ಸಿದ್ದಾಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಧನಸಹಾಯ ಯೋಜನೆ ಅಡಿಯಲ್ಲಿ ಶಬರ ಸಂಸ್ಥೆ ಸೋಂದಾ ಇವರು, ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಸಹಕಾರದಲ್ಲಿ ತ್ಯಾಗಲಿಯ ಶ್ರೀ ಲಕ್ಷ್ಮೀ ನರಸಿಂಹ ರಥೋತ್ಸವದ ಅಂಗವಾಗಿ ನಡೆಸಿದ ಯಕ್ಷಗಾನ ಮತ್ತು ಸ್ಥಳೀಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಭಾರತೀಯ ಸೇನೆಯ ನಿವೃತ್ತ ಕರ್ನಲ್ ಮಂಜುನಾಥ ಹೆಗಡೆ ಸುರಗಿ ಕೊಪ್ಪ ಮಾತನ್ನಾಡುತ್ತಾ, ಹೇಗೆ ವೈರಿಗಳ ಎದುರಿನಲ್ಲಿ ಹೋರಾಡಿ ಗೆಲುವು ಸಾಧಿಸಿದಾಗ ಸಿಗುವ ಖುಷಿ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿದಾಗಲೂ ಸಿಗುತ್ತದೆ. ಆ ಎರಡೂ ಅನುಭವ ನನಗಾಗಿದೆ ಎಂದರು. ಮತ್ತೋರ್ವ ಮುಖ್ಯ ಅಭ್ಯಾಗತರಾದ ನಾಗರಾಜ್ ಜೋಶಿ ಸೋಂದಾ, ಸೈನಿಕರು ದೇಶದ ಗಡಿ ಕಾಯ್ದರೆ ಯಕ್ಷಗಾನ ಕನ್ನಡ ಭಾಷೆಯನ್ನು ಕಾಯುತ್ತಿದೆ. ಏಕೆಂದರೆ ಅಚ್ಚ ಕನ್ನಡ ಭಾಷೆಯನ್ನು ಬಳಸುವ ಕಲೆ ಎಂದರೆ ಯಕ್ಷಗಾನ ಎಂದರು. ಕಾರ್ಯಕ್ರಮದ ಉದ್ಘಾಟನೆ ಮಾಡಿದ ಉದ್ಯಮಿ ನಾರಾಯಣ ಹೆಗಡೆ ಬುಳ್ಳಿ, ತ್ಯಾಗಲಿಯ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಉತ್ಸವದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಘಟಿಸುತ್ತಿರುವುದು ವಿಶೇಷ ಎಂದರು. ಗೌರವ ಉಪಸ್ಥಿತರಾಗಿ ಊರಿನ ಹಿರಿಯರಾದ ಕೃಷ್ಣಮೂರ್ತಿ ಹೆಗಡೆ ತ್ಯಾಗಲಿ ಮತ್ತು ನಾರಾಯಣ ನಾಯ್ಕ ಹಂಗಾರಖಂಡ ಇವರಿದ್ದರು. ಸಭಾಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಿ ಎಂ ಹೆಗಡೆ ತ್ಯಾಗಲಿ ವಹಿಸಿದ್ದರು. ನಂತರ ಸ್ಥಳೀಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಯಕ್ಷಗಾನ ‘ಲವ ಕುಶ’ ಆಖ್ಯಾನದಲ್ಲಿ ಹಿಮ್ಮೇಳದಲ್ಲಿ ಶ್ರೀಪಾದ ಹೆಗಡೆ ಬಾಳೆಗದ್ದೆ, ಅನಿರುದ್ಧ ಬೆಣ್ಣೆಮನೆ, ವಿಘ್ನೇಶ್ವರ ಕೆರೆಕೊಪ್ಪ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ರಾಮನಾಗಿ ಅಶೋಕ ಭಟ್ ಸಿದ್ದಾಪುರ, ಶತ್ರುಘ್ನನಾಗಿ ಪ್ರಣವ ಭಟ್ ಸಿದ್ದಾಪುರ, ಲವ ಪ್ರವೀಣ ತಟ್ಟೀಸರ, ಕುಶ ಸದಾಶಿವ ಮಲವಳ್ಳಿ, ಚಂದ್ರ ಸೇನ ಮತ್ತು ವಾಲ್ಮೀಕಿ ಜಟ್ಟಿ ಕಡಬಾಳ. ಸೀತೆ ಮತ್ತು ಬ್ರಾಹ್ಮಣ. ಅವಿನಾಶ್ ಕೊಪ್ಪ ರಂಜಿಸಿದರು. ಸಂಯೋಜನೆ ನಾಗರಾಜ್ ಜೋಶಿ ಸೋಂದಾ ಅವರದ್ದಾಗಿತ್ತು.