕ್ರಮಣ ಮಾಡಿದವರ ಒಂದಿಂಚು ಜಾಗವನ್ನೂ ಮುಟ್ಟಬಾರದು ಎಂದು ಕೇಂದ್ರದ ಆದೇಶದವರೆಗೂ ಕಾಯದೆ ರಾಜ್ಯ ಸರ್ಕಾರದಿಂದ ಆದೇಶ ಮಾಡಿಸಿದ್ದೇವೆ ಎಂದ ಅವರು, ಕುಣಬಿ, ಹಾಲಕ್ಕಿ ಸಮಾಜವನ್ನ ಎಸ್ಟಿಗೆ ಸೇರಿಸಬೇಕೆಂಬ ಬೇಡಿಕೆ ಜಿಲ್ಲೆಯಲ್ಲಿ ಇದೆ. ಇದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದೆವು. ದೆಹಲಿಯವರೆಗೂ ಹೋಗಿಬಂದೆ. ಭಾರತ ಸರ್ಕಾರದೊಂದಿಗೆ ಪತ್ರ ವ್ಯವಹಾರವನ್ನೂ ನಡೆಸಿದ್ದೇವೆ. ಆದರೆ ಪ್ರಯೋಜನಕ್ಕೆ ಬಂದಿಲ್ಲ. ಈ ಎರಡೂ ಸಮಸ್ಯೆ ಬಗ್ಗೆ ಲೋಕಸಭೆಯಲ್ಲಿ ಡಾ.ಅಂಜಲಿಯವರು ಧ್ವನಿ ಎತ್ತಲಿದ್ದಾರೆ ಎಂದು ಭರವಸೆ ನೀಡಿದರು.

ರಾಜ್ಯ ಕಿಸಾನ್ ವಿಭಾಗದ ಪ್ರಧಾನ ಕಾರ್ಯದರ್ಶಿ ರವಿ ರೇಡ್ಕರ್, ೩೦ ವರ್ಷಗಳ ನಂತರ ಜನರು, ರೈತರು, ಮೀನುಗಾರರು, ಬುಡಕಟ್ಟು ಜನಾಂಗದವರ ಜೊತೆ ಬೆರೆಯುವ, ಮಾರ್ಗರೇಟ್ ಆಳ್ವಾ ಅವರ ನಂತರ ಸಮರ್ಥ ಅಭ್ಯರ್ಥಿಯಾಗಿ ಡಾ.ಅಂಜಲಿ ಅವರನ್ನು ಕಾಂಗ್ರೆಸ್ ನಮಗೆ ನೀಡಿದೆ. ಅವರು ಜಿಲ್ಲೆಯ ಸಮಸ್ಯೆಗಳಿಗೆ ಸಂಸತ್‌ನಲ್ಲಿ ದನಿಯಾಗಲಿದ್ದಾರೆ ಎಂಬ ವಿಶ್ವಾಸವಿದೆ. ಬಿಜೆಪಿಯವರಿಗೆ ಪ್ರಚಾರಕ್ಕೆ ಹೋಗಲು ವಿಷಯಗಳೇ ಇಲ್ಲ. ನಮ್ಮ ಬಳಿ ಐದು ಗ್ಯಾರಂಟಿ, ಪಂಚ ನ್ಯಾಯಗಳಿವೆ. ಹಳ್ಳಿ ಹಳ್ಳಿಗಳಿಗೆ ತೆರಳಿ ಕಾಂಗ್ರೆಸ್‌ ಗೆಲ್ಲಲು ಶ್ರಮಿಸಬೇಕಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ದೇಸಾಯಿ, ಕೆಪಿಸಿಸಿ ಸದಸ್ಯ ಸದಾನಂದ ದಬ್ಗಾರ್, ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮಂಗೇಶ್ ಕಾಮತ್, ವಿವಿಧ ಗ್ರಾ.ಪಂ. ಪ್ರತಿನಿಧಿಗಳಾದ ಚೆನ್ನಮ್ಮ ಡೊಂಬಾರ್, ದತ್ತಾ, ಮಂಜುನಾಥ ಮೊಕಾಶಿ, ಪುಷ್ಪಾ ಗೌಡ, ಅರುಣ್ ದೇಸಾಯಿ, ದಿವ್ಯಾ ಮುಂತಾದವರಿದ್ದರು.

Share This
300x250 AD
300x250 AD
300x250 AD
Back to top