ಮೂಲ ಕಾಂಗ್ರೆಸ್ ಮತ್ತು ಮೋಹನ ಶೆಟ್ಟರ ಅಭಿಮಾನಿಗಳಲ್ಲಿ ಸಂಭ್ರಮ
ಹೊನ್ನಾವರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರ ರಾಜ್ಯದ ಘಮನ ಸೆಳೆದಿತ್ತು. ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹದಿನೈದಕ್ಕೆ ಏರಿತ್ತು. ಹೆಚ್ಚಿನ ಜನ ಮಾಜಿ ಶಾಸಕಿ ಶಾರದಾ ಶೆಟ್ಟಿ ವಿರುದ್ದ ತಿರುಗಿ ಬಿದ್ದಿದ್ದರು. ಆಗಾಗ ಒಟ್ಟಿಗೆ ಸೇರಿ ಸಭೆ ಮಾಡಿದರು, ಒಳಗೊಳಗೆ ಅವರಲ್ಲೇ ಗುಂಪು ಗಾರಿಕೆ ನಡೆದಿತ್ತು. ಇವರೆಲ್ಲರ ಟಿಕೆಟ್ ಹೋರಾಟದ ನಡುವೆ ನಿವೇದಿತ್ ಆಳ್ವಾ ಟಿಕೆಟ್ ಪಡೆದು ಬಂದಿದ್ದರು. ನಂತರ ಟಿಕೆಟ್ ಆಕಾಂಕ್ಷಿಗಳು ಚೆಲ್ಲಾಪಿಲ್ಲಿ ಆದರೆ, ಶಾರದಾ ಶೆಟ್ಟಿ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರು. ಅಭ್ಯರ್ಥಿ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರು ಕುಮಟಾ ಕ್ಷೇತ್ರ ಅನಾಥವಾಗಿತ್ತು. ಕಾಂಗ್ರೆಸ್ ಕಟ್ಟಿ ಬೆಳೆಸಿದವರಲ್ಲಿ ಕೆಲವರು ಪಕ್ಷಾಂತರಗೊಂಡಿದ್ದರು. ಇನ್ನೂ ಒಂದಿಷ್ಟು ನಾಯಕರು ಪಕ್ಷದಲ್ಲಿ ಇದ್ದರು ಸರಿಯಾದ ನಾಯಕತ್ವದ ಕೊರತೆ ಕಂಡುಬಬದಿತ್ತು. ಇಂತಹ ಸಮಯದಲ್ಲಿ ನಿವೇದಿತ್ ಆಳ್ವಾ ಪರಾಜೀತಗೊಂಡರು ಕ್ಷೇತ್ರದಲ್ಲೆ ಉಳಿದು ಕಾರ್ಯಕರ್ತರ ಸಮಸ್ಯೆ ಆಲಿಸಿ, ಸರಕಾರದ ಮಟ್ಟದಲ್ಲಿ ಆಗುವ ಕೆಲಸ ಮಾಡಿಕೊಡುತ್ತಿದ್ದರು.
ಕ್ಷೇತ್ರದಲ್ಲಿ ನಿವೇದಿತ್ ಆಳ್ವಾ ಸಂಚಾರ ಮಾಡುತ್ತಿದ್ದರು ಕೂಡ ಗ್ರಾಮೀಣ ಪ್ರದೇಶದ ಸಾಮಾನ್ಯ ಕಾರ್ಯಕರ್ತರಿಗೆ ಕಾಂಗ್ರೆಸ್ ನಡುವಿನ ಸಂಪರ್ಕ ಕಡಿತಗೊಳ್ಳಲು ಪ್ರಾರಂಭವಾಗಿತ್ತು. ಕಳೆದ ಮೂರು ದಶಕದಿಂದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಹೊಂದಿದ್ದ ಮೋಹನ ಶೆಟ್ಟರ ಕುಟುಂಬ ಪಕ್ಷದಿಂದ ದೂರ ಉಳಿದಿದ್ದು ಒಂದಿಷ್ಟು ಹಿನ್ನಡೆ ಆಗಿದ್ದು ಸುಳ್ಳಲ್ಲ. ಅವರ ಜೊತೆಗೆ ಕಾಂಗ್ರೆಸ್ ಟಿಕೆಟ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಶಿವಾನಂದ ಹೆಗಡೆ ಕಡತೋಕ ಬಿಜೆಪಿ ಸೇರ್ಪಡೆಗೊಂಡಿದ್ದು ಮತ್ತಷ್ಟು ಹಿನ್ನಡೆ ಆಗಿತ್ತು. ಇದೀಗ ಶಾರದಾ ಶೆಟ್ಟಿ ಪಕ್ಷದಲ್ಲಿ ಮತ್ತೆ ಕ್ರಿಯಾಶೀಲರಾಗುತ್ತಿರುವುದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಮಾಜಿ ಶಾಸಕ ಮೋಹನ ಶೆಟ್ಟರ, ಶಾರದಾ ಶೆಟ್ಟರ ಅಭಿಮಾನಿಗಳಲ್ಲಿ ಸಂತಸ ಉಂಟುಮಾಡಿದೆ.
ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಮೋಹನ ಶೆಟ್ಟರಿಗೆ ಕಾಂಗ್ರೆಸ್ ಮೂರು ಬಾರಿ ಅವಕಾಶ ಮಾಡಿಕೊಟ್ಟಿತ್ತು. ಅವರು ಎರಡು ಬಾರಿ ಸತತವಾಗಿ ಗೆಲುವು ಕಂಡರೆ, ಮೂರನೇ ಬಾರಿ ಕೇವಲ ಇಪ್ಪತ್ತು ಮತದಲ್ಲಿ ಸಹೋದರ ದಿನಕರ ಶೆಟ್ಟಿ ವಿರುದ್ಧ ಸೋಲು ಕಂಡಿದ್ದರು. ಸೋತರು ಕ್ಷೇತ್ರದಲ್ಲಿ ತನ್ನ ಪ್ರಭಾವ ಕಾಯ್ದುಕೊಂಡಿದ್ದರು. ಅವರು ಅಕಾಲಿಕ ಅನಾರೋಗ್ಯದಿಂದ ಮೃತಪಟ್ಟ ನಂತರ ಕಾಂಗ್ರೆಸ್ ಪಕ್ಷ ಅವರ ಪತ್ನಿ ಶಾರದಾ ಶೆಟ್ಟಿಗೆ ಅವಕಾಶ ಕಲ್ಪಿಸಿತ್ತು. ಅವರು ಕೂಡ ಪ್ರಥಮ ಬಾರಿಗೆ ಶಾಸಕರಾಗಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಅದೇ ಅವಧಿಯಲ್ಲಿ ಅವರಿಗೆ ಸರಕಾರ ನಿಗಮದ ಅಧ್ಯಕ್ಷರನ್ನಾಗಿ ಮಾಡಿತ್ತು.
ಕುಮಟಾ ಕ್ಷೇತ್ರದ ಸದ್ಯದ ಪರಿಸ್ಥಿತಿಯಲ್ಲಿ ನಿವೇದಿತ್ ಆಳ್ವಾ ಓಡಾಡಿಕೊಂಡಿದ್ದಾರೆ. ಯಾವುದೇ ಕೆಲಸಕಾರ್ಯ ಆಗಬೇಕಿದ್ದರು ಅವರ ಮಾತೇ ಅಂತಿಮ ಆಗುತ್ತಿದೆ. ಅದರಲ್ಲೂ ಹೈಕಮಾಂಡ್ ಮಟ್ಟದಲ್ಲಿ ಅವರಿಗೆ ಇರುವ ಸಂಪರ್ಕ ಹೆಚ್ಚು ಕೆಲಸ ಮಾಡುತ್ತಿದೆ. ಇದೀಗ ಶಾರದಾ ಶೆಟ್ಟಿ ಮರು ಪ್ರವೇಶವಾಗಿದೆ. ಶಾರದಾ ಶೆಟ್ಟಿಯವರ ಜೊತೆ ಇರುವ ಕಾರ್ಯಕರ್ತರು ಮತ್ತೆ ಕ್ರಿಯಾಶೀಲರಾಗಲಿದ್ದಾರೆ. ಶಾರದಾ ಶೆಟ್ಟಿ ಈ ಎರಡು ಗುಂಪು ಒಟ್ಟಿಗೆ ಕೆಲಸ ಮಾಡಬೇಕಿದೆ. ಹಿಂದೆ ಆಗಿರುವುದನ್ನೆಲ್ಲ ಮರೆತು ಎರಡು ಗುಂಪು ಒಟ್ಟಿಗೆ ಸಾಗಬೇಕಿದೆ. ಶಾರದಾ ಶೆಟ್ಟಿಯವರು ಮಾಜಿ ಸಂಸದೆ ಮಾರ್ಗರೆಟ್ ಆಳ್ವಾರವರ ಬಳಗದಲ್ಲೇ ಗುರುತಿಸಿಕೊಂಡವರು ಕಳೆದ ಚುನಾವಣೆ ಇಬ್ಬರ ನಡುವೆ ಬಿರುಕು ಮೂಡಿಸಿತ್ತು. ಆ ಎಲ್ಲಾ ಮುನಿಸು ಬದಿಗಿಟ್ಟು, ಲೋಕಸಭಾ ಅಭ್ಯರ್ಥಿ ಅಂಜಲಿ ಲಿಂಬಾಳಕರ ಗೆಲುವಿಗೆ ಸಂಘಟಿತರಾಗಬೇಕಿದೆ.
ಡಿಕೆಶಿ ಕರೆ ಮಾಡಿ ಪಕ್ಷಕ್ಕೆ ಸೇರ್ಪಡೆ :
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾಜಿ ಶಾಸಕಿ ಶಾರದಾ ಶೆಟ್ಟಿಯವರಿಗೆ ಕರೆ ಮಾಡಿ ಬೆಂಗಳೂರು ಬರಲು ಹೇಳಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಇರುವುದು ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ಮಾಡಿಯೇ ಪಕ್ಷ ಸೇರ್ಪಡೆ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಹಾಗೆ ನೋಡಿದ್ರೆ ಡಿಕೆಶಿ ಮತ್ತು ಮೋಹನ ಶೆಟ್ಟರ ಕುಟುಂಬದ ನಡುವೆ ಆತ್ಮೀಯ ಬಾಂಧವ್ಯ ಇತ್ತು, ಈ ಹಿಂದೆ ಅವರ ಮಗನ ಮದುವೆಗೆ ಡಿಕೆಶಿ ಬಂದಿದ್ದರು. ಇನ್ನೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಗೃಹಮಂತ್ರಿ ಜಿ. ಪರಮೇಶ್ವರ ಜೊತೆಗೂ ಮೋಹನ ಶೆಟ್ಟರ ಬಾಂಧವ್ಯ ಗಟ್ಟಿ ಆಗಿತ್ತು. ಮೋಹನ ಶೆಟ್ಟರ ನಿಧನದ ನಂತರ ಈ ಬಾಂಧವ್ಯ ಶಾರದಾ ಶೆಟ್ಟಿ ಮತ್ತು ಅವರ ಕುಟುಂಬ ಒಟ್ಟಿಗೆ ಮುಂದುವರಿದಿತ್ತು. ಕಳೆದ ಚುನಾವಣೆಯಲ್ಲಿ ಮಾರ್ಗರೇಟ್ ಆಳ್ವಾ ತನ್ನ ಪುತ್ರನಿಗೆ ಟಿಕೆಟ್ ಕೇಳದೆ ಇದ್ದಲ್ಲಿ ಬಹುತೇಕ ಶಾರದಾ ಶೆಟ್ಟಿಯವರಿಗೆ ಟಿಕೆಟ್ ಸಿಗುತ್ತೆ ಅನ್ನುವ ಚರ್ಚೆ ಕ್ಷೇತ್ರದಲ್ಲಿ ನಡೆದಿತ್ತು. ಇದೀಗ ಡಿಕೆಶಿಯವರೇ ಕರೆದು ಪಕ್ಷ ಮರು ಸೇರ್ಪಡೆ ಮಾಡಿ, ಲೋಕಸಭಾ ಚುನಾವಣೆಯ ಪ್ರಚಾರ ಮಾಡಲು ಹೇಳಿದ್ದು ಅವರ ರಾಜಕಾರಣದ ಎರಡನೇ ಇನ್ನಿಂಗ್ಸ್ ಪ್ರಾರಂಭಗೊಂಡಂತೆ ಆಗಿದೆ.
ಶಾರದಾ ಶೆಟ್ಟಿ ಅಭಿಮಾನಿಗಳಲ್ಲಿ ಸಂಭ್ರಮ :
ಶಾರದಾ ಶೆಟ್ಟಿ ಕಾಂಗ್ರೆಸ್ ನಲ್ಲಿ ಮತ್ತೆ ಸಕ್ರಿಯಗೊಳ್ಳುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಅನೇಕರು ಅವರ ಪಕ್ಷ ಸೇರ್ಪಡೆಯ ಫೋಟೋ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ಜಾಲತಾಣದಲ್ಲಿ ಹರಿಬಿಟ್ಟು ಸಂಭ್ರಮ ಪಡುತ್ತಿದ್ದಾರೆ.
ಅವರ ಜೊತೆಗೆ ಗುರುತಿಸಿಕೊಂಡಿದ್ದ ಅನೇಕ ಮುಖಂಡರಿಗೆ ಅವರ ನಿವೃತ್ತಿ ಘೋಷಣೆ ಮಾಡಿದ ನಂತರ ರಾಜಕೀಯ ಹಿನ್ನಡೆ ಉಂಟುಮಾಡಿತ್ತು. ಹೆಚ್ಚಿನ ಜನ ಮನೆಯಲ್ಲೇ ಇರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನೂ ಕೆಲವರು ಅನಿವಾರ್ಯವಾಗಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಎಲ್ಲರು ಒಟ್ಟಿಗೆ ಹೋಗುವ ಸಮಯಬಂದಿದೆ. ಎಲ್ಲಾ ನೋವನ್ನು ಮರೆತು ಕಾಂಗ್ರೆಸ್ ಪಕ್ಷ ಎಂದು ಒಟ್ಟಿಗೆ ಸಾಗಬೇಕಿದೆ. ಅನೇಕ ಕಾಂಗ್ರೆಸ್ ಮುಖಂಡರಿಗೆ ಕರೆಮಾಡಿ ಮಾತನಾಡಿದಾಗ ಕೆಲವರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಹೀಗೆ ಎಲ್ಲರು ಮುಖಂಡರು ಒಟ್ಟಿಗೆ ಸಾಗಿದರೆ ನಮ್ಮಂತ ಕಾರ್ಯಕರ್ತರಿಗೆ ಕೆಲಸ ಮಾಡಲು ಅನುಕೂಲ ವಾಗುತ್ತಿದೆ ಎಂದು ಹೇಳಿದ್ದಾರೆ. ಒಟ್ಟಾರೆ ಶಾರದಾ ಶೆಟ್ಟಿ ಮರಳಿ ಕಾಂಗ್ರೆಸ್ ನಲ್ಲಿ ಸಕ್ರಿಯಗೊಳ್ಳುತ್ತಿರುವುದು ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಲಿ ಎನ್ನುವುದು ಕಾರ್ಯಕರ್ತರ ಅಂಬೊಣವಾಗಿದೆ.
ಕೆಪಿಸಿಸಿ ಅಧ್ಯಕ್ಷರಿಂದ ತುರ್ತಾಗಿ ಬರುವಂತೆ ಅನಿರೀಕ್ಷಿತ ಕರೆ ಬಂತು, ಅವರ ಆಹ್ವಾನದಂತೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಕಳೆದ ಚುನಾವಣೆಯ ಕೊನೆಕ್ಷಣದಲ್ಲಿ ಟಿಕೆಟ್ ತಪ್ಪಿರುವುದರಿಂದ ಬೇಸರವಾಗಿ ತಟಸ್ತ ಇದ್ದೆ. ಪಕ್ಷ ನನಗೆ ಎರಡು ಬಾರಿ ಅವಕಾಶ ಕೊಟ್ಟು ಶಾಸಕರನ್ನಾಗಿ ಮಾಡಿದೆ. ಮೋಹನ ಶೆಟ್ಟರಿಗೂ ಮೂರು ಬಾರಿ ಟಿಕೆಟ್ ನೀಡಿತ್ತು. ಮುಖ್ಯಮಂತ್ರಿಯವರು, ಕೆಪಿಸಿಸಿ ಅಧ್ಯಕ್ಷರು ಪಕ್ಷ ಸಂಘಟನೆ ಮಾಡುವಂತೆ, ಲೋಕಸಭಾ ಮಹಿಳಾ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ಹೇಳಿದ್ದಾರೆ. ಹೈಕಮಾಂಡ್ ಮುಖಂಡರ ಆದೇಶದಂತೆ ಅಭ್ಯರ್ಥಿ ಪರವಾಗಿ ನನ್ನಿಂದ ಸಾಧ್ಯವಾದಷ್ಟು ಕೆಲಸ ಮಾಡುತ್ತೇನೆ.— ಶಾರದಾ ಶೆಟ್ಟಿ
ಮಾಜಿ ಶಾಸಕಿ
ಮಾಜಿ ಶಾಸಕಿ ಶಾರದಾ ಶೆಟ್ಟಿಯವರು ಕಾಂಗ್ರೆಸ್ ನಲ್ಲಿ ಮತ್ತೆ ಸಕ್ರಿಯಗೊಳ್ಳುತ್ತಿರುವುದು ಪಕ್ಷದ ಬೆಳವಣಿಗೆ ಅನುಕೂಲವಾಗಿದೆ. ಅದರ ಜೊತೆಗೆ ಹಲವು ವರ್ಷದಿಂದ ಅವರೊಟ್ಟಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ನಮ್ಮಂತ ನಿಷ್ಠಾವಂತ ಕಾರ್ಯಕರ್ತರಿಗೆ, ಅದರಲ್ಲೂ ಮಹಿಳಾ ಕಾರ್ಯಕರ್ತರಿಗೆ ಸಂತಸ ಉಂಟುಮಾಡಿದೆ. ಅವರು ಮತ್ತು ಉಳಿದ ಮುಖಂಡರು ಒಟ್ಟಿಗೆ ಪಕ್ಷ ಸಂಘಟನೆ ಮಾಡಬೇಕಿದೆ.– ತಾರಾ ಗೌಡ ಮಾಜಿ ಅಧ್ಯಕ್ಷರು ಜಿಲ್ಲಾ ಮಹಿಳಾ ಕಾಂಗ್ರೆಸ್
ಶಾರದಾ ಶೆಟ್ಟಿಯವರು ಮತ್ತು ಅವರ ಪತಿ ಮೋಹನ ಶೆಟ್ಟರು ಕ್ಷೇತ್ರದಲ್ಲಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಸಹಜವಾಗಿ ಅವರ ಪ್ರಭಾವ ಕ್ಷೇತ್ರದಲ್ಲಿ ಇರುತ್ತದೆ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು ಪಕ್ಷಕ್ಕೆಯಾರೇ ಬಂದರು ಅವರೊಟ್ಟಿಗೆ ಕೆಲಸ ಮಾಡುತ್ತೇವೆ. ಶಾರದಾ ಶೆಟ್ಟಿ ಪಕ್ಷದಲ್ಲಿ ಸಕ್ರಿಯಗೊಂಡಿದ್ದು, ಲೋಕಸಭಾ ಚುನಾವಣೆ ಸಮಯದಲ್ಲಿ ಅನುಕೂಲವಾಗಲಿದೆ.– ಜಗದೀಪ್ ತೆಂಗೇರಿ ಅಧ್ಯಕ್ಷರ ಬ್ಲಾಕ್ ಕಾಂಗ್ರೆಸ್ ಹೊನ್ನಾವರ