Slide
Slide
Slide
previous arrow
next arrow

ಬೇಸಿಗೆ ಕಾಲದಲ್ಲಿ ಜಾನುವಾರುಗಳ ನಿರ್ವಹಣೆ ಹೀಗೆ ಇರಲಿ

300x250 AD

ಕಾರವಾರ: ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆ ಹಾಗೂ ಹಾಲಿನ ಇಳುವರಿ ಕಾಪಾಡಲು ಅನುಕೂಲವಾಗಿರುತ್ತದೆ.
ಜಾನುವಾರುಗಳನ್ನು ಮುಂಜಾನೆ ಮತ್ತು ಸಾಯಂಕಾಲದ ಸಮಯದಲ್ಲಿ ಮೇಯಿಸಲು ಬಿಡಬೇಕು, ದಿನಕ್ಕೆ 2 ರಿಂದ 3 ಸಾರಿ ಶುದ್ದವಾದ ನೀರನ್ನು ಕುಡಿಸಬೇಕು., ಮಧ್ಯಾಹ್ನದ ಸಮಯದಲ್ಲಿ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಅಥವಾ ಗಿಡದ ನೆರಳಿನಲ್ಲಿ ಕಟ್ಟಬೇಕು. ಜಾನುವಾರುಗಳಿಗೆ ದಿನದಲ್ಲಿ 1 ರಿಂದ 2 ಸಾರಿ ಮೈ ತೊಳೆಯಬೇಕು ಹಾಗೂ ಮಿಶ್ರ ತಳಿ ರಾಸು/ ಎಮ್ಮೆಗಳಲ್ಲಿ ದೇಹದ ಉಷ್ಣತೆ ಕಾಪಾಡಲು ಗೋಣಿಚೀಲವನ್ನು ನೀರಲ್ಲಿ ತೋಯಿಸಿ ಮೈ ಮೇಲೆ ಹಾಕಬೇಕು. ದನದ ಕೊಟ್ಟಿಗೆಯನ್ನು ತಂಪಾಗಿ ಇಡಲು ಕೊಟ್ಟಿಗೆಯ ಮೇಲೆ ತೆಂಗಿನ ಗರಿ/ಹುಲ್ಲನ್ನು ಹಾಕಿ, ಕಿಟಕಿಗಳಿಗೆ ಗೋಣಿಚೀಲಗಳನ್ನು ಕಟ್ಟಿ ನೀರನ್ನು ಸಿಂಪಡಿಸುತ್ತಿರಬೇಕು. ಜಮೀನು ಉಳಿಮೆ ಮಾಡಲು ಎತ್ತುಗಳನ್ನು ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಮಾತ್ರ ಕೆಲಸಕ್ಕೆ ಉಪಯೋಗಿಸಬೇಕು.
ಕುರಿ ಮತ್ತು ಆಡುಗಳನ್ನು ಸಹ ತಂಪಾದ ಸಮಯದಲ್ಲಿ ಮೇಯಿಸಿ ಮಧ್ಯಾಹ್ನದಲ್ಲಿ ಗಿಡಗಳ ನೆರಳಿನಲ್ಲಿ ನಿಲ್ಲಿಸಬೇಕು. ಕರು, ಕುರಿ/ಮೇಕೆ ಮರಿಗಳಿಗೆ ಸರಿಯಾದ ಪ್ರಮಾಣದಲ್ಲಿ ಹಾಲನ್ನು ಕುಡಿಸಬೇಕು ಹಾಗೂ ನೀರನ್ನು ಸಹ 2 ರಿಂದ 3 ಸಾರಿ ಕುಡಿಸಬೇಕು. ಹೈನುರಾಸುಗಳಿಗೆ ಸಾಧ್ಯವಾದಷ್ಟು ಪೌಷ್ಠಿಕ ಆಹಾರ ಹಾಗೂ ಲಭ್ಯವಿರುವ ಹಸಿರು ಮೇವನ್ನು ಕೊಡಬೇಕು. ಪೌಷ್ಠಿಕ ಆಹಾರ ಅಥವಾ ಕುಡಿಯುವ ನೀರಿನಲ್ಲಿ ಲವಣ ಮಿಶ್ರಣ, ಉಪ್ಪು ಹಾಗೂ ಬೆಲ್ಲವನ್ನು ನಿಗದಿತ ಪ್ರಮಾಣದಲ್ಲಿ ನೀಡಬೇಕು. ಜಾನುವಾರುಗಳಿಗೆ ಮುಂಜಾಗ್ರತೆಯಾಗಿ ಇಲಾಖೆಯಿಂದ ಉಚಿತವಾಗಿ ನೀಡುವ ಸಾಂಕ್ರಾಮಿಕ ರೋಗಗಳ ಲಸಿಕೆಗಳನ್ನು ಕಾಲಕಾಲಕ್ಕೆ ನಿಗದಿತ ಸಮಯದಲ್ಲಿ ಹಾಕಿಸಬೇಕು. ಜಂತುನಾಶಕ ಔಷಧಿಯನ್ನು ವರ್ಷಕ್ಕೆ 02 ರಿಂದ 03 ಸಾರಿ ಕುಡಿಸಬೇಕು. ಯಾವುದೇ ಸಮಯದಲ್ಲಿ ಕಾಯಿಲೆಯಿಂದ ಬಳಲುವ ಜಾನುವಾರುಗಳನ್ನು ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಚಿಕಿತ್ಸೆ ಕೂಡಿಸಬೇಕು. ನಿರ್ಜಲೀಕರಣಗೊಂಡ ಜಾನುವಾರುಗಳಿಗೆ ಉಪ್ಪು, ಅಡುಗೆ ಸೋಡಾ, ಬೆಲ್ಲ ಹಾಗೂ ಲಿಂಬೆಹಣ್ಣಿನ ರಸವನ್ನು ನೀರಿನಲ್ಲಿ ಮಿಶ್ರಣ ಮಾಡಿ ದಿನದಲ್ಲಿ 3 ರಿಂದ 4 ಸಾರಿ ಕುಡಿಸಬೇಕು.
ಕೊಟ್ಟಿಗೆಯ ಸುತ್ತಮುತ್ತ ಮತ್ತು ತೋಟ/ಹೊಲದ ಬದುವುಗಳಲ್ಲಿ ಮೇವಿನ ಮರಗಳನ್ನು ಬೆಳೆಸುವುದರಿಂದ ಜಾನುವಾರುಗಳಿಗೆ ತಂಪಾದ ನೆರಳು ಹಾಗೂ ಪೌಷ್ಠಿಕ ಆಹಾರವಾಗಿ ಹಸಿರು ಸೊಪ್ಪು ತಿನ್ನಿಸಲು ಅನುಕೂಲವಾಗುತ್ತದೆ. ರೈತರು ತಮ್ಮ ಜಮೀನಿನಲ್ಲಿರುವ ಮೇವನ್ನು ಯಾವುದೇ ಕಾರಣಕ್ಕೂ ಸುಟ್ಟು ಹಾಕದೇ ಬಣವೇ ಹಾಕಿ ಅಥವಾ ಸುರುಳಿ ಸುತ್ತಿಟ್ಟುಕೊಂಡು (ಬೇಲಿಂಗ್) ಮೇವನ್ನು ಸಂಗ್ರಹಿಸಬೇಕು. ಇದರಿಂದ ಮೇವಿನ ಕೊರತೆಯನ್ನು ನೀಗಿಸಬಹುದು. ಬೇಸಿಗೆಯಲ್ಲಿ ಆಕಾಲಿಕ ಮುಂಗಾರು ಮಳೆ ಜೋತೆಗೆ ಸಿಡಿಲಾಘಾತ ಆಗುವ ಸಂಭಾವ ಹೆಚ್ಚಾಗಿರುವುದರಿಂದ ಸಾವು ನೋವು ತಪ್ಪಿಸಲು ರೈತರು ತಮ್ಮ ವೈಯಕ್ತಿಕ ಸುರಕ್ಷತೆ ಜೊತೆಗೆ ಜಾನುವಾರುಗಳನ್ನು ಯಾವುದೇ ಕಾರಣಕ್ಕೂ ಗಿಡ/ಮರಗಳ ಕೆಳಗೆ ನಿಲ್ಲಿಸಬಾರದು. ಎತ್ತರಪ್ರದೇಶದಲ್ಲಿ (ಗುಡ್ಡದಲ್ಲಿ) ಜಾನುವಾರುಗಳನ್ನು ಮೇಯಿಸುತ್ತಿದ್ದರೆ ತಕ್ಷಣ ತಗ್ಗು ಪ್ರದೇಶಕ್ಕೆ ಸ್ಥಳಾಂತರಿಸಬೇಕು. ತಂತಿ ಬೇಲಿ, ವಿದ್ಯುತ್ ಕಂಬ, ಮೊಬೈಲ್/ ಎಲೆಕ್ಟ್ರಿಕಲ್ ಟವರ್ ಮುಂತಾದವುಗಳ ಹತ್ತಿರವು ಇರಬಾರದು. ಅದಾಗಿಯೂ ನೈಸರ್ಗಿಕ ವಿಕೋಪದಿಂದ ಜಾನುವಾರುಗಳು ಮರಣಹೊಂದಿದಲ್ಲಿ ತಕ್ಷಣವೇ ಕಂದಾಯ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಗೆ ಮಾಹಿತಿ ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸುವಂತೆ ಡಾ.ಕೆ.ಎಂ. ಮೋಹನ್ ಕುಮಾರ್, ಉಪ ನಿರ್ದೇಶಕರು , ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕಾರವಾರ, ಉತ್ತರ ಕನ್ನಡ ಜಿಲ್ಲೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top