Slide
Slide
Slide
previous arrow
next arrow

ಬದಲಾಗಬೇಕಿದೆ ನಮ್ಮ ಯುವಕರ ಆಹಾರ ಪದ್ದತಿ, ಭೋಜನ ಕ್ರಮ

300x250 AD

ಡಾ.ಕೋಮಲಾ ಭಟ್ಟ್‌ ನಿವೃತ್ತ ಪ್ರಾಚಾರ್ಯರು

‘ಊಟ ಬಲ್ಲವನಿಗೆ ರೋಗ ಇಲ್ಲ’ ಎಂಬ ಗಾದೆಯ ಮಾತನ್ನು ಎಲ್ಲರೂ ಬಲ್ಲರು.ವೈದಿಕ ಸಂಪ್ರದಾಯದಲ್ಲಿ ಉಪನಯನ ವಿಧಿಯಲ್ಲಿ ಗಂಡುಮಕ್ಕಳಿಗೆ ಭೋಜನ ವಿಧಿಯನ್ನು ಕಲಿಸಲಾಗುತ್ತದೆ. ಲಕ್ಷಗಟ್ಟಲೆ ಖರ್ಚು ಮಾಡಿ ಬಂಧು ಭಾಂದವರನ್ನು ಕರೆದು ಅಥವಾ ದೇವರ ಸನ್ನಿಧಿಯಲ್ಲಿ ಉಪನಯನ ಮಾಡಲಾಗುತ್ತದೆ.
ಭೋಜನವೆಂಬುದು ಒಂದು ಯಜ್ಞರೂಪ. ಪಶು ಪಕ್ಷಿಗಳಂತೆ ಆಹಾರವನ್ನು ಎಲೆ ಅಥವ ತಟ್ಟೆಯಲ್ಲಿ ಹಾಕಿದೊಡನೇ ತಿನ್ನಲು ಪ್ರಾರಂಭಿಸುವಂತಿಲ್ಲ. ಊಟವನ್ನು ಒಂದು ಯಜ್ಞ ಎಂದು ಭಾವಿಸಿ ಮತ್ತು ಎಲ್ಲರೂ ಭೋಜನವನ್ನು ಯಜ್ಞದಂತೆ ಆಚರಿಸಿದರೆ ದೇಹದ ಮತ್ತು ಮನಸ್ಸಿನ ಆರೋಗ್ಯ, ಭಾಗ್ಯ ರೂಪದಲ್ಲಿ ನಮ್ಮನ್ನು ರಕ್ಷಿಸುತ್ತದೆ ಎಂದು ಸನಾತನ ಕಾಲದಿಂದಲೂ ಭಾರತೀಯರ ನಂಬಿಕೆಯಾಗಿತ್ತು. ನಾವು ಚಿಕ್ಕವರಾಗಿದ್ದಾಗ ಸ್ನಾನ ಮಾಡಿ ಮನೆಯ ಜನರೆಲ್ಲಾ ಒಟ್ಟಿಗೆ ಊಟಕ್ಕೆ ಕುಳಿತಾಗ ಬಡಿಸುವುದರ ಒಳಗೆ ಬಾಳೆ ತೊಳೆದು ಕ್ರಮಬದ್ದವಾಗಿ ದೊಡ್ಡವರು ಬಡಿಸಲು ಪ್ರಾರಂಬಿಸಿದ ಮೇಲೆ ಮಕ್ಕಳು ಹರೇ ರಾಮ ಮಂತ್ರವನ್ನು ಪಠಿಸಬೇಕಿತ್ತು. ನನ್ನಮ್ಮ ಹೇಳಿದ ಮಾತು ಇಂದಿಗೂ ನೆನಪಿದೆ ಜಠರಾಗ್ನಿ ಒಂದು ಅಗ್ನಿಕುಂಡ. ಹುತವಾಗುತ್ತದೆ ಎಲ್ಲವೂ ಅಲ್ಲಿ ಎಂದು. ಆದರೆ ಚಿಕ್ಕವಳಿದ್ದಾಗ ಒಮ್ಮೆ ಹಲಸಿನ ಹಣ್ಣಿನ ಬೀಜ ನುಂಗಿದಾಗ ಇನ್ನೊದು ವಾರದಲ್ಲಿ ಬೀಜ ಮೊಳಕೆ ಒಡೆದು ಗಿಡವಾಗಿ ಪಂಚೇಂದ್ರಿಯಗಳಿಂದ ಹೊರ ಬರುತ್ತದೆ ಎಂಬ ಅಮ್ಮನ ಮಾತು ಮನಸ್ಸಿನಲ್ಲಿ ಇಂದಿಗೂ ಕೂತುಹೋಗಿದೆ.

ಇಂದಿನ ಯುವಕರ ಆಹಾರ ಪದ್ದತಿ:
ಇಂದಿನ ಯುವಕರ ಆಹಾರ ಪದ್ದತಿಯಲ್ಲಿ ಯಾವುದೇ ವೈಜ್ಞಾನಿಕತೆ ಉಳಿದಿಲ್ಲ. ಉಪನಯನ ಮುಗಿಸಿದವರೂ ಒಂದು ವಾರ ಹೇಳಿಕೊಟ್ಟಂತೇ ಕಷ್ಟಪಟ್ಟು ಊಟಮಾಡುತ್ತಾರೆ. ನಂತರ ಹಸಿವೆಗೆ ಊಟ. ನಿಂತು ಕೂತು,ಮಲಗಿ,ಟಿವಿ ನೋಡುತ್ತಾ, ತಿರುಗಾಡುತ್ತಾ ಊಟ ಮಾಡುತ್ತಾರೆ. ಸಮಯ ಎಷ್ಟಾದರೂ ಸರಿ . ಹೆಚ್ಚಿನವರು ಲ್ಯಾಪ್‌ಟಾಪ್‌ ಹಿಡಿದು, ಮೊಬೈಲ್ ಹಿಡಿದು ಅನ್ಯ ಮನಸ್ಕರಾಗಿ ತಿನ್ನುತ್ತಾರೆ. ಮನೆಯ ತಿಂಡಿಗಿಂತ ಹೊರಗಡೆಯ ಕುರುಕಲು-ಪರಕಲು ತಿಂಡಿಗೆ, ರಸ್ತೆ ಬದಿಯ ಚಾಟ್ಸ್‌ಗಳಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಸಾಂಪ್ರದಾಯಿಕ ಅಡಿಗೆ ಕ್ರಮ ಸಾವಕಾಶವಾಗಿ ಮೂಲೆ ಗುಂಪಾಗುತ್ತಿದೆ. ನಾವು ತಿನ್ನುವ ಆಹಾರದ ರುಚಿಗೆ ಅತಿ ಮಹತ್ವ ಕೊಡಲಾಗುತ್ತಿದೆ. ಸಸ್ಯಗಳ ಬಳಕೆ ಕಡಿಮೆಯಾಗಿ ಪ್ಯಾಕ್ಡ್ ಆಹಾರ ಪದಾರ್ಥಗಳು ಎಲ್ಲೆಲ್ಲೂ ದೊರೆಯುತ್ತಿವೆ. ಚಾಟ್ಸ್‌ಗಳು ಯುವಕರನ್ನು ಅತಿ ಹೆಚ್ಚು ಆಕರ್ಷಿಸುತ್ತಿದೆ. ಶೈತ್ಯಾಗಾರದಲ್ಲಿ ಇಟ್ಟ ಆಹಾರಕ್ಕೆ ಹೆಚ್ಚಿನ ಬೇಡಿಕೆ. ಬೇಕರಿ ಆಹಾರಗಳಿಗೆ ಅತಿ ಬೇಡಿಕೆ.ಆಯಾ ಭಾಗಗಳಲ್ಲಿ ನಿಸರ್ಗದಲ್ಲಿ ಕಾಲಕಾಲಕ್ಕೆ ಲಭ್ಯವಿರುವ ಹಸಿರು ಸಸ್ಯಗಳು ಅವುಗಳ ತಂಬುಳಿ, ಕಾಡಲ್ಲಿ, ನಾಡಲ್ಲಿ ಬೆಳೆಯುವ ,ಉಪಯೋಗಿಸುವ ಹಲವಾರು ಕಾಯಿಪಲ್ಲೆಗಳು ಯುವಕರಿಗೆ ಗೊತ್ತೇಇರದು. ಕರಿದ ಪದಾರ್ಥಗಳ ವ್ಯಾಮೋಹ ಅಧಿಕ. ಕುಡಿತದ ಚಟ ಹೆಚ್ಚಾಗುತ್ತಿದೆ. ಪಾರ್ಟಿ ಸಂಸ್ಕೃತಿ ,ಡ್ರಗ್ಸ್,ಸಿಗರೇಟ್ ಯುವಕರನ್ನು ಬಲಹೀನರನ್ನಾಗಿಸಿದೆ. ಕುಂತಲ್ಲೇ ಕೆಲಸ ಬೊಜ್ಜನ್ನು ಹೆಚ್ಚಿಸುತ್ತಿದೆ. ವ್ಯಾಯಾಮದ ಕೊರತೆ, ಆಕರ್ಷಣೆಗಾಗಿ ಅತಿಯಾದ ಜಿಮ್‌ ಬಳಕೆ ಅನಾಹುತಕ್ಕೆ ಕಾರಣವಾಗಿಸುತ್ತಿದೆ. ಯಾರಿಗೂ ಸಾಂಪ್ರದಾಯಿಕ ಪದ್ದತಿಗಳ ಅನುಸರಿಸುವ ಸಮಯವೂ ಇಲ್ಲ ಆಸಕ್ತಿಯೂ ಕಡಿಮೆಯಾಗುತ್ತಿದೆ. ಎಲ್ಲ ಯುವಕರೂ ಕೆಟ್ಟು ಕೂತಿದ್ದಾರೆ ಎಂದರ್ಥವಲ್ಲ. ೧೦೦ ಕ್ಕೆ ೯೦ ರಷ್ಟು ಜನರ ಮನಸ್ಥಿತಿ ಹೇಗೆಂದರೆ ಹೊಟ್ಟೆ ತುಂಬಲು, ಬಾಯಿ ರುಚಿಗೆ ಊಟ. ಯಾವುದೇ ಅಡ್ಡ ಪರಿಣಾಮಗಳ ಚಿಂತೆಯಿಲ್ಲ. ರುಚಿ ಹೆಚ್ಚಿಸಲು ಬಳಸುವ “ಟೇಸ್ಟ್ ಮೇಕರ್‌” ವಿಷಕಾರಿ ಬಣ್ಣಗಳ ಬಳಕೆ ರಾಸಾಯನಿಕ ಪದಾರ್ಥಗಳನ್ನು ಹೊಂದಿದ್ದು ಅದ್ಯಾವುದರ ಪರಿವೆಇಲ್ಲದಂತೇ ಎಗ್ಗಿಲ್ಲದೇ ಆಹಾರಗಳಲ್ಲಿ ಬಳಕೆಯಾಗುತ್ತಿದೆ.

ಭೋಜನ ಕ್ರಮ ಹೇಗಿರಬೇಕು?
ನಮ್ಮ ವೈದಿಕ ಚಿಂತನೆಯಲ್ಲಿ ಯಜನ ಕ್ರಿಯೆಯ ಪರಿಕಲ್ಪನೆಯಿದೆ. ಯಜ್ಞವೆಂಬುದು ಕೇವಲ ಅಗ್ನಿಕುಂಡದಲ್ಲಿ ಗೈಯ್ಯುವ ಹವಿಸ್ಸಿಗೆ ಮಾತ್ರ ಸೀಮಿತವಲ್ಲ. ನಮ್ಮ ದೇಹದಲ್ಲಿ ಅಂತರ್ಗತವಾಗಿರುವ ಪ್ರಾಣ, (ಪ್ರಾಣವು ಸೂರ್ಯ ಅಥವಾ ಅಗ್ನಿಯ ಶಕ್ತಿ. ಈ ಜ್ವಾಲೆ ಮೇಲ್ಮುಖವಾಗಿ ಹರಿಯುವಂತಾದ್ದು. ಪ್ರಾಣವಾಯುವಿನ ಸ್ಥಾನ ಶ್ವಾಸಕೋಶ) ಅಪಾನ (ಅಪಾನ ವಾಯುವು ಚಂದ್ರನ ಶೀತಲ ಶಕ್ತಿ. ಇದು ದೇಹವನ್ನು ಹೊರಗಿನಿಂದ ರಕ್ಷಿಸುತ್ತದೆ. ಇದು ಗುರುತ್ವಾಕರ್ಷಣೆಯೊಂದಿಗೆ ಜತೆಗೂಡಿದೆ,) ವ್ಯಾನ, (ಚಲನೆಯ ಶಕ್ತಿಯೇ ವ್ಯಾನ ವಾಯು. ಇದು ಐಚ್ಚಿಕ ಮತ್ತು ಅನೈಚ್ಚಿಕ ಮಾಂಸಖಂಡಗಳ ಸಂಕುಚನೆ ಮತ್ತು ವಿಕಸನೆಗೆ ಕಾರಣ ವಾದ ವಾಯು.) ಉದಾನ, (ವಾಯುವು ಧ್ವನಿಪೆಟ್ಟಿಗೆಯ ಮೇಲ್ಭಾಗದ ಆಧಿಪತ್ಯವನ್ನು ಹೊಂದಿದೆ. ಈ ವಾಯುವಿನ ಸಹಾಯದಿಂದಲೇ ನಮ್ಮ ವಿಶೇಷವಾದ ಒಳಗಿನ ಭಾವದ ಅರಿವಾಗುವುದು (Intution) ಕುಂಡಲಿನೀ ಸೂಕ್ಷ್ಮ ದೇಹದಲ್ಲಿ ಮೇಲ್ಭಾಗದ ಚಲನೆಗೆ ಸಹಕರಿಸುವುದೇ ಈ ವಾಯು.)ಸಮಾನ (ಶರೀರದ ಮಧ್ಯ ಭಾಗವು ಸಮಾನ ವಾಯುವಿನ ಸ್ಥಾನ ಆಗಿದೆ. ಪ್ರಾಣ ಮತ್ತು ಆಹಾರವನ್ನು ಹೀರಿಕೊಳ್ಳುವುದೇ ಅಲ್ಲದೆ ಆಹಾರದ ಜೀರ್ಣಕ್ರಿಯೆಯಲ್ಲೂ ಸಹಕರಿಸುತ್ತದೆ) ಈ ಪಂಚಪ್ರಾಣಗಳಿಗೆ ಶಕ್ತಿಯನ್ನು ತುಂಬಲು, ಯಾಗಕುಂಡದಲ್ಲಿ ಮಾಡುವ ಯಜ್ಞದಂತೆ ಭೋಜನವೂ ಒಂದು ಯಜ್ಞವಾಗಿದೆ. ಈ ಕಾರಣದಿಂದಲೇ ಅದು ‘ಪ್ರಾಣಾಗ್ನಿಹೋತ್ರ’ವೆಂದು ಕರೆಯಲ್ಪಡುತ್ತದೆ.
ಅನ್ನಪ್ರಾಶನ ಮಾಡುವಾಗ ಓಂ ಪ್ರಾಣಾಯ ಸ್ವಾಹಾ ||ಓಂ ಅಪಾನಾಯ ಸ್ವಾಹಾ || ಓಂ ವ್ಯಾನಾಯ ಸ್ವಾಹಾ || ಓಂ ಉದಾನಾಯ ಸ್ವಾಹಾ || ಓಂ ಸಮಾನಾಯ ಸ್ವಾಹಾ || (ಅಗುಳು ನುಂಗುವುದು) ಈ ಮೇಲಿನ ಮಂತ್ರದಿಂದ
ಒಂದೊಂದು ಮಂತ್ರಕ್ಕೂ ಸ್ವಲ್ಪ ಸ್ವಲ್ಪ ಅನ್ನವನ್ನು ಭಕ್ಷಿಸುವುದು ‘ಪ್ರಾಣಾಯ ಸ್ವಾಹಾ’ಕ್ಕೆ ತೋರು ಬೆರಳು ಮತ್ತು ಮಧ್ಯದ ಬೆರಳು ಮತ್ತು ಹೆಬ್ಬೆರಳು,’ಅಪಾನಾಯ ಸ್ವಾಹಾ’ಗೆ ಮಧ್ಯದ ಬೆರಳು, ಉಂಗುರ ಬೆರಳು ಮತ್ತು ಹೆಬ್ಬೆರಳು, ‘ವ್ಯಾನಾಯ ಸ್ವಾಹಾ’ಗೆ ಉಂಗುರದ ಬೆರಳು, ಕಿರು ಬೆರಳು ಮತ್ತು ಹೆಬ್ಬೆರಳು, ‘ಉದಾನಾಯ ಸ್ವಾಹಾ’ಗೆ ಮಧ್ಯದ ಬೆರಳು, ಉಂಗುರದ ಬೆರಳು ಮತ್ತು ಹೆಬ್ಬೆರಳು, ‘ಸಮಾನ’ಕ್ಕೆ ಐದೂ ಬೆರಳುಗಳನ್ನು ಬಳಸಬೇಕೆಂಬ ನಿಯಮವಿದೆ.
ಈ ಪ್ರಾಣಾಗ್ನಿಹೋತ್ರವೆಂಬ ಯಜ್ಞಕ್ಕೆ ಜಠರವೇ ಅಗ್ನಿಕುಂಡ, ನಾವು ಸೇವಿಸುವ ಆಹಾರವೇ ಹವಿಸ್ಸು, ಆಹಾರವನ್ನು ಅರಗಿಸಿಕೊಳ್ಳುವ ಶಕ್ತಿಯೇ ಅಗ್ನಿ. ಈ ಅಗ್ನಿ ನಾವು ಸೇವಿಸುವ ಆಹಾರವನ್ನು ಲಾಲಾರಸದೊಂದಿಗೆ ಪಚನಗೈದು ಶರೀರಕ್ಕೆ ಶಕ್ತಿಯನ್ನು, ತೇಜಸ್ಸನ್ನು ಒದಗಿಸುವುದರಿಂದ ಅದು ‘ಪಾಚಕಾಗ್ನಿ’ . ಗೀತೆಯಲ್ಲಿ ವಿವರಿಸಿದಂತೆ ‘ಅಹಂ ವೈಶ್ವಾನರೊ ಭುಂಕ್ತ್ವಾ ಪ್ರಾಣಿನಾಂ ದೇಹಮಾಶ್ರಿತಃ | ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ‘ ಎನ್ನುವ ವೈಶ್ವಾನರನೆಂದು ಕರೆಯಲ್ಪಡುತ್ತದೆ.

ಪಚಾಮ್ಯನ್ನಂ ಚತುರ್ವಿಧಮ್ : ನಾವು ಸೇವಿಸುವ ಆಹಾರವನ್ನು ಭಕ್ಷ (ಕರಿದ ಅಥವಾ ವಿಶೇಷವಾದ ತಿಂಡಿ ತಿನಸು), ಭೋಜ್ಯ (ಕೈತುತ್ತಿಗೊದಗುವ ಖಾದ್ಯ), ಲೇಹ್ಯ ( ನಾಲಿಗೆಯಲ್ಲಿ ನೆಕ್ಕಿ ಸವಿಯುವ ಪದಾರ್ಥ), ಚೋಷ್ಯ (ಒಳರಸವನ್ನು ಹೀರಿ ಸವಿಯುವ ಖಾದ್ಯ)ಗಳೆಂದು ನಾಲ್ಕು ವಿಧವಾಗಿ ವಿಂಗಡಿಸಲಾಗಿದೆ. ಇದರೊಂದಿಗೆ ನಾವು ಸೇವಿಸುವ ದ್ರವರೂಪದ ಪಾನೀಯಗಳೂ ಸೇರಿದರೆ ಅದು ಪಂಚಭಕ್ಷವಾಗುತ್ತದೆ. ಭೋಜನ ಸಾಮಗ್ರಿಗಳೇ ಪಾಚಕಾಗ್ನಿಗೆ ನೀಡುವ ಹವಿಸ್ಸುಗಳು ಮತ್ತು ಇವುಗಳ ಸೇವನೆಯ ವ್ಯವಸ್ಥಿತ ರೂಪವೇ ಭೋಜನ ವಿಧಿಯೆಂಬ ಯಜ್ಞ.

300x250 AD

ಆಹಾರ ಸೇವಿಸುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು:

೧. ಶುಚಿತ್ವ:
ಸ್ನಾನಾದಿ ನಿತ್ಯಕರ್ಮಗಳ ಮೂಲಕ ದೇಹದ ಬಹಿರಂಗಶುದ್ಧಿ ಮತ್ತು ಭಗವನ್ನಾಮ ಸ್ಮರಣೆಯ ಮೂಲಕ ಅಂತರಂಗ ಶುದ್ಧಿ ಮತ್ತು ಪ್ರಸನ್ನವಾದ ಮನೋಸ್ಥಿತಿ, ಪ್ರಶಾಂತ ನಿರ್ಮಲ ಪರಿಸರ ಭೋಜನವಿಧಿಗೆ ಅವಶ್ಯ. ಶುದ್ಧವಾದ ಬಾಳೆಎಲೆಯಲ್ಲಿ ನೆಲದ ಮೇಲೆ ಕುಳಿತು ಮನೆಮಂದಿಯೊಂದಿಗೆ ಭೋಜನವೆಂಬ ಯಜ್ಞವನ್ನು ಕೈಗೊಳ್ಳಬೇಕು.

೨. ಪರಿಷಿಂಚನೆ:
ಎಲ್ಲಾ ಪದಾರ್ಥವನ್ನು ಬಡಿಸಿದ ನಂತರ ಮೊದಲು ಕೈಯಲ್ಲಿ ನೀರು ತೆಗೆದುಕೊಂಡು ಗಾಯತ್ರಿ ಮಂತ್ರದಿಂದ ಪ್ರೋಕ್ಷಣೆ ಮಾಡುವುದು:
ನಾನು ತಿನ್ನುವ ಈ ಅನ್ನಕ್ಕೆ ಪರಮಾತ್ಮನ ಮತ್ತು ಸತ್ಯಧರ್ಮಗಳ ರಕ್ಷೆಯಿದೆ. ಈ ಪರಿಸಿಂಚನವೆಂಬ ಕ್ರಿಯೆ ನಾನು ಈ ಅನ್ನವನ್ನು ಸತ್ಯ ಮತ್ತು ಧರ್ಮಗಳ ನೆಲೆಯಲ್ಲಿ ಭಗವಂತನ ಕೃಪೆಯಿಂದ ಗಳಿಸಿದ್ದೇನೆ ಎಂಬ ಘೋಷಣೆಯೂ ಹೌದು.
೩. ಚಿತ್ರಾಹುತಿ ಹವಿಸ್ಸು ಸಮರ್ಪಣೆ’
೪. ಆಪೋಷನ’ವೆಂದರೆ ನೀರನ್ನು ಗುಟುಕಿಸುವುದು ಎಂದರ್ಥ
೫. ಅಭಿಘಾರ: ಅಭಿಘಾರವೆಂದರೆ ನೈವೇದ್ಯಕ್ಕಾಗಿ ಹಾಕುವ ತುಪ್ಪ. ಇದು ಆಹಾರವನ್ನು ಸ್ವಾದಿಷ್ಠವಾಗಿ ಮಾಡುತ್ತದೆ
೫. ಪ್ರಾರ್ಥನೆ:
ಬಲ ಕೈಲಿ ನೀರು ಹಿಡಿದುಕೊಂಡು ಮಂತ್ರ ಪ್ರಾರ್ಥನೆ
೬. ಈ ಎಲ್ಲ ಪೂರ್ವ ಪೀಠಿಕೆಯ ನಂತರ ಭೋಜನವನ್ನು ಆತುರ, ಅಸಹನೆ, ಸಿಟ್ಟು ಇಲ್ಲದೆ ಶಾಂತಮನಸ್ಸಿನಿಂದ ತನಗೆ ಬೇಕಾದಷ್ಟು ಸ್ವೀಕರಿಸಬೇಕು. ಅತಿ ಭುಂಜನವು ದೈಹಿಕ ಆರೋಗ್ಯದ ಮೇಲೆ ವಿಕೃತ ಪರಿಣಾಮವನ್ನು ಬೀರಬಲ್ಲದೆಂಬ ಎಚ್ಚರವಿರಬೇಕು. ಈ ರೀತಿಯ ಭೋಜನವೇ ಪ್ರಾಣಾಗ್ನಿಹೋತ್ರದ ಪೂರ್ಣಾಹುತಿ.
೭. ಉತ್ತರ ಆಪೋಶನ ಉತ್ತರಾಪೋಶನವೆಂದರೆ ಭೋಜನದ ಅಂತ್ಯದಲ್ಲಿ ನೀರು ಕುಡಿಯುವುದು ನಾವು ಸೇವಿಸಿದ ಭೋಜನವನ್ನು ಪಚನ ಮಾಡಲು ಜಠರಾಗ್ನಿಗೆ ನೆರವಾಗುತ್ತದೆ.
ನಮ್ಮ ಹಿರಿಯರು ಭೋಜನ ವಿಧಿಯನ್ನೂ ಕೂಡ ಒಂದು ಯಜ್ಞವೆಂದು ಪರಿಗಣಿಸುವುದರ ಜತೆಗೆ ನಮ್ಮ ದೇಹಕ್ಕೆ ವೈಜ್ಞಾನಿಕ ಕ್ರಮದಲ್ಲಿ ಆಹಾರವನ್ನು ಪೂರಣಗೊಳಿಸಿ ಪಂಚಪ್ರಾಣಗಳ ಊರ್ಜೆಯನ್ನು ವೃದ್ಧಿಗೊಳಿಸಿ ತನ್ಮೂಲಕ ಆತ್ಮಶಕ್ತಿಯನ್ನು ಸದಾ ಜಾಗೃತಗೊಳಿಸುವ ಯಾಜ್ಞಿಕ ಪ್ರಕ್ರಿಯೆಯಾಗಿ ರೂಪಿಸಿದ್ದಾರೆ. ಭೋಜನವೆಂಬುದು ಹಸಿವಾದೊಡನೆ ಬರಿಯ ಉಣ್ಣುವ ಕ್ರಿಯೆಯಲ್ಲ. ಅದು ಯಾಜ್ಞಿಕ, ಯೋಗಿಕಗಳನ್ನೊಳಗೊಂಡ ಒಂದು ಸಂಸ್ಕಾರಯುತ ಪ್ರಕ್ರಿಯೆ. ನಮ್ಮ ದುಡಿಮೆಯ ಫಲವಾದ ಭೋಜನವನ್ನು ಯಜ್ಞಕರ್ಮಗಳಿಗೆ ಹೋಲಿಸಿ ಭೋಜನವಿಧಿಯನ್ನು ಇಷ್ಟೊಂದು ಕ್ಲಿಷ್ಠಗೊಳಿಸಬೇಕಿತ್ತೆ? ಎಂಬ ಪ್ರಶ್ನೆಯೊಂದು ಉದ್ಭವಿಸುವುದು ಸಹಜವೆ. ನಮ್ಮ ಬದುಕಿನ ಎಲ್ಲ ಸಂಗತಿಗಳಲ್ಲೂ ನಮ್ಮ ಪೂರ್ವಜರು ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿದ್ದರು. ಹಾಗಾಗಿ ಜೀವಧಾರಣ, ಶರೀರದ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಗಳನ್ನು ಕಾಪಾಡುವಲ್ಲಿ ಅವರು ಭೋಜನ ವಿಧಿಗೂ ಒಂದು ವೈಜ್ಞಾನಿಕ ಸೂತ್ರವನ್ನು ಅಳವಡಿಸಿದರು. ವಿಭಿನ್ನ ಗಿಡಮೂಲಿಕೆ ಮತ್ತು ಸಾಂಬಾರ ಪದಾರ್ಥಗಳ ಸುಸಂಸ್ಕೃತ ಮತ್ತು ಚತುರ ಬಳಕೆಯನ್ನು ಆಧರಿಸಿ ವೈವಿಧ್ಯಮಯ ಭಾರತೀಯ ಆಹಾರ ಪದ್ಧತಿಯ ವೈಶಿಷ್ಟ್ಯಗಳು ನಿರ್ಧಾರವಾಗಿವೆ. ಬಗೆ ಬಗೆಯ ಆಹಾರಗಳು ಮತ್ತು ಅವುಗಳ ತಯಾರಿಕಾ ತಂತ್ರಗಳನ್ನು ಆಧರಿಸಿ ಈ ಆಹಾರ ಪದ್ಧತಿಗಳ ವೈಶಿಷ್ಟ್ಯ ನಿರ್ಧಾರವಾಗುತ್ತದೆ. ಭಾರತೀಯ ಆಹಾರ ಪದ್ಧತಿಯಲ್ಲಿ ಸಸ್ಯಾಹಾರ ಮಹತ್ವಪೂರ್ಣ ಭಾಗವಾಗಿದ್ದರೂ, ಕೋಳಿ, ಮೇಕೆ, ಕುರಿ, ಮೀನು, ಮತ್ತು ಇತರ ಮಾಂಸಾಹಾರವೂ ಕೂಡ ಭಾರತೀಯ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಸೇರಿದೆ. ಭಾರತೀಯ ಸಂಸ್ಕೃತಿಯಲ್ಲಿ ಆಹಾರ ಪದ್ಧತಿಯ ಪಾತ್ರ ಪ್ರಮುಖವಾಗಿದೆ. ಪ್ರತಿಯೊಬ್ಬರ ಜೀವನದಲ್ಲಿ ಮತ್ತು ಇಲ್ಲಿನ ಹಬ್ಬಗಳಲ್ಲಿ ಅದು ಮಹತ್ವದ ಸಂಗತಿ. ಭಾರತೀಯ ಆಹಾರ ಪದ್ಧತಿ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತಾ, ಜನಾಂಗೀಯ ವೈವಿಧ್ಯತೆಯಿಂದ ತುಂಬಿರುವ ಉಪಖಂಡದ ವಿಭಿನ್ನ ಜನಸಮುದಾಯಗಳನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ಪಾಕಶಾಸ್ತ್ರವನ್ನು ಸಾಮಾನ್ಯವಾಗಿ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ ಆಹಾರಗಳೆಂದು ಐದು ಭಾಗಗಳಾಗಿ ವರ್ಗೀಕರಿಸಬಹುದು. ಈ ವೈವಿಧ್ಯತೆಯನ್ನು ಹೊರತುಪಡಿಸಿ ಕೆಲವು ಅನನ್ಯ ಐಕ್ಯತೆಯ ಎಳೆಗಳೂ ಹೊರಚಿಮ್ಮಿವೆ. ವಿವಿಧ ಸಾಂಬಾರ ಪದಾರ್ಥಗಳ ಬಳಕೆ ಅಡುಗೆ ತಯಾರಿಕೆಯ ಅವಿಭಾಜ್ಯ ಅಂಗವಾಗಿದ್ದು, ಊಟದ ಸ್ವಾದ ಮತ್ತು ರುಚಿ ಹೆಚ್ಚಿಸುವ ಉದ್ದೇಶದಿಂದ ಮತ್ತು ಅನನ್ಯ ರುಚಿ ಮತ್ತು ಕಂಪನ್ನು ಸೃಷ್ಟಿಸಲು ಸಾಂಬಾರ ಪದಾರ್ಥಗಳನ್ನು ಬಳಸಲಾಗುತ್ತದೆ. ಇತಿಹಾಸದುದ್ದಕ್ಕೂ ಭಾರತಕ್ಕೆ ಆಗಮಿಸಿದ ಪರ್ಷಿಯನ್ನರು, ಮೊಘಲರು, ಮತ್ತು ಯೂರೋಪಿನ ವಸಾಹತುವಾದಿಗಳೂ ಸೇರಿದಂತೆ ಹಲವು ವಿದೇಶಿ ಸಂಸ್ಕೃತಿಗಳ ಗಾಢ ಪ್ರಭಾವಕ್ಕೆ ಭಾರತೀಯ ಪಾಕಶಾಸ್ತ್ರ ಪದ್ಧತಿಯು ಒಳಗಾಗಿದೆ. ಆದರೆ ನಮ್ಮ ಯುವ ಜನತೆ ಪಾಶ್ಚಿಮಾತ್ಯ ಆಹಾರ ಪದ್ದತಿಗಳ ಬಳಕೆಗೆ ಹೆಚ್ಚು ಮನಸ್ಸು ಮಾಡುತ್ತಿರುವದು ಕಳವಳಕಾರಿ ಬೆಳವಣಿಗೆ. ಯಾವುದೋ ದೇಶದಲ್ಲಿ ಇದ್ದು ತಮ್ಮ ಬದುಕನ್ನು ಕಟ್ಟಿಕೊಳ್ಳಬಯಸುತ್ತಿರುವ ಲಕ್ಷ ಲಕ್ಷ ಜನ ಭಾರತೀಯರಿಗೆ ಇದು ಸಾಧ್ಯವಾ? ಇದನ್ನೆಲ್ಲ ಆಚರಣೆಗೆ ತರಬಹುದೇ ಇಂದಿನ ಜಾಗತೀಕರಣದ ಹಿನ್ನೆಲೆಯಲ್ಲಿ ಎಂಬ ಪ್ರಶ್ನೆ ಸಹಜವಾಗಿ ಏಳುವದು ಸಹಜ . ಆದರೆ ಸಾಧ್ಯವಿದ್ದವರು ಇದನ್ನು ಅನುಸರಿಸಿದರೆ ಅನುಕೂಲವಾದೀತು. ಪಟ್ಟಣದಲ್ಲಿ ವಾಸಿಸುವವರಿಗೆ ಈ ಪದ್ದತಿಯ್ನು ಅನುಸರಿಸಲು ಸಾಧ್ಯವಾಗದಿದ್ದರೂ ಎಷ್ಟು ಜನ ಯುವಕರಿಗೆ ಇದು ಹೀಗೆ ಎಂಬ ತಿಳುವಳಿಕೆ ಇದೆ? ಅಥವಾ ಅದನ್ನು ತಿಳಿಯಬಯಸುವ ಯುವಕರು ಇದ್ದಾರೆಯೇ? ನಮ್ಮಸನಾತನ ಋಷಿ ಮುನಿಗಳು ಇದಕ್ಕಾಗಿ ಸತತ ಅಧ್ಯಯನ ನಡೆಸಿ ಒಂದು ವೈಜ್ಙಾನಿಕ ಸತ್ಯಯವನ್ನು ನಮಗಾಗಿ ಬಳುವಳಿ ಕೊಟ್ಟಾಗಲೂ ಅದನ್ನ ನಡೆಸಲಾಗದು ಅದನ್ನು ಯಾಕೆ ನಡೆಸಬೇಕು ಎಂಬ ಪ್ರಶ್ನೆಗಳು . ಸಾರಸಗಟವಾಗಿ ಎಲ್ಲವೂ ಸುಳ್ಳು ಎಂದು ನಿರಾಕರಿಸುವವರಿಗೆ ಇದನ್ನು ಎಂದಾದರೂ ಅಭ್ಯಾಸ ಮಾಡಬೇಕೆಂಬ ಅನಿಸಿಕೆಯಾದರೂ ಬರಲಿ ಎಂಬ ಸದುದ್ದೇಶಕ್ಕಾಗಿ ಈ ಲೇಖನ. ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲೆಲ್ಲೋ ತಿಂದು ಎಲ್ಲೋ ಕೆಲಸ ಮಾಡುತ್ತಿರುವ ಇಂದಿನ ಯುವ ಪೀಳಿಗೆಗೆ ಈ ಭೋಜನ ಪದ್ದತಿ ಪಥ್ಯವಾಗದಿದ್ದರೂ ಒಂದು ಸಣ್ಣ ಮಾಹಿತಿಯಾದರೂ ಇರಲಿ ಎಂಬ ಆಸೆ.

Share This
300x250 AD
300x250 AD
300x250 AD
Back to top