Slide
Slide
Slide
previous arrow
next arrow

ಇಳಿವಯಸ್ಸಿನ ಕಲಾವಿದನ ಕೈಯಲ್ಲರಿಳಿದ ‘ಶ್ರೀ ರಾಮಲಲ್ಲಾ’

300x250 AD

ಕಲೆಗೆ ವಯಸ್ಸಿನ ಹಂಗಿಲ್ಲವೆನ್ನುವ ಗುಳ್ಳಾಪುರದ ಸುದರ್ಶನ ಆಚಾರಿ-ಅಕ್ಷಯ ಶೆಟ್ಟಿ ರಾಮನಗುಳಿ

ಯಲ್ಲಾಪುರ: ತಾಲೂಕಿನ ಗುಳ್ಳಾಪುರದ ಖ್ಯಾತ ಕಲಾವಿದ ಸುದರ್ಶನ ಆಚಾರಿ ಅವರ ಕುಂಚದಲ್ಲಿ ರಾಮನಗುಳಿ ಶ್ರೀರಾಮಪಾದುಕಾ ದೇವಸ್ಥಾನದಲ್ಲಿ ಮೂಡಿಬಂದ ಅಯೋಧ್ಯೆ ಶ್ರೀರಾಮಲಲ್ಲಾ ಚಿತ್ರ ನೋಡುಗರ ಗಮನ ಸೆಳೆಯುತ್ತಿದೆ.

ಕಲಾವಿದರಾದ ಸುದರ್ಶನ ಆಚಾರಿ ಇವರು ಮೂಲತಃ ಕುಮಟಾ ತಾಲೂಕಿನ ಚಿತ್ರಗಿಯವರು. ತೀರ ಬಡಕುಟುಂಬದಲ್ಲಿ ಬೆಳೆದು ಬಂದ ಇವರು ಆರ್ಥಿಕ ಸಮಸ್ಯೆಯಿಂದಾಗಿ ಎಸ್.ಎಸ್.ಎಲ್.ಸಿ ಯವರೆಗೆ ಮಾತ್ರ ಶಿಕ್ಷಣವನ್ನು ಪೂರೈಸಲು ಸಾಧ್ಯವಾಯಿತು. ಕಾರವಾರದಲ್ಲಿ ಕೆಲಕಾಲ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಇವರು ಬಳಿಕ ಗುಳ್ಳಾಪುರದಲ್ಲಿ ಆಗಷ್ಟೇ ಪ್ರಾರಂಭಗೊಂಡಿದ್ದ ಹೆಂಚಿನ ಕಾರ್ಖಾನೆಯಲ್ಲಿ ಕೂಲಿಕಾರ್ಮಿಕನಾಗಿ ತಿಂಗಳಿಗೆ 700 ಸಂಬಳಕ್ಕೆ ಕೆಲಸ ಪ್ರಾರಂಭಿಸಿದರು. ಬಿಡುವಿನ ಸಮಯದಲ್ಲಿ ತನ್ನ ತಂದೆಯವರಿಂದ ಬಳುವಳಿಯಾಗಿ ಬಂದಿದ್ದ ಕಲೆಗೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಿದ್ದರು.

ಇವರ ವಯಸ್ಸು 69 ಆಗಿದ್ದರೂ ಕೂಡ ಕಲೆಗೆ ಇವರು ಕೊಡುವ ಸಮಯ, ಶ್ರದ್ಧೆ, ಪ್ರಯತ್ನ ಇಂದಿನ ಯುವಕರನ್ನು ನಾಚಿಸುವಂತಿದೆ. ಎಂತಹ ಕ್ಲಿಷ್ಟಕರವಾದ ಚಿತ್ರಗಳಾದರೂ ಅದನ್ನು ಸರಾಗವಾಗಿ ತಮ್ಮ ಅಪಾರ ಕಲಾಪಾಂಡಿತ್ಯದ ಮೂಲಕ ಚಿತ್ರಿಸುವ ಚಾಕಚಕ್ಯತೆ ಇವರಲ್ಲಿದೆ. ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ಇವರು ಕಲೆಯನೆಂದು ಬಿಟ್ಟುಕೊಟ್ಟಿಲ್ಲ, ಬದಲಾಗಿ ಮುಂದಿನ ಪೀಳಿಗೆಯ ಮಕ್ಕಳು ಕಲೆಯ ಬಗೆಗೆ ಹೆಚ್ಚು ಆಸಕ್ತಿ ಹೊಂದಬೇಕೆಂದು ಮಕ್ಕಳನ್ನು ಪ್ರೋತ್ಸಾಹಿಸುತ್ತಾರೆ. ಸುದರ್ಶನ ಅವರಿಗೆ ಸದಾ ಬೆನ್ನೆಲುಬಾಗಿ ನಿಂತಿರುವವರು ಪತ್ನಿ ಛಾಯಾ ಆಚಾರಿ. ಸಾಮಾನ್ಯವಾಗಿ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುದರ್ಶನ ಆಚಾರಿ ಅವರು ಮುಂಚೂಣಿಯಲ್ಲಿರುವ ಕಾರಣ ಇವರನ್ನು “ಸಾಂಸ್ಕೃತಿಕ ರಾಯಭಾರಿ” ಎಂದು ಕರೆದರೂ ಅತಿಶಯೋಕ್ತಿಯಾಗಲಿಕ್ಕಿಲ್ಲ.

300x250 AD

ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣೇಶನ ಮೂರ್ತಿ ತಯಾರಿಕೆ, ಕೃಷ್ಣಮೂರ್ತಿ ತಯಾರಿಕೆ, ಪೊರ್ಟೇಟ್ ಚಿತ್ರ, ಪೆನ್ಸಿಲ್ ಆರ್ಟ್, ಪೆಬಲ್ ಆರ್ಟ್, ಕಲರ್ ಪೆನ್ಸಿಲ್ ಆರ್ಟ್, ವಾಟರ್ ಕಲರ್ ಪೇಂಟಿಂಗ್, ಥರ್ಮಾಕೋಲ್ ನಿಂದ ವಿವಿಧ ಮಾದರಿಗಳನ್ನು ತಯಾರಿಸುವಲ್ಲಿ ಇವರು ಪರಿಣಿತರು. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶಾಲಾ-ಕಾಲೇಜು ಸಮಾರಂಭಗಳಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ಅದರ ಸಿದ್ಧತೆ ನಡೆಸಲು ವಿದ್ಯಾರ್ಥಿಗಳಿಗೆ ಇವರು ಸಹಾಯ ಮಾಡುತ್ತಾರೆ. ಇದೀಗ ರಾಮನಗುಳಿಯ ಶ್ರೀರಾಮಪಾದುಕಾ ದೇವಸ್ಥಾನದಲ್ಲಿ ಬಿಡಿಸಿರುವ ಶ್ರೀರಾಮಲಲ್ಲಾ ಮೂರ್ತಿಯ‌ ಚಿತ್ರ ಅತ್ಯದ್ಭುತವಾಗಿ ಮೂಡಿಬಂದಿದೆ. ಇವರ ಈ ಚಿತ್ರಕ್ಕೆ ಜನರಿಂದ ಶ್ಲಾಘನೆಯ ಮಾತುಗಳು ಹರಿದುಬರುತ್ತಿವೆ. ರಾಮನವಮಿಯ ಪ್ರಯುಕ್ತ ನಡೆದ ರಾಮನಗುಳಿಯ ರಾಮಪಾದುಕಾ ಜಾತ್ರಾ ಸಮಾರಂಭದ ವೇದಿಕೆಯಲ್ಲಿ ಸುದರ್ಶನ ಆಚಾರಿ ದಂಪತಿಗಳನ್ನು ದೇವಸ್ಥಾನದ ತಂತ್ರಿಗಳಾದ ಗಣಪತಿ ಗಜಾನನ ಹಿರೇ ಗೋಕರ್ಣ ಹಾಗೂ ಸಮಿತಿ ಅಧ್ಯಕ್ಷರಾದ ಗಜಾನನ ಹೆಗಡೆ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಿದರು.

ಯಾವುದೇ ಕಲೆಗೆ‌ ಶ್ರದ್ಧೆ, ಏಕಾಗ್ರತೆ, ನಿರಂತರ ಪ್ರಯತ್ನ ಇದ್ದಾಗ ಮಾತ್ರ ಅದು ಪರಿಪೂರ್ಣವಾಗಿ ಮೂಡಿಬರಲು ಸಾಧ್ಯ. ಕಲೆಯ ಬಗ್ಗೆ ನನಗೆ ನಮ್ಮ‌ ತಂದೆ ಸಚ್ಚಿದಾನಂದ ಆಚಾರಿಯವರೇ ಸ್ಪೂರ್ತಿ. ಅಯೋಧ್ಯೆ ಶ್ರೀರಾಮಲಲಾನ ಚಿತ್ರ ಬಿಡಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಅವಕಾಶಕ್ಕಾಗಿ ಧನ್ಯವಾದ ತಿಳಿಸುವೆ.– ಸುದರ್ಶನ ಆಚಾರಿ
ಖ್ಯಾತ ಕಲಾವಿದರು ಗುಳ್ಳಾಪುರ

ಮುಖ್ಯಾಂಶಗಳು
1) ಸುದರ್ಶನ ಆಚಾರಿ ಎಂಬ ಅದ್ಭುತ ಕಲಾವಿದ
2) 69 ರ ಇಳಿವಯಸ್ಸಿನಲ್ಲೂ ಕಡಿಮೆಯಾಗದ ಉತ್ಸಾಹ
3) ನೋಡುಗರ ಗಮನ ಸೆಳೆಯುತ್ತಿರುವ ಶ್ರೀರಾಮಲಲಾ ಚಿತ್ರ
4) ಪತಿಯ ಕಲೆಗೆ ಬೆನ್ನೆಲುಬಾಗಿ ನಿಂತಿರುವ ಪತ್ನಿ‌ ಛಾಯಾ ಆಚಾರಿ

Share This
300x250 AD
300x250 AD
300x250 AD
Back to top