ಶಿರಸಿ:ಯಕ್ಷಗೆಜ್ಜೆ ಸಂಸ್ಥೆಯ ವಾರ್ಷಿಕೋತ್ಸವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಯೋಗದಲ್ಲಿ ನೆಮ್ಮದಿಯ ರಂಗಧಾಮದಲ್ಲಿ ಯಶಸ್ವಿಯಾಗಿ ನೆರವೇರಿತು.ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಅರ್ಥಧಾರಿ ಮಂಜುನಾಥ ಗೊರಮನೆ ಯಕ್ಷಗಾನದಂತಹ ಕಲೆಗಳಿಂದ ಸಮಾಜದಲ್ಲಿ ಸಂಸ್ಕಾರ ಸಂಸ್ಕೃತಿಗಳು ಉಳಿಯಲು ಸಾಧ್ಯ ಎಂದರು. ಅತಿಥಿಗಳಾದ ಹಿರಿಯ ಅರ್ಥಧಾರಿ ಹಾಗೂ ಅಕಾಶವಾಣಿಯ ದಿವಾಕರ ಹೆಗಡೆ ಕೆರೆಹೊಂಡ ಯಕ್ಷಗೆಜ್ಜೆ ಸಂಸ್ಥೆಯು ಯಕ್ಷಗಾನ ಅಭ್ಯಾಸವರ್ಗ ನಡೆಸುತ್ತಿರುವ ಕುರಿತು ಶ್ಲಾಘಿಸಿ ಹೆಚ್ಚೆಚ್ಚು ಕಲಾವಿದರು ರೂಪುಗೊಳ್ಳುವಂತಾಗಲಿ ಎಂದರು.ಯಕ್ಷಗೆಜ್ಜೆಯ ಎಂ.ಕೆ ಹೆಗಡೆ ಗೋಳಿಕೊಪ್ಪ ,ನಿರ್ಮಲಾ ಹೆಗಡೆ , ವಿ.ಪಿ ಹೆಗಡೆ ವೈಶಾಲಿ,ಜಯಶ್ರೀ ಹೆಗಡೆ ಕೊಡೆಮನೆ, ಡಾ. ಆರ್. ಎನ್ ಹೆಗಡೆ ಭಂಡೀಮನೆ. ಪ್ರೊ.ಎಂ. ಎನ್. ಹೆಗಡೆ ಮತ್ತು ಯಕ್ಷಕಲಾವಿದರು ಉಪಸ್ಥಿತರಿದ್ದರು. ನಿರ್ಮಲಾ ಹೆಗಡೆಯವರು ತಮ್ಮ ಯಕ್ಷ ಗುರು ದಿ.ಸುಬ್ರಾಯ ಭಟ್ಟ ಗಡಿಗೆಹೊಳೆಯವರಿಗೆ ಗುರುವಂದನೆಯಾಗಿ ಸಮಗ್ರ ಕಾರ್ಯಕ್ರಮವನ್ನುಅರ್ಪಣೆ ಮಾಡಿದರು.
ವಿದ್ಯಾರ್ಥಿಗಳಿಂದ ಹಿಮ್ಮೇಳ, ಪೂರ್ವರಂಗ ನೃತ್ಯಗಳು ನಂತರ ದೇವಿದಾಸ ವಿರಚಿತ ‘ತಾರಕಾಸುರ ವಧೆ’ ಅಖ್ಯಾನ ಜರುಗಿತು. ನಂತರ ನೆಡೆದ ಸಮಾರೋಪ ಸಮಾರಂಭದಲ್ಲಿ ಯಕ್ಷ ಸಾಧಕರಾಗಿರುವ ಹಿರಿಯ ಮದ್ದಳೆಗಾರ ಶಂಕರ ಭಾಗವತ ಯಲ್ಲಾಪುರ, ಹಿರಿಯ ಭಾಗವತ ಪರವೇಶ್ವರ ಹೆಗಡೆ ಐನಬೈಲ್, ಕಲಾವಿದೆ ಗೀತಾ ಹೆಗಡೆ ಸಾಲ್ಕಣಿ, ಕಲಾ ಪೋಷಕ – ಕಲಾವಿದ ಸತೀಶ ಹೆಗಡೆ ಗೋಳಿಕೊಪ್ಪ ಇವರನ್ನು ಸಂಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿದ್ದ ಸ್ಕೋಡ್ವೇಸ್‌ನ ಶ್ರೀಮತಿ ಸರಸ್ವತಿ ಎನ್. ಸಾಂಧರ್ಬಿಕ ಮಾತನಾಡಿದರೆ ಸಂಮಾನಿತರು ಕೃತಜ್ಞತಾಪೂರ್ವಕ ನುಡಿಗಳನ್ನಾಡಿದರು. ಎಂ.ಕೆ ಹೆಗಡೆ ಗೋಳಿಕೊಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಕ್ಷ ಗೆಜ್ಜೆಯ ರೂವಾರಿ ನಿರ್ಮಲಾ ಹೆಗಡೆ ಗೋಳಿಕೊಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರೆ ಗಿರೀಶ ಹೆಗಡೆ ವಂದಿಸಿದರು.ಸುರೇಶ್ ಹಕ್ಕಿಮನೆ ಹಾಗೂ ಲತಾ ಗಿರಿಧರ ಹೊನ್ನೇಗದ್ದೆ ಸಮಗ್ರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.ನಂತರ ನಡೆದ ಹಲಸನಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಭೀಷ್ಮಪ್ರತಿಜ್ಞೆ ಅಖ್ಯಾನದಲ್ಲಿ ದೇವವ್ರತನಾಗಿ ಗೀತಾ ಹೆಗಡೆ ಸಾಲ್ಕಣಿ ಕಂದರನಾಗಿ ಮಯೂರಿ ಉಪಾಧ್ಯಾಯ ಶಂತನು ರಾಜನಾಗಿ ಸೌಮ್ಯಾ ಹೆಗಡೆ ಸತ್ಯವತಿಯಾಗಿ ನಿರ್ಮಲಾ ಹೆಗಡೆ ಪೈಪೋಟಿಯ ಅಭಿನಯ ಪ್ರದರ್ಶಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಪರಮೇಶ್ವರ ಹೆಗಡೆ ಐನಬೈಲ್,ಗಜಾನನ ಭಟ್ ತುಳಗೇರಿ ,ಮದ್ದಳೆಯಲ್ಲಿ ಶಂಕರ ಭಾಗವತ,ಮಂಜುನಾಥ್ ಹೆಗಡೆ ಕಂಚಿಮನೆ ಚಂಡೆಯಲ್ಲಿ ವಿಘ್ನೇಶ್ವರ ಕೆಸರಕೊಪ್ಪ , ಪ್ರಶಾಂತ ಕೈಗಡಿ ತಮ್ಮ ಸಾಮರ್ಥ್ಯ ಮೆರೆದರು.