Slide
Slide
Slide
previous arrow
next arrow

ತಾಯಿ ಹೊಟ್ಟೆಯಿಂದಲೇ ಹಿಂದುತ್ವ ಕಲಿತಿದ್ದೇವೆ, ಬಿಜೆಪಿಗರ ಹಿಂದುತ್ವ ಬೇಕಿಲ್ಲ: ಡಾ.ಅಂಜಲಿ

300x250 AD

ಹೊನ್ನಾವರ: ಹಿಂದುತ್ವದ ರಕ್ಷಣೆ ಮಾಡುತ್ತೇವೆನ್ನುವ ಬಿಜೆಪಿಗರೇ, ನಾವು ತಾಯಿ ಹೊಟ್ಟೆಯಿಂದಲೇ ಹಿಂದುತ್ವ ಕಲಿತು ಬಂದಿದ್ದೇವೆ. ನಿಮ್ಮ ಹಿಂದುತ್ವದ ಪಾಠ ನಮಗೆ ಬೇಕಿಲ್ಲ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ವಾಗ್ದಾಳಿ ನಡೆಸಿದರು.

ಬಳ್ಕೂರು ಜಿಲ್ಲಾ ಪಂಚಾಯತಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಗರದ್ದು ಕೇವಲ ಕೋಮುವಾದಿ ಶಿಕ್ಷಣ, ಬೆಂಕಿ ಹಚ್ಚುವ ಕೆಲಸ. ಛತ್ರಪತಿ ಶಿವಾಜಿ, ಸಾವಿತ್ರಿಬಾಯಿ ಫುಲೆರಂಥವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವವರು ಕಾಂಗ್ರೆಸ್ಸಿಗರು‌. ಬಿಜೆಪಿಗರು ಕಾಂಗ್ರೆಸ್‌ಗೆ ಬಂದರೂ ಸ್ವಾಗತ, ಬರದಿದ್ದರೂ ಸ್ವಾಗತವಿದೆ. ಕಾಂಗ್ರೆಸ್ ಕುಟುಂಬ ಜಿಲ್ಲೆಯಲ್ಲಿ ಗಟ್ಟಿಯಾಗಿ ನಿಂತಿದೆ. ಬಿಜೆಪಿಗರು ಮೇಲೆ ನೋಡಿ ಮತ ಹಾಕಿ ಎನ್ನುತ್ತಾರೆ. ೧೦ ವರ್ಷದಿಂದ ನೋಡುತ್ತಿದ್ದೇವೆ, ಮೇಲೆ ಏನೂ ಕಾಣಿಸುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ೧೦ ವರ್ಷದಲ್ಲಿ ಮಾಡದ ಕೆಲಸಗಳನ್ನ ಬಿಜೆಪಿಗರು ಈಗ ಮಾಡುತ್ತಾರಾ? ಏನೂ ಮಾಡಲು ಬಾರದ ಪಕ್ಷ ದೇಶದಲ್ಲಿದ್ದರೆ ಅದು ಬಿಜೆಪಿ ಮಾತ್ರ. ೩೦ ವರ್ಷಗಳಲ್ಲಿ ಜಿಲ್ಲೆಯ ಹೆಸರು ಸಂಸತ್‌ನಲ್ಲಿ ಒಂದೇ ಒಂದು ದಿನ ಬಂದಿಲ್ಲ. ಡಾ.ಅಂಜಲಿ ನಿಂಬಾಳ್ಕರ್ ಅವರು ಜಿಲ್ಲೆಯ ಜನರ ಧ್ವನಿಯಾಗಲಿದ್ದಾರೆ. ಅವರಿಗೆ ಮತ ನೀಡಿ ಆರಿಸಿದರೆ ಮುಂದಿನ ಬಾರಿ ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡಲು ಇಲ್ಲಿಗೆ ಬರುತ್ತಾರೆ ಎಂದರು‌.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆದ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ಸಂವಿಧಾನದ ಅಡಿಯಲ್ಲಿ ಸರ್ಕಾರ ನಡೆಯುತ್ತಿದೆ. ಆದರೆ ಸಂವಿಧಾನವನ್ನ ಬಿಜೆಪಿಗರು ಬದಲಿಸುತ್ತೇವೆನ್ನುತ್ತಾರೆ. ಬಿಜೆಪಿ ಹೇಳೋದೊಂದು, ಮಾಡೋದೊಂದು. ಒಂದೇ ಒಂದು ಭರವಸೆಯನ್ನ ಅವರು ಈಡೇರಿಸಿಲ್ಲ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳನ್ನ ಎಲ್ಲರೂ ಸದುಪಯೋಗ ಪಡೆಯುತ್ತಿದ್ದಾರೆ. ದೇಶದ ಭವಿಷ್ಯಕ್ಕಾಗಿ ಕಾಂಗ್ರೆಸ್ ಗೆಲ್ಲಿಸಬೇಕಿದೆ; ನಮ್ಮ ಅಭ್ಯರ್ಥಿ ಡಾ.ಅಂಜಲಿ ಅವರನ್ನ ಆರಿಸಿ ಸಂಸತ್‌ಗೆ ಕಳುಹಿಸಬೇಕಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಬಿಜೆಪಿಯವರು ಇಂದು ಬಿಡುಗಡೆ ಮಾಡಿರುವುದು ಪ್ರಣಾಳಿಕೆಯಲ್ಲ, ಸುಳ್ಳಿನ ಪತ್ರ. ರೈತರ ಆದಾಯ ಡಬಲ್ ಮಾಡುತ್ತೇವೆಂದಿದ್ದ ಬಿಜೆಪಿಗರು ಅವರ ಸಾಲ ಹೆಚ್ಚಿಸಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿದೆ, ರೈತರ ಆತ್ಮಹತ್ಯೆ ನಡೆಯುತ್ತಿದೆ, ಯುವಕರು ನಿರುದ್ಯೋಗಿಗಳಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನ ಕೇಳಲು ಮೋದಿಯವರಿಗೆ ಸಮಯವೂ ಇಲ್ಲ. ಉತ್ತರಪ್ರದೇಶದಲ್ಲಿ ಪ್ರತಿ ಆರು ನಿಮಿಷಕ್ಕೊಂದು ಅತ್ಯಾಚಾರ ಆಗುತ್ತಿದೆ. ಭೇಟಿ ಬಚಾವೋ ಭೇಟಿ ಪಡಾವೋ ಎನ್ನುವ ಮೋದಿಯವರಿಗೆ ನಮ್ಮ ಹೆಣ್ಣುಮಕ್ಕಳ ರಕ್ಷಣೆ ಮಾಡಲಾಗುತ್ತಿಲ್ಲ. ಭವಿಷ್ಯ ಉಜ್ವಲಗೊಳಿಸುತ್ತೇವೆಂದು ಚಂದ್ರ ತೋರಿಸುವ ಕೆಲಸ ಬಿಜೆಪಿಯಿಂದಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

300x250 AD

ಶಿರಸಿ ಶಾಸಕ ಭೀಮಣ್ಣ ನಾಯ್ಕ, ಡಾ.ಅಂಜಲಿ ಗೆಲುವು ನಮ್ಮೆಲ್ಲರ ಗೆಲುವು. ಹಲವಾರು ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಪಡೆದಿರುವ ಕಾಂಗ್ರೆಸ್ ಸರ್ಕಾರವನ್ನ ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕಿದೆ ಎಂದರು‌.

ಸ್ಥಳೀಯ ಮಹಿಳೆಯರಿಂದ ಡಾ.ಅಂಜಲಿ ಅವರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಇದೇವೇಳೆ‌ ಮರಾಠಿ ಸಮುದಾಯದಿಂದ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಪುಷ್ಪಾ ನಾಯ್ಕ, ವೆಂಕಟೇಶ ಹೆಗಡೆ ಹೊಸಬಾಳೆ, ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಮುಂತಾದವರಿದ್ದರು.

ಬಿಜೆಪಿ ಅಭ್ಯರ್ಥಿ ಕಾಗೇರಿ ಮೋದಿ ಮುಖ ನೋಡಿ ಮತ ಕೊಡಿ ಎನ್ನುತ್ತಿದ್ದಾರೆ. ಮುಖ ಚೆನ್ನಾಗಿದ್ದಿದ್ದರೆ ಅವರು ತಮಗೇ ಮತ ನೀಡಿ ಎನ್ನುತ್ತಿದ್ದರು; ಬಹುಶಃ ಅವರ ಮುಖ ಕೆಟ್ಟಿರಬೇಕು.

  • ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ
Share This
300x250 AD
300x250 AD
300x250 AD
Back to top