ಶಿರಸಿ: ಲೋಕಸಭಾ ಚುನಾವಣೆಗೆ ದಿನಾಂಕ ನಿಗಧಿಯಾಗಿ ಪಕ್ಷಗಳ ಅಭ್ಯರ್ಥಿಗಳ ಹೆಸರು ಮುನ್ನಲೆಗೆ ಬಂದು ಘೋಷಣೆಯಾದ ಬೆನ್ನಲ್ಲೆ ಉತ್ತರ ಕನ್ನಡ ಲೋಕಸಭಾ ಅಖಾಡವೂ ಸಹ ರಂಗೇರುತ್ತಿದೆ. ಒಂದೆಡೆ ಕಾಂಗ್ರೆಸಿನಿಂದ ಈ ಬಾರಿ ಹೊಸ ಮುಖ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಗೆ ಮಣೆ ಹಾಕಲಾಗಿದ್ದು, ಬಿಜೆಪಿಯಿಂದ ಹಾಲಿ ಸಂಸದ ಅನಂತಕುಮಾರ ಹೆಗಡೆಗೆ ಕೋಕ್ ನೀಡಿ ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಅವಕಾಶ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಎರಡೂ ಪಕ್ಷದಲ್ಲಿಯೂ ಭಿನ್ನಮತ ಸ್ಫೋಟಗೊಂಡಿದ್ದು, ಅತ್ತ ರವೀಂದ್ರ ನಾಯ್ಕ ಹೆಸರು ತೀವ್ರವಾಗಿ ಕೇಳಿಬಂದಿದ್ದು, ಜನರಿಂದ ಹೆಚ್ಚಿನ ಒಲವೂ ಸಹ ವ್ಯಕ್ತವಾಗಿತ್ತು. ಇನ್ನು ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಬಹಳ ದೊಡ್ಡದೇ ಇತ್ತು. ಆದರೆ ಪಕ್ಷ ಅಂತಿಮವಾಗಿ ಅಭ್ಯರ್ಥಿಯಾಗಿ ಹೆಸರು ಘೋಷಣೆ ಮಾಡಿರುವ ಬೆನ್ನಲ್ಲೇ ಕೆಲವರಿಂದ ತೀವ್ರ ವಿರೋಧಗಳೂ ಸಹ ವ್ಯಕ್ತವಾಗುತ್ತಿದೆ. ಕಾಗೇರಿ ಗೆಲುವಿಗೆ ಅನಂತಕುಮಾರ ಬಣ ಕೈಜೋಡಿಸುವುದು ಅನುಮಾನವಾಗಿದ್ದು, ಅತ್ತ ಹೆಬ್ಬಾರ್ ಸಹ ಹಿಮ್ಮುಖವಾಗಿ ನಿರಾಸೆ ಮೂಡಿಸಿದ್ದಾರೆ.
ಲೋಕಸಭಾ ಅಖಾಡದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ರಾಘವೇಂದ್ರ ಭಟ್ಟ:
ಇದೀಗ ಉತ್ತರ ಕನ್ನಡ ಲೋಕಸಭಾ ಚುನಾವಣೆಗೆ ಹೊಸಮುಖ, ಯುವ ಮುಂದಾಳು, ಖ್ಯಾತ ಉದ್ಯಮಿ ರಾಘವೇಂದ್ರ ಭಟ್ಟ, ಹಳಕಾರ್ ಸ್ವತಂತ್ರವಾಗಿ ಸ್ಪರ್ಧಿಸಲು ಅಣಿಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಮೂಲತಹಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಳಕಾರ್ ಗ್ರಾಮದವರಾಗಿರುವ ರಾಘವೇಂದ್ರ ಭಟ್ಟ, ತಮ್ಮ ಶಿಕ್ಷಣದ ನಂತರದಲ್ಲಿ ಉದ್ಯಮದೆಡೆಗೆ ದಾಪುಗಾಲಿಟ್ಟರು. ತೀವ್ರ ಪ್ರಯತ್ನ ಮತ್ತು ಜನಾನುರಾಗಿ ವ್ಯಕ್ತಿತ್ವದ ಕಾರಣಕ್ಕೆ ಕಡಿಮೆ ಸಮಯದಲ್ಲಿಯೇ ಉದ್ಯಮ ಇವರ ಕೈ ಹಿಡಿಯಿತು. ಉದ್ಯಮದ ಜೊತೆಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ರಾಘವೇಂದ್ರ ಭಟ್ಟ, ತಮ್ಮ ಹಿತೈಷಿ ಹಾಗು ಸಹಕಾರಿಗಳ ಒತ್ತಾಸೆಯ ಮೇರೆಗೆ ಪ್ರಸ್ತುತ ಉತ್ತರ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆಯನ್ನು ತೋರಿಸುವ ಉತ್ಸಾಹದಲ್ಲಿ ಇದ್ದಾರೆ.
ಪ್ರಖರ ಹಿಂದುತ್ವದ ಅಖಾಡವೆಂದೇ ಗುರುತಿಸಿಕೊಂಡಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಿಂದುತ್ವದ ವಿಚಾರದೊಂದಿಗೆ ಅಭಿವೃದ್ಧಿಗೆ ಪೂರಕವಾದ ಆಶಯ, ಕನಸುಗಳನ್ನು ಹೊತ್ತಿರುವ ರಾಘವೇಂದ್ರ ಭಟ್ಟ ಸ್ಪರ್ಧೆ ಜಿಲ್ಲಾ ಚುನಾವಣಾ ಕಣದಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.