Slide
Slide
Slide
previous arrow
next arrow

ಏರುತ್ತಿರುವ ಬಿಸಿಲಿನ ಕಾವು, ತರಬಹುದು ಆರೋಗ್ಯಕ್ಕೆ ಅಪಾಯ ನೂರು

300x250 AD

ಕಾರವಾರ: ಗರಿಷ್ಠ ತಾಪಮಾನ, ಉಷ್ಣ ವಾತಾವರಣ, ಬಿಸಿಗಾಳಿ ಎಂದೆಲ್ಲಾ ಕರೆಸಿಕೊಳ್ಳುವ ಕಾಲ ಆರಂಭವಾಗಿದೆ. ಸಾಮಾನ್ಯ ಪ್ರದೇಶದಲ್ಲಿ ಶಾಖದ ಮಟ್ಟವು ವಿಪರೀತ ಏರಿಕೆಯಾಗಿ, ಸಾಮಾನ್ಯ ಉಷ್ಣಾಂಶವು ಗರಿಷ್ಠತೆಗೆ ತಲುಪಿ ತೇವಾಂಶ ಇಲ್ಲದಂತೆ ಮಾಡುವ ವಿಪರೀತ ಪರಿಸ್ಥಿತಿ ವಾತಾವರಣದಲ್ಲಿ ಉಂಟಾದಾಗ ಅದನ್ನು ಬಿಸಿಗಾಳಿ, ಉಷ್ಣ ಗಾಳಿ, ಬೇಸಿಗೆಯ ಝಳ, ಉಷ್ಣ ವಾತಾವರಣ ಅಥವಾ ಸಾಮಾನ್ಯ ಭಾಷೆಯಲ್ಲಿ ಬೇಸಿಗೆ ಎನ್ನುತ್ತಾರೆ. ರಾಜ್ಯದಲ್ಲಿ ಪ್ರಸ್ತುತ ಬೇಸಿಗೆ ಸಮಯದಲ್ಲಿ ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲೂ ಬಿಸಿಯಾದ ಗಾಳಿ, ಶಾಖ ತರಂಗ, ತಾಪಾಘಾತದಿಂದ ಆರೋಗ್ಯದ ಮೇಲೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಅತಿಯಾದ ಉಷ್ಣತೆಯಿಂದ ಸಾಧಾರಣದಿಂದ ತೀವ್ರ ಜ್ವರ, ಗಂಧೆಗಳು, ಕೈ-ಕಾಲು ಹಾಗೂ ಮೊಣಕಾಲು ಊತಗಳು, ಸ್ನಾಯುಗಳ ಸೆಳೆತ, ಪ್ರಜ್ಞೆ ತಪ್ಪುವುದು, ಸುಸ್ತಾಗುವುದು ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಕೆಲವೊಂದು ವ್ಯಕ್ತಿಗಳಲ್ಲಿ ಹೃದ್ರೋಗ ಸಮಸ್ಯೆಗಳು, ಉಸಿರಾಟದ ಸಮಸ್ಯೆಗಳು ಹಾಗೂ ಕಿಡ್ನಿ ಸಮಸ್ಯೆಗಳು, ಪಾರ್ಶ್ವವಾಯು ಕೂಡ ಉಂಟಾಗಬಹುದಾಗಿದೆ. ಇದಲ್ಲದೇ, ತಲೆ ಸುತ್ತುವುದು, ವಾಂತಿಯಾಗುವುದು, ತಲೆನೋವು, ಅತಿಯಾದ ಬಾಯಾರಿಕೆ, ಮೂತ್ರ ವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಹಾಗೂ ಹಳದಿ ಬಣ್ಣದ ಮೂತ್ರ, ಏರು ಗತಿಯ ಹೃದಯದ ಬಡಿತ ಉಂಟಾಗುವ ಅಪಾಯಗಳಿವೆ.

ನವಜಾತ ಶಿಶುಗಳು, ಚಿಕ್ಕ ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು, ಆರೋಗ್ಯ ಸಮಸ್ಯೆಗಳಿರುವವರು, ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರು, ತಂಪಾದ ವಾತಾವರಣವಿರುವ ಪ್ರದೇಶದಿಂದ ಬಿಸಿಯಾದ ವಾತಾವರಣದ ಪ್ರದೇಶಕ್ಕೆ ಭೇಟಿ ನೀಡುವ ಜನರು ತಾಪಾಘಾತಕ್ಕೆ ಹೆಚ್ಚು ತುತ್ತಾಗುವರು.

300x250 AD

ಸಾರ್ವಜನಿಕರು ಬಾಯಾರಿಕೆ ಇಲ್ಲದಿದ್ದರೂ ಸಹ ಹೆಚ್ಚು ನೀರನ್ನು ಆಗಾಗ್ಗೆ ಸೇವಿಸಬೇಕು. ಬಾಯಾರಿಕೆಯು ನಿರ್ಜಲೀಕರಣದ ಲಕ್ಷಣವಾಗಿದೆ.ಪ್ರಯಾಣ ಮಾಡುವ ಸಮಯದಲ್ಲೂ ಕುಡಿಯಲು ನೀರನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಅಗತ್ಯವಾಗಿದೆ. ಮೌಖಿಕ ಪುನರ್ಜಲೀಕರಣ ದ್ರಾವಣ (Oral Rehydration Solution – ORS), ಹಾಗೂ ಮನೆಯಲ್ಲಿಯೇ ಸಿದ್ಧಪಡಿಸಿದ ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ/ಲಸ್ಸಿ, ಹಣ್ಣಿನ ಜ್ಯೂಸ್ ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ.ಈ ಋತುಮಾನದಲ್ಲಿ ಲಭ್ಯವಿರುವ ಹಾಗೂ ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಹಣ್ಣು ಹಾಗೂ ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ಲೆಟೂಸ್, ಎಳೆನೀರುಗಳನ್ನು ಹೆಚ್ಚಾಗಿ ಸೇವಿಸಬೇಕು.
ಶರೀರವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ತಿಳಿ ಬಣ್ಣದ, ಅಳಕವಾದ (loose fitting) ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ.ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭಗಳಲ್ಲಿ ಛತ್ರಿ, ಟೋಪಿ/ಹ್ಯಾಟ್, ಟವೆಲ್ ಅಥವಾ ಇನ್ನಾವುದೇ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿ, ಬಿಸಿಲಿನಿಂದ ರಕ್ಷಣೆ ಪಡೆಯುವುದು ಉತ್ತಮ.ಬಿಸಿಲಿನಲ್ಲಿ ನಡೆಯುವ ಸಂದರ್ಭದಲ್ಲಿ ಪಾದರಕ್ಷೆ / ಚಪ್ಪಲಿ ಅಥವಾ ಶೂಸ್‌ಗಳನ್ನು ಧರಿಸಬೇಕು.
ಸದಾ ಎಚ್ಚರದಿಂದಿರಲು ರೇಡಿಯೋ, ದೂರದರ್ಶನ ಹಾಗೂ ದಿನಪತ್ರಿಕೆಗಳ ಮೂಲಕ ಸ್ಥಳೀಯ ಹವಾಮಾನದ ಮಾಹಿತಿಯನ್ನು ಪಡೆದು, ಅದರಂತೆ ಚಟುವಟಿಕೆಗಳನ್ನು ಯೋಜಿಸುವುದು ಉತ್ತಮ. ಹವಾಮಾನದ ಕುರಿತು ಕಾಲಕಾಲಕ್ಕೆ ಮಾಹಿತಿಯನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜಾಲತಾಣ https://www.ksndmc.org/default.aspx ದಲ್ಲಿ ಮಾಹಿತಿಯನ್ನು ಪಡೆಯಬಹುದು.
ಸಾರ್ವಜನಿಕರು ಸಾಧ್ಯವಾದಷ್ಟು ಒಳಾಂಗಣದಲ್ಲಿರಬೇಕು. ಉತ್ತಮ ಗಾಳಿ ಬೀಸುವ ಹಾಗೂ ತಣ್ಣಗಿರುವ ಪ್ರದೇಶದಲ್ಲಿರಿ. ನೇರವಾಗಿ ಸೂರ್ಯನ ಬೆಳಕು ಹಾಗೂ ಬಿಸಿ ಗಾಳಿಯು ಮನೆಯ ಒಳಗೆ ಬರದಂತೆ ತಡೆಯಲು, ಹಗಲು ಹೊತ್ತಿನಲ್ಲಿ ಕಿಟಕಿಗಳನ್ನು ಪರದೆಗಳಿಂದ ಮುಚ್ಚಿಡಿ. ಹಾಗೂ ತಣ್ಣನೆಯ ಗಾಳಿಯ ಸಂಚಾರಕ್ಕೆ ಅನುಕೂಲವಾಗುವಂತೆ, ರಾತ್ರಿಯ ಹೊತ್ತು ಕಿಟಕಿಗಳನ್ನು ತೆರೆಡಿಡಬೇಕು.
ಹೊರಾಂಗಣ ಚಟುವಟಿಕೆಗಳನ್ನು ಆದಷ್ಟೂ ದಿನದ ತಣ್ಣನೆಯ ಸಮಯದಲ್ಲಿ, ಅಂದರೆ ಬೆಳಗಿನ ಹೊತ್ತು ಅಥವಾ ಸಂಜೆಗೆ ಸೀಮಿತವಿರುವಂತೆ ಬದಲಾಯಿಸಿಕೊಳ್ಳಿ. ಹೊರಾಂಗಣ ಪ್ರದೇಶಗಳಲ್ಲಿ ಆಯೋಜಿಸಲಾಗುವ ಚಟುವಟಿಕೆಗಳು ಪೂರ್ವಾಹ್ನ 11 ಗಂಟೆಯ ಒಳಗೆ ಮುಕ್ತಾಯಗೊಳಿಸುವುದು ಉತ್ತಮ.ಪೂರ್ವಾಹ್ನ 11 ಗಂಟೆಯಿAದ ಸಂಜೆ 4 ಗಂಟೆಯ ಅವಧಿಯಲ್ಲಿ ಹೊರಾಂಗಣ ಸಭೆಗಳು / ಚಟುವಟಿಕೆಗಳು ನಡೆಯುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಬಿಸಿಲಿನಿಂದ ರಕ್ಷಣೆಯನ್ನು ನೀಡಲು ಅಗತ್ಯ ಶಾಮಿಯಾನ/ಪೆಂಡಾಲ್‌ನ ವ್ಯವಸ್ಥೆ ಮಾಡುವುದು.ಉತ್ತಮ ಗಾಳಿಯ (Air circulation) ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವುದು.ಸಭಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡುವುದು.

ತಂಪಾದ ವಾತಾವರಣವಿರುವ ಪ್ರದೇಶದಿಂದ ಬಿಸಿಯಾದ ವಾತಾವರಣದ ಪ್ರದೇಶಕ್ಕೆ ಭೇಟಿ ನೀಡುವ ಜನರು ಬಿಸಿ ಗಾಳಿಯ ಸಂದರ್ಭದಲ್ಲಿ ಸುಮಾರು ಒಂದು ವಾರದ ಅವಧಿಯನ್ನು ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳಲು (acclimatized) ಮೀಸಲಿಡಬೇಕು ಹಾಗೂ ಈ ಅವಧಿಯಲ್ಲಿ ಹೆಚ್ಚು ನೀರನ್ನು ಸೇವಿಸಬೇಕು. ಹಂತ ಹಂತವಾಗಿ ಬಿಸಿಯಾದ ವಾತಾವರಣದಲ್ಲಿ ಚಟುವಟಿಕೆಗಳನ್ನು ನಡೆಸುವುದರಿಂದ ಒಗ್ಗಿಕೊಳ್ಳಲು ಸಾಧ್ಯವಾಗುತ್ತದೆ.
ಪ್ರತ್ಯೇಕವಾಗಿ / ಒಂಟಿಯಾಗಿ ವಾಸಿಸುವ ವೃದ್ಧರು ಅಥವಾ ರೋಗಿಗಳ ಉಸ್ತುವಾರಿ ಹಾಗೂ ಅವರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆಯನ್ನು ದೈನಂದಿನವಾಗಿ ಕೈಗೊಳ್ಳಬೇಕು.ಮನೆಯ ಒಳಾಂಗಣವನ್ನು ತಣ್ಣಗಿರಿಸಲು ಪರದೆಗಳು / ಷಟರ್ ಗಳನ್ನು ಬಳಸಿ ಹಾಗೂ ರಾತ್ರಿಯ ಸಮಯದಲ್ಲಿಕಿಟಕಿಗಳನ್ನು ತೆರೆದಿಡಿ.ಹಗಲು ಹೊತ್ತಿನಲ್ಲಿ ಮನೆಯ ಕೆಳಗಿನ ಮಹಡಿಗಳಲ್ಲಿರುವುದು ಉತ್ತಮ.ಶರೀರವನ್ನು ತಣ್ಣಗಿಡಲು ಫ್ಯಾನ್ ಅಥವಾ ತೇವವಾದ ಬಟ್ಟೆಯನ್ನು ಬಳಸಬಹುದಾಗಿದೆ.
ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನ 12 ಗಂಟೆಯಿAದ 3 ಗಂಟೆಯವರೆಗೆ ಹೊರಹೋಗುವುದನ್ನು ತಪ್ಪಿಸಬೇಕು. ಮಧ್ಯಾಹ್ನದ ಸಂದರ್ಭದಲ್ಲಿ ಶ್ರಮದಾಯಕ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳಬಾರದು. ಚಪ್ಪಲಿ ಧರಿಸದೆ ಹೊರಹೋಗುವ ಅಭ್ಯಾಸವನ್ನು ತಪ್ಪಿಸಿ. ಮಧ್ಯಾಹ್ನದ ಸಮಯದಲ್ಲಿ ಅಡುಗೆ ಮಾಡುವುದು ತಪ್ಪಿಸಿ. ಅಡುಗೆ ಸಿದ್ಧಪಡಿಸುವ ಪ್ರದೇಶದಲ್ಲಿ ಕಿಟಕಿ ಹಾಗೂ ಬಾಗಿಲುಗಳನ್ನು ತೆರೆದಿಡಿ. ಮಧ್ಯಪಾನ, ಟೀ , ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳಿಂದ ದೂರವಿರಿ. ಇಂತಹ ಪಾನೀಯಗಳು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ ಅಥವಾ ಹೊಟ್ಟೆ ನೋವನ್ನು ಉಂಟುಮಾಡುತ್ತವೆ. ಹೆಚ್ಚು ಪ್ರೊಟೀನ್ ಭರಿತವಾದ ಹಾಗೂ ಹಳೆಯದಾದ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಮಕ್ಕಳು ಅಥವಾ ಸಾಕು ಪ್ರಾಣಿಗಳನ್ನು ನಿಲುಗಡೆ ಮಾಡಿರುವ ವಾಹನಗಳಲ್ಲಿ ಬಿಡಬೇಡಿ. ವಾಹನಗಳ ಒಳಾಂಗಣದಲ್ಲಿನ ಹೆಚ್ಚಿನ ತಾಪಮಾನವು ಅಪಾಯಕಾರಿಯಾಗಬಹುದು. ಆದರಿಂದ ಸಾರ್ವಜನಿಕರು ಈ ಕೆಲಸಗಳನ್ನು ಮಾಡಬಾರದು.
ಮಾಲೀಕರು ಹಾಗೂ ಕೆಲಸಗಾರರುಕೆಲಸದ ಸ್ಥಳದಲ್ಲಿ ಕೆಲಸಗಾರರಿಗೆ ಕುಡಿಯಲು ತಣ್ಣನೆಯ ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ಪ್ರತಿ 20 ನಿಮಿಷಗಳಿಗೊಮ್ಮೆ ಒಂದು ಗ್ಲಾಸ್ ಅಥವಾ ಅದಕ್ಕಿಂತ ಹೆಚ್ಚು ನೀರು ಕುಡಿಯುವಂತೆ ಗಮನ ವಹಿಸಬೇಕು.ಕೆಲಸಗಾರರು ನೇರವಾದ ಸೂರ್ಯವಾದ ಬೆಳಕಿನಲ್ಲಿ ಕೆಲಸ ನಿರ್ವಹಿಸದಂತೆ ಎಚ್ಚರ ವಹಿಸಬೇಕು.ಕೆಲಸಗಾರರಿಗೆ ನೆರಳಿನಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ, ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಬಹುದು.ಶ್ರಮದಾಯಕ ಹಾಗೂ ಹೊರಾಂಗಣ ಚಟುವಟಿಕೆಗಳನ್ನು , ತಾಪಮಾನವು ಕಡಿಮೆ ಇರುವ ಸಮಯದಲ್ಲಿ ಅಂದರೆ, ಬೆಳಗಿನ ಅಥವಾ ಸಂಜೆಯ ಸಮಯದಲ್ಲಿ ನಿರ್ವಹಿಸುವಂತೆ ವೇಳಾಪಟ್ಟಿಯನ್ನು ಸಿದ್ಧಗೊಳಿಸಬೇಕು.ಹೊರಾಂಗಣ ಚಟುವಟಿಕೆಗಳ ಸಂದರ್ಭದಲ್ಲಿ ಕೆಲಸಗಾರರಿಗೆ, ಪ್ರತಿ 1 ಗಂಟೆಗೆ 5 ನಿಮಿಷಗಳ ಬಿಡುವನ್ನು ನೀಡಬೇಕು.ರೇಡಿಯೋ, ದೂರದರ್ಶನ ಹಾಗೂ ದಿನಪತ್ರಿಕೆಗಳ ಮೂಲಕ ಸ್ಥಳೀಯ ಹವಾಮಾನದ ಮಾಹಿತಿಯನ್ನು ಪಡೆಯಬೇಕು. ಹವಾಮಾನದ ಇತ್ತೀಚಿನ ಮಾಹಿತಿಗಾಗಿ ಭಾರತದ ಹವಾಮಾನ ಇಲಾಖೆಯ ಜಾಲತಾಣ https://mausam.imd.gov.in/ ದಲ್ಲಿ ಮಾಹಿತಿಯನ್ನು ಪಡೆಯಬಹುದು.ಹೆಚ್ಚುವರಿ ಕೆಲಸಗಾರನ್ನು ನೇಮಿಸಿಕೊಳ್ಳಿ ಅಥವಾ ಕೆಲಸದ ಗತಿಯನ್ನು ಕಡಿಮೆಗೊಳಿಸಿ.ಬದಲಾಗಿರುವ ಹವಾಮಾನಕ್ಕೆ ಎಲ್ಲರೂ ಒಗ್ಗಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ ಸಾಮಾನ್ಯವಾಗಿ ಹೆಚ್ಚಿನ ಉಷ್ಣತೆಗೆ ಹೊಂದಿಕೊಳ್ಳಲು ಒಂದುವಾರ ಅವಧಿಯ ಅವಶ್ಯಕತೆ ಇರುತ್ತದೆ. ಆದ್ದರಿಂದ, ಮೊದಲ ವಾರದಲ್ಲಿ ಪ್ರತಿ ದಿನ 3 ಗಂಟೆಗಳಿಗಿAತ ಹೆಚ್ಚು ಕೆಲಸ ಮಾಡಬಾರದು. ನಂತರಕೆಲಸದ ಅವಧಿಯನ್ನು ಹಂತ ಹಂತವಾಗಿ ಹೆಚ್ಚಿಸಬಹುದು.ಬಿಸಿಯಾದ ಗಾಳಿ ಹಾಗೂ ಉಷ್ಣತೆಯ ಒತ್ತಡದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಲಕ್ಷಣಗಳನ್ನು ಗುರುತಿಸುವಂತೆ,ಕೆಲಸಗಾರರಿಗೆ ತರಬೇತಿ ನೀಡಬೇಕು. ವ್ಯಕ್ತಿಗೆ ತನ್ನಲ್ಲಿನ ಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗದೇ ಇರುವ ಸಂದರ್ಭಗಳು ಹೆಚ್ಚಿರುವುದರಿಂದ,ಜೊತೆಯಲ್ಲಿನ ಕೆಲಸಗಾರರು ಲಕ್ಷಣಗಳನ್ನು ಪತ್ತೆ ಹಚ್ಚಲು ಅನುಕೂಲವಾಗುವಂತೆ “buddy system” ಅನ್ನು ಪ್ರಾರಂಭಿಸಬೇಕು.ಪ್ರಥಮ ಚಿಕಿತ್ಸೆಯನ್ನು ನೀಡಲು ತರಬೇತಿ ಹೊಂದಿರುವವರು ಲಭ್ಯವಿರಬೇಕು ಹಾಗೂ ಬಿಸಿಗಾಳಿ ಮತ್ತು ಉಷ್ಣತೆಯ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಉಂಟಾದ ಸಂದರ್ಭದಲ್ಲಿ ಸ್ಪಂದಿಸಲು ತುರ್ತು ಪ್ರತಿಕ್ರಿಯಾ ಯೋಜನೆಯು (emergency response plan) ಕೆಲಸದ ಸ್ಥಳದಲ್ಲಿ ಲಭ್ಯವಿರಬೇಕು.
ಗರ್ಭಿಣಿಯರು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ನಿಗದಿತ ಆರೋಗ್ಯ ಸಮಸ್ಯೆಗೆ ಔಷಧೋಪಚಾರವನ್ನು ಪಡೆಯುತ್ತಿರುವವರು, ಬಿಸಿಲಿನಲ್ಲಿ ಕಾರ್ಯ ನಿರ್ವಹಿಸುವ ಮುನ್ನ, ತಮ್ಮ ವೈದ್ಯರ ಸಲಹೆಯನ್ನು ಪಡೆಯುವುದು ಅಗತ್ಯವಾಗಿದೆ.ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ತಿಳಿ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ಪ್ಯಾಂಟ್ ಧರಿಸಬೇಕು. ಹಾಗೂ ಸೂರ್ಯನ ಶಾಖದಿಂದ ರಕ್ಷಿಸಿಕೊಳ್ಳಲು ತಲೆಯ ಭಾಗವನ್ನು ಮುಚ್ಚಿಕೊಳ್ಳಬೇಕು.ಬಿಸಿಗಾಳಿ ಮತ್ತು ಉಷ್ಣತೆಯ ಒತ್ತಡದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಕೆಲಸಗಾರರಲ್ಲಿ ಅರಿವು ಮೂಡಿಸಲು ಶಿಬಿರಗಳನ್ನು ಆಯೋಜಿಸಬೇಕು.ತಾಪಮಾನ ಹಾಗೂ ಮುನ್ಸೂಚನೆ ಕುರಿತು ಮಾಹಿತಿ ನೀಡುವ ವ್ಯವಸ್ಥೆಯನ್ನು ಕೆಲಸದ ಸ್ಥಳಗಳಲ್ಲಿ ಅಳವಡಿಸಬೇಕು.ಬಿಸಿಗಾಳಿ ಮತ್ತು ಉಷ್ಣತೆಯ ಒತ್ತಡದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಅರಿವು ಮೂಡಿಸಲು ಹಾಗೂ ಅವುಗಳಿಂದ ರಕ್ಷಿಸಿಕೊಳ್ಳಲು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮಾಲೀಕರು ಹಾಗೂ ಕೆಲಸಗಾರರಿಗೆ ಕರಪತ್ರಗಳನ್ನು ವಿತರಿಸುವುದು ಮತ್ತು ಶಿಬಿರಗಳನ್ನು ಆಯೋಜಿಸಬೇಕು.
ಆರೋಗ್ಯ ಇಲಾಖೆಯು ಬೇಸಿಗೆ ಸಮಯದಲ್ಲಿ ಉಂಟಾಗಬಹುದಾದ ಅರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ಸನ್ನದ್ದವಾಗಿದ್ದು, ಜಿಲ್ಲಾ ಆಸ್ಪತ್ರೆ, ಕಾರವಾರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ತಾಪಾಘಾತ ಹೊಂದುವವರ ಚಿಕಿತ್ಸೆಗೆ ಎಲ್ಲಾ ಅಗತ್ಯ ಸೌಲಭ್ಯಗಳುಳ್ಳ ಪ್ರತ್ಯೇಕ ಬೆಡ್ ಗಳನ್ನು ಮೀಸಲಿರಿಸಲಾಗಿದೆ. ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸೆಗೆ ಬೇಕಾದ ಔಷಧ/ಸಲಕರಣೆಗಳನ್ನು ದಾಸ್ತಾನು ಇಡಲಾಗಿದೆ. ಕ್ಷೇತ್ರ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಸಾರ್ವಜನಿಕರಿಗೆ ತಾಪ ತರಂಗ/ತಾಪಾಘಾತದ ಕುರಿತು ಮಹಿತಿ ನೀಡಿ ಅವುಗಳಿಂದ ರಕ್ಷಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ.
ಬೇಸಿಗೆಯ ಸಮಯದಲ್ಲಿ ಸಾಂಕ್ರಾಮಿಕ ರೋಗಗಳು: ಈಗಾಗಲೇ ರಾಜ್ಯz ಹೆಚ್ಚಿನ ಜಿಲ್ಲೆಗಳಲ್ಲಿ ಹೆಚ್ಚಿದ ಉಷ್ಣತೆಯ ಜೊತೆಗೆ ನೀರಿನ ಅಭಾವವು ಉಂಟಾಗಿದ್ದು, ನಮ್ಮ ಜಿಲ್ಲೆಯಲ್ಲೂ ಕೆಲವೊಂದು ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು ಸಾರ್ವಜನಿಕರು ಕಲುಷಿತ ನೀರನ್ನು ಕುಡಿಯುವುದರಿಂದ ಸಾಂಕ್ರಾಮಿಕ ರೋಗಗಳಾದ ವಾಂತಿಭೇಧಿ,ಕಾಲರಾ,ಟೈಫಾಯ್ಡ್,ಕಾಮಾಲೆ ರೋಗಗಳು ಬರುವ ಸಾಧ್ಯತೆ ಇರುತ್ತದೆಯಾದುದರಿಂದ ಸಾರ್ವಜನಿಕರು ಕುದಿಸಿ ಆರಿಸಿದ ನೀರನ್ನು ಸೇವಿಸುವುದರಿಂದ ಈ ಖಾಯಿಲೆಗಳನ್ನು ತಡೆಯಬಹುದಾಗಿದೆ. ಸಾರ್ವಜನಿಕರಿಗೆ ಸರಬರಾಜು ಆಗುವ ಕುಡಿಯುವ ನೀರನ್ನು ನಿರಂತರವಾಗಿ ಪ್ರತೀ ದಿನ ಒದಗಿಸಲು ಸಾದ್ಯವಾಗದೇ ಇರುವ ಪ್ರದೇಶಗಳಲ್ಲಿ ಅವರುಗಳು ನೀರನ್ನು ಮುಚ್ಚಿಡದೇ ಬ್ಯಾರಲ್/ಡ್ರಮ್ಮುಗಳಲ್ಲಿ ಶೇಖರಿಸಿಟ್ಟಲ್ಲಿ ರೋಗವಾಹಕ ಸೊಳ್ಳೆಗಳ ಉತ್ಪತ್ತಿಯಾಗಿ ಡೆಂಗ್ಯೂ, ಚಿಕುನ್ ಗುನ್ಯಾ ರೋಗಗಳು ಉಲ್ಬಣವಾಗಬಹುದು.ಆದುದರಿಂದ ಸಾರ್ವಜನಿಕರು ನೀರನ್ನು ಸಮರ್ಪಕವಾಗಿ ಮುಚ್ಚಿಡಲು ವಿನಂತಿಸಿದೆ. ಅಂತೆಯೇ ಈ ಸಮಯದಲ್ಲಿ ಅಲ್ಲಲ್ಲಿ ಮಳೆ ಕೂಡಾ ಆಗುವ ಸಾಧ್ಯತೆ ಇದ್ದು ಈ ಮಳೆ ನೀರು ಘನ ತ್ಯಾಜ್ಯಗಳಲ್ಲಿ ನಿಂತು ಸೊಳ್ಳೆ ಉತ್ಪತ್ತಿಯಾಗಬಹುದು.ಆದುದರಿಂದ ಇವುಗಳ ಸೂಕ್ತ ವಿಲೇವಾರಿ ಮಡುವುದೂ ತುಂಬಾ ಅವಶ್ಯಕವಾಗಿದೆ ಹಾಗೂ ಅ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದಾಗಿದೆ ಎಂದು ರಾಷ್ಟ್ರೀಯ ಹವಾಮಾನ ವೈಪರೀತ್ಯ ಹಾಗೂ ಮಾನವ ಆರೋಗ್ಯ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ಕ್ಯಾಪ್ಟನ್ ರಮೇಶ್ ರಾವ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀರಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top