Slide
Slide
Slide
previous arrow
next arrow

ಏ.10ಕ್ಕೆ ಕೊಂಡ್ಲಿ ಕಾಳಮ್ಮ ಗುಡಿಯಲ್ಲಿ ನಿಧಿ-ಕುಂಭ ಸ್ಥಾಪನೆ: ವಿವಿಧ‌ ಧಾರ್ಮಿಕ ಕಾರ್ಯಕ್ರಮ

300x250 AD

ಸಿದ್ದಾಪುರ: ಪಟ್ಟಣದ ಕೊಂಡ್ಲಿಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಕಾಳಿಕಾ ಭವಾನಿ (ಕಾಳಮ್ಮ) ದೇವಾಲಯದಲ್ಲಿ ಏ.10ರಂದು ಪ್ರಧಾನಗುಡಿಯ ಗರ್ಭಗೃಹದಲ್ಲಿ ನಿಧಿ-ಕುಂಭ ಸ್ಥಾಪನೆ ನೆರವೇರಲಿದೆ ಎಂದು ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಜೈವಂತ ಶಾನಭಾಗ ಹೇಳಿದರು.

ಕೊಂಡ್ಲಿ ಕಾಳಿಕಾ ಭವಾನಿ ದೇವಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 500ಕ್ಕೂ ಹೆಚ್ಚು ವರ್ಷಗಳ ಪ್ರಾಚೀನತೆಯನ್ನು ಹೊಂದಿರುವ ವಿಶಿಷ್ಠ ವಿನ್ಯಾಸದ ಮೂರ್ತಿಯ ಪ್ರತಿರೂಪದಂತೆ ನೂತನ ಕಾಳಮ್ಮನ ವಿಗ್ರಹವನ್ನು ಹಾಗೂ ಪರಿವಾರ ದೇವರುಗಳ ವಿಗ್ರಹಗಳನ್ನು ನೂತನವಾಗಿ ನಿರ್ಮಾಣ ಮಾಡಿರುವ ಭವ್ಯ ಮಂದಿರದಲ್ಲಿ ಪ್ರತಿಷ್ಠಾಪನೆ ನಡೆಯಲಿದ್ದು ಇದಕ್ಕೂ ಪೂರ್ವದಲ್ಲಿ ಪ್ರಧಾನಗುಡಿಯ ಗರ್ಭಗೃಹದಲ್ಲಿ ನಿಧಿ-ಕುಂಭ ಸ್ಥಾಪನೆ ಅಪರೂಪದ ಕಾರ್ಯಕ್ರಮ ನಡೆಯಲಿದೆ. ಐದು ಹಾಗೂ ಹತ್ತು ಗ್ರಾಂ ಬೆಳ್ಳಿ ನಾಣ್ಯವನ್ನು ನಿಧಿ-ಕುಂಬದಲ್ಲಿ ಹಾಕಲಾಗುವುದು. ಈ ಪುಣ್ಯ ಕಾರ್ಯಕ್ರಮದಲ್ಲಿ ಎಲ್ಲ ಭಕ್ತರಿಗೂ ಅವಕಾಶ ನೀಡಲಾಗುತ್ತದೆ.
ದೇವಾಲಯವನ್ನು ವಿ. ಶ್ರೀನಿವಾಸ ಭಟ್ಟ ಮಂಜುಗುಣಿ ಅವರ ಮಾರ್ಗದರ್ಶನದಲ್ಲಿ ಆಗಮಶಾಸ್ತ್ರದಂತೆ ನಿರ್ಮಾಣ ಮಾಡಲಾಗಿದೆ. ದೇವಾಲಯದ ವಿನ್ಯಾಸವನ್ನು ಅರುಣ ನಾಯಕ್ ಶಿರಸಿ ರಚಿಸಿದ್ದಾರೆ. ದೇವಾಲಯವನ್ನು ಸುಮಾರು ಒಂದು ಕೋಟಿ ರೂಗಳಲ್ಲಿ ನಿರ್ಮಾಣಮಾಡಲಾಗಿದ್ದು ಇನ್ನು 25ರಿಂದ 30ಲಕ್ಷ ರೂಗಳ ಕಾಮಗಾರಿ ನಡೆಯಬೇಕಾಗಿದೆ. ಮೇ.1ರಿಂದ 4ರವರೆಗೆ ವಿವಿಧ ದಾರ್ಮಿಕ ಕಾರ್ಯಕ್ರಮದೊಂದಿಗೆ ನೂತನ ದೇವಾಲಯದ ಸಮರ್ಪಣೆ ಹಾಗೂ ಶ್ರೀ ಕಾಳಿಕಾ ಭವಾನಿ (ಕಾಳಮ್ಮ) ದೇವಿಯ ಹಾಗೂ ಪರಿವಾರ ದೇವತೆಗಳ ನೂತನ ವಿಗ್ರಹಗಳ ಪ್ರತಿಷ್ಠಾಪನೆ, ಅಷ್ಠಬಂಧ-ಬ್ರಹ್ಮಕಲಶ ಮಹೋತ್ಸವ, ಪ್ರಾಣಪ್ರತಿಷ್ಠೆ-ಜೀವಕುಂಭಾಭಿಷೇಕ ನೆರವೇರಲಿದೆ ಎಂದು ಹೇಳಿದರು.
ದೇವಾಲಯದ ಆಡಳಿತ ಮಂಡಳಿ ಗೌರವಾಧ್ಯಕ್ಷ ಜಿ.ಜಿ.ಭಟ್ಟ ಹೆಗ್ಗಾರಳ್ಳಿ ಮಾತನಾಡಿ ದೇವಾಲಯದ ನಿರ್ಮಾಣಕ್ಕೆ ಗ್ರಾಮಸ್ಥರ ಸಹಕಾರ ಉತ್ತಮವಾಗಿ ದೊರಕುತ್ತಿದೆ. ನೂತನ ಕಾಳಮ್ಮನ ವಿಗ್ರಹ ನಿರ್ಮಾಣಕ್ಕೆ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸಿದ್ದಾರೆ. ಸರ್ಕಾರದ ಯಾವುದೇ ಅನುದಾನವನ್ನು ಪಡೆಯದೇ ಭಕ್ತರ ಹಾಗೂ ದಾನಿಗಳ ಸಹಕಾರದಿಂದ ಎಲ್ಲ ಕೆಲಸವೂ ನಡೆಯುತ್ತಿದೆ ಎಂದು ಹೇಳಿದರು.
ಪ್ರಭಾಕರ ಕೊಂಡ್ಲಿ, ನೀಲಕಂಠ ಕಿಂದ್ರಿ, ರಾಮಚಂದ್ರ ನಾಯ್ಕ, ಶ್ರೀಕಾಂತ ಮಡಿವಾಳ, ಅನೀಲ್ ದೇವನಳ್ಳಿ, ಗುರುರಾಜ ಶಾನಭಾಗ, ನರಹರಿ ಡೋಂಗ್ರೆ ಇತರರಿದ್ದರು.

300x250 AD
Share This
300x250 AD
300x250 AD
300x250 AD
Back to top