ಕಡತೋಕಾದಲ್ಲಿ ಸಂಪನ್ನಗೊಂಡ ಯಕ್ಷರಂಗೋತ್ಸವ-2024
ಹೊನ್ನಾವರ; ತೆಂಕು-ಬಡಗು ತಿಟ್ಟಿನ ಅಗ್ರಮಾನ್ಯ ಯಕ್ಷಗಾನ ಭಾಗವತ ಮತ್ತು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ದಿವಂಗತ ಕಡತೋಕಾ ಮಂಜುನಾಥ ಭಾಗವತ ಇವರ ಸಂಸ್ಮರಣೆಯ ಕಡತೋಕಾ ಕೃತಿ-ಸ್ಮೃತಿ ಯಕ್ಷರಂಗೋತ್ಸವವು ಈ ಬಾರಿ ತಾಲೂಕಿನ ಕಡತೋಕಾದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಾರ್ಚ್ ೧೬ ಮತ್ತು ೧೭ ಹೀಗೆ ಎರಡು ದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಾಭಿಮಾನಿಗಳ ಸಹಕಾರದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
೧೬ ರಂದು ಅಪರಾಹ್ನ ೪ ಗಂಟೆಗೆ ಯಕ್ಷರಂಗೋತ್ಸವವನ್ನು, ಚುನಾವಣೆ ನೀತಿ ಸಂಹಿತೆಯ ದೆಸೆಯಿಂದ ಅಧ್ಯಕ್ಷತೆ ವಹಿಸಬೇಕಾಗಿದ್ದ ಸ್ಥಳೀಯ ಶಾಸಕ ದಿನಕರ ಶೆಟ್ಟಿಯವರ, ಜಂಟಿಯಾಗಿ ಉದ್ಘಾಟಿಸಬೇಕಾಗಿದ್ದ ಮಾಜಿ ಸಚಿವ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಸಂಜಯ ಶೆಟ್ಟಣ್ಣವರ ಅವರ ಅನುಪಸ್ಥಿತಿಯಲ್ಲಿ ಸಿದ್ದಾಪುರದ ಹಿರಿಯ ನ್ಯಾಯವಾದಿ ಹಾಗೂ ಸಹಕಾರೀ ಧುರೀಣ ಆರ್.ಎಂ.ಹೆಗಡೆ ಬಾಳೇಸರ, ಕಡತೋಕಾ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಭಟ್ ಇವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರಾರಂಭದಲ್ಲಿ ಶ್ರೀಪಾದ ಭಟ್ ಕಡತೋಕಾ ಮತ್ತು ಸಂಗಡಿಗರು ಯಕ್ಷಗಾನೀಯ ಗಣಪತಿ ಸ್ತುತಿಯನ್ನು ನಡೆಸಿಕೊಟ್ಟರು. ಹೊನ್ನಾವರದ ನ್ಯಾಯವಾದಿ ಸತೀಶ ಭಟ್ ಉಳಗೆರೆ ಎಲ್ಲರನ್ನೂ ಸ್ವಾಗತಿಸಿದರು ಹಾಗೂ ಯಕ್ಷರಂಗದ ಸಂಪಾದಕ ಕಡತೋಕಾ ಗೋಪಾಲಕೃಷ್ಣ ಭಾಗವತ ಪ್ರಾಸ್ತಾವಿಕ ನುಡಿಗಳನ್ನಾಡಿ ಯಕ್ಷರಂಗೋತ್ಸವದ ಸಂಘಟನೆಯ ಮಹತ್ವವನ್ನು ವಿವರಿಸಿದರು.
ಖ್ಯಾತ ಅರ್ಥಧಾರಿ ಉಜರೆ ಅಶೋಕ ಭಟ್ಟ ದಿವಂಗತರ ಕುರಿತು ಸಂಸ್ಮರಣ ನುಡಿಗಳನ್ನಾಡುತ್ತಾ, ಕಡತೋಕಾ ಭಾಗವತರು ಯಕ್ಷಗಾನ ಭಾಗವತಿಕೆಯ ಒಂದು ವಿಸ್ಮಯವಾಗಿದ್ದರು ಎಂದು ಅವರ ಗುಣಗಾನವನ್ನು ಮಾಡಿದರು. ಇದೇ ವೇದಿಕೆಯಲ್ಲಿ ಹಿರಿಯ ಮದ್ದಳೆಗಾರರಾದ ಮಂಜುನಾಥ ಭಂಡಾರಿ ಕಡತೋಕಾ ಹಾಗೂ ಕುಮಟಾದ ಆಂಜನೇಯ ಖ್ಯಾತಿಯ ಕಲಾವಿದ ಗಣಪತಿ ನಾಯ್ಕ ಇವರಿಬ್ಬರನ್ನೂ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರು ಸನ್ಮಾನಕ್ಕೆ ಕೃತಜ್ಞತೆಯನ್ನು ಸಮರ್ಪಿಸುತ್ತಾ ಯಕ್ಷಗಾನದ ಉದ್ಧಾಮ ಭಾಗವತರಾಗಿದ್ದ ದಿ.ಕಡತೋಕಾ ಮಂಜುನಾಥ ಭಾಗವತರ ಸಂಸ್ಮರಣೆಯ ವೇದಿಕೆಯಲ್ಲಿ ಅವರ ಹೆಸರಿನ ಗೌರವಕ್ಕೆ ಪಾತ್ರರಾದುದಕ್ಕೆ ಧನ್ಯತೆಯನ್ನು ವ್ಯಕ್ತಪಡಿಸಿದರು. ಉದ್ಘಾಟಕರಾದ ಆರ್.ಎಂ.ಹೆಗಡೆ, ಕಡತೋಕರ ವ್ಯಕ್ತಿತ್ವದ ವಿಶಿಷ್ಟತೆಯನ್ನು ಕಂಡ ಸಂದರ್ಭಗಳನ್ನು ವರ್ಣಿಸಿ ಅವರ ನೆನಪಿನ ಯಕ್ಷರಂಗೋತ್ಸವವು ಯಶಸ್ವಿಯಾಗಲೆಂದು ಹಾರೈಸಿದರು. ಶಿರಸಿಯ ನ್ಯಾಯವಾದಿ ಜಿ.ಎನ್.ಹೆಗಡೆ ಮುರೇಗಾರ್ ಅತಿಥಿಗಳಾಗಿ ಮಾತಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕೊನೆಯಲ್ಲಿ ಸಾಮಾಜಿಕ ಮುಖಂಡ ಹಾಗೂ ಯಕ್ಷರಂಗೋತ್ಸವ ಸಂಘಟನೆಯ ಮುಂದಾಳು ಕಡತೋಕಾ ಶಿವಾನಂದ ಹೆಗಡೆಯವರು ಎಲ್ಲರನ್ನೂ ವಂದಿಸಿದರು. ನಂತರ ಯಕ್ಷಗಾನ ರಂಗಭೂಮಿಯ ಅಗ್ರಮಾನ್ಯ ಕಲಾವಿದರಿಂದ ಕರ್ಣಪರ್ವ ತಾಳಮದ್ದಳೆ ನಡೆಯಿತು. ತಾಳಮದ್ದಳೆಯಲ್ಲಿ ಕೊಳಗಿ ಕೇಶವ ಹೆಗಡೆ, ಜೋಗಿಮನೆ ಗೋಪಾಲಕೃಷ್ಣ ಭಟ್ ಪಿ.ಕೆ.ಹೆಗಡೆ ಹರಿಕೇರಿ ಹಾಗೂ ಕುಮಾರ ಮಯೂರ ಹೆಗಡೆ ಇವರ ಹಿಮ್ಮೇಳವು ತಾಳಮದ್ದಳೆಯ ಯಶಸ್ಸಿಗೆ ಕಾರಣವಾಯಿತು. ಖ್ಯಾತ ಅರ್ಥಧಾರಿಗಳಾದ ಉಜರೆ ಅಶೋಕ ಭಟ್ ಕರ್ಣನಾಗಿಯೂ, ಡಾ.ಎಂ.ಪ್ರಭಾಕರ ಜೋಶಿಯವರು ಶಲ್ಯನಾಗಿಯೂ, ರಾಧಾಕೃಷ್ಣ ಕಲ್ಚಾರ್ ಅವರು ಅರ್ಜುನನಾಗಿಯೂ, ಪವನ ಕಿರಣಕೆರೆ ಅವರು ಕೃಷ್ಣನಾಗಿಯೂ ಮನೋಜ್ಞವಾಗಿ ತಮ್ಮ ಪಾತ್ರ ಪ್ರಸ್ತುತಿಗೈದು ಪ್ರೇಕ್ಷಕರನ್ನು ಸಂತುಷ್ಟಿಪಡಿಸಿದರು.
ಅರ್ಥಪೂರ್ಣ ’ಅರ್ಥಾಂತರಂಗ’
ಯಕ್ಷರಂಗೋತ್ಸವದ ಭಾಗವಾಗಿ ದಿ.೧೭ರಂದು ಮುಂಜಾನೆ ೧೦.೩೦ರಿಂದ ವಿನೂತನ ’ಅರ್ಥಾಂತರಂಗ’ ಎಂಬ ಕಾರ್ಯಕ್ರಮ ನಡೆಯಿತು. ಅರ್ಥಾಂತರಂಗದಲ್ಲಿ ಯಕ್ಷಗಾನ ಕಲಾವಿದರಿಗೆ ಮಾತುಗಾರಿಕೆಯಲ್ಲಿ ವಿಶೇಷವಾದ ತರಬೇತಿಯನ್ನು ನೀಡುವ ಉದ್ದೇಶದಿಂದ ಯಕ್ಷಗಾನ ಅರ್ಥಗಾರಿಕೆಯ ಪೀಠಿಕೆ, ಸಂವಾದ, ಭಾವಪ್ರಕಟಣೆ, ಪದ್ಯದ ಸಂದರ್ಭವೇ ಮೊದಲಾದ ತಂತ್ರಾಶಗಳ ಪ್ರಾತ್ಯಕ್ಷಿಕೆಯನ್ನು ಮಾಡಿ ತಜ್ಞ ಅರ್ಥಧಾರಿಗಳು ಹವ್ಯಾಸೀ ಕಲಾವಿದರಿಗೆ ಬೋಧನೆಯನ್ನು ಮಾಡಿದರು. ಖ್ಯಾತ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅವರ ಅಧ್ಯಕ್ಷತೆಯಲ್ಲಿ, ತಾಳಮದ್ದಳೆಯ ಕುರಿತು ಆಮೂಲಾಗ್ರವಾದ ಸಂಶೋಧನೆಯನ್ನು ಕೈಗೊಂಡ ಹಿರಿಯ ಸಂಶೋಧಕಿ ಶಿರಸಿಯ ಡಾ.ವಿಜಯನಳಿನಿ ರಮೇಶ್ ದೀಪ ಬೆಳಗಿಸಿ ಉದ್ಘಾಟಿಸಿ ಇಂತಹ ಕಾರ್ಯಾಗಾರದ ಪ್ರಯೋಜನವನ್ನು ಎಲ್ಲ ಕಲಾವಿದರೂ ಪಡೆಯಬೇಕೆಂದು ಕರೆಕೊಟ್ಟರು. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಅರ್ಥಧಾರಿಗಳಾದ ರಾಧಾಕೃಷ್ಣ ಕಲ್ಚಾರ್ ಹಾಗೂ ವಾಸುದೇವ ರಂಗಾ ಭಟ್ ಅವರುಗಳು ಭಾಗವಹಿಸಿ ವಿವಿಧ ತಂತ್ರಾಂಶಗಳ ಕುರಿತು ವಿಸ್ತಾರವಾದ ಚರ್ಚೆಯನ್ನು ಮಾಡಿದರು. ಜಿಲ್ಲೆ ಮತ್ತು ಹೊರಜಿಲ್ಲೆಯಿಂದ ಬಂದ ಸುಮಾರು ಐವತ್ತರಷ್ಟು ಜನ ಪ್ರೇಕ್ಷಕ ಕಲಾಸಕ್ತರು ಈ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದು ವಿಶೇಷವಾಗಿತ್ತು.
ಪ್ರೊ.ಎಸ್.ಶಂಭು ಭಟ್, ಶಿವಮೊಗ್ಗಾದ ಯಕ್ಷಗಾನ ಸಂಘಟಕ ಲಕ್ಷ್ಮಿನಾರಾಯಣ ಕಾಶಿ, ಉಡುಪಿ ಜಿಲ್ಲೆ ಹಂಗಾರಕಟ್ಟೆಯ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್, ನಾಗರಿಕ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್, ಶಿರಸಿಯ ಸಂಘಟಕ ಕೇಶವ ಹೆಗಡೆ ನಾಗರಕುರ, ಅರ್ಥಧಾರಿ ಲಕ್ಷ್ಮೀಕಾಂತ ಕೊಂಡದಕುಳಿ, ಮೊದಲಾದ ಗಣ್ಯರು ಕೂಡ ಪ್ರೇಕ್ಷಕರಾಗಿ ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡರು. ಕಲಾವಿದರಾದ ಉಜರೆ ಅಶೋಕ ಭಟ್, ಪವನ ಕಿರಣಕೆರೆ, ಗಣೇಶ ಯಾಜಿ ಇಡಗುಂಜಿ, ಗಜಾನನ ಹೆಗಡೆ ಮೂರೂರು, ಕೀರ್ತಿ ಹೆಗಡೆ ಮೂರೂರು, ಈಶ್ವರ ಭಟ್ ಅಂಸಳ್ಳಿ, ಗಣಪತಿ ಹೆಗಡೆ ಗುಂಜಗೋಡ್, ಜಯರಾಮ ಭಟ್ ಗುಂಜಗೋಡು, ರಮೇಶ ಭಟ್ ಕಲ್ಲಬ್ಬೆ, ಇವರಗಳು ವಿವಿಧ ತಂತ್ರಾಂಶಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
೧೭ರಂದು ಅಪರಾಹ್ನ ೩ ಗಂಟೆಯಿಂದ ೫ ಗಂಟೆಯವರೆಗೆ ಸಾಗರದ ಪುರಪ್ಪೆಮನೆಯ ಸಾಕೇತ ಕಲಾವಿದರಿಂದ ‘ರಾಮನಿರ್ಯಾಣ’ ಎಂಬ ಆಟ ಪ್ರದರ್ಶನಗೊಂಡಿತು. ಪುರಪ್ಪೆಮನೆಯ ಕೆ.ಜಿ.ರಾಮರಾವ್, ಮಂಜುನಾಥ ಗುಡ್ಡೆದಿಂಬ ಹಾಗೂ ಗಜಾನನ ಹೆಗಡೆ ಮೂರೂರು ಇವರ ಹಿಮ್ಮೇಳದಲ್ಲಿ ಸಾಕೇತಕಲಾವಿದರಲ್ಲಿ ಪ್ರಮುಖರಾದ ಕೆ.ಜಿ.ಮಂಜುನಾಥ ಪುರಪ್ಪೆಮನೆ ರಾಮನ ವೇಷದಲ್ಲಿಯೂ ಶಶಾಂಕ ಪಟೇಲ್ ಕೆಳಮನೆಯವರು ಲಕ್ಷ್ಮಣನ ವೇಷದಲ್ಲಿ ಸಮ್ಮೋಹಕವಾಗಿ ಅಭಿನಯಿಸಿದರು. ಕಾಲಪುರುಷನಾಗಿ ಈಶ್ವರ ಭಟ್ ಅಂಸಳ್ಳಿ ಹಾಗೂ ದೂರ್ವಾಸನಾಗಿ ಈಶ್ವರ ಭಟ್ ಕಟ್ಟೆ ಇವರುಗಳು ತಮ್ಮ ಅಭಿನಯ ಮತ್ತು ಮಾತುಗಾರಿಕೆಯಿಂದ ಪ್ರದರ್ಶನದ ಯಶಸ್ಸಿನ ಪಾಲುದಾರರಾದರು.
೫ ಗಂಟೆಯಿಂದ ಕೆ.ಡಿ.ಸಿ.ಸಿ.ಬ್ಯಾಂಕ್‌ನ ನಿರ್ದೇಶಕ ಕಡತೋಕಾ ಶಿವಾನಂದ ಹೆಗಡೆ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಈ ವೇದಿಕೆಯಲ್ಲಿ ಹಿರಿಯ ಯಕ್ಷಗಾನ ಸಾಧಕರಾದ ವಿರೂಪಾಕ್ಷ ಹೆಗಡೆ ಶೀಗೇಹಳ್ಳಿ ಹಾಗೂ ಕೆ.ಜಿ.ರಾಮರಾವ್ ಪುರಪ್ಪೆಮನೆ ಇವರಿಬ್ಬರನ್ನೂ ಸನ್ಮಾನಿಸಲಾಯಿತು. ಸನ್ಮಾನಿತರು ಸನ್ಮಾನಕ್ಕೆ ಕೃತಜ್ಞತೆಯನ್ನು ಸಮರ್ಪಿಸುತ್ತಾ ಯಕ್ಷಗಾನದ ಉದ್ಧಾಮ ಭಾಗವತರಾಗಿದ್ದ ದಿ.ಕಡತೋಕಾ ಮಂಜುನಾಥ ಭಾಗವತರ ಸಂಸ್ಮರಣೆಯ ವೇದಿಕೆಯಲ್ಲಿ ಅವರ ಹೆಸರಿನ ಗೌರವಕ್ಕೆ ಪಾತ್ರರಾದುದಕ್ಕೆ ಧನ್ಯತೆಯನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಗಣ್ಯರಾದ ಪ್ರೊ.ಎಸ್.ಶಂಭು ಭಟ್, ಹವ್ಯಕ ಮಹಾಮಂಡಳದ ಅಧ್ಯಕ್ಷ ಮೋಹನ ಹೆಗಡೆ ಹೆರವಟ್ಟ, ಮೂರೂರಿನ ವಿದ್ಯಾನಿಕೇತನ ಪ್ರೌಢಶಾಲೆಯ ಕಾರ್ಯಾಧ್ಯಕ್ಷರಾದ ಆರ್.ಜಿ.ಭಟ್ ಕಲ್ಲಾರೆಮನೆ, ಕಡ್ಲೆ ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷ ಗೋವಿಂದ ಗೌಡ, ಆರ್.ಜಿ.ಪಿ.ಆರ್.ಎಸ್.ನ ಜಿಲ್ಲಾ ಸಂಚಾಲಕ ವಿನೋದ ನಾಯ್ಕ್ ಹಾಗೂ ವಿನಾಯಕ ಹೆಗಡೆ ಸಿ.ಎ.ಕೂಜಳ್ಳಿ ಇವರುಗಳು ಅಭ್ಯಾಗತರಾಗಿ ಭಾಗವಹಿಸಿ ವೇದಿಕೆಯ ಘನತೆಯನ್ನು ಹೆಚ್ಚಿಸಿದರು.
ಗಣ್ಯರಾದ ಪ್ರೊ.ಎಸ್.ಶಂಭು ಭಟ್ ಮಾತನಾಡಿ ಇಂತಹ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಜನರು ಬೆಂಬಲಿಸಿದಾಗ ಮಾತ್ರ ಸಂಘಟಕರಿಗೆ ಪ್ರೋತ್ಸಾಹ ನೀಡಿದಂತೆ ಎಂದು ನುಡಿದರು. ಹವ್ಯಕ ಮಹಾಮಂಡಳದ ಅಧ್ಯಕ್ಷ ಮೋಹನ ಹೆಗಡೆ ಹೆರವಟ್ಟ ಅವರು ಮಾತನಾಡಿ ಯಕ್ಷಗಾನಕ್ಕೆ ಸರ್ಕಾರ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು ಮತ್ತು ಇದೀಗ ತಾನೇ ರಚನೆಯಾಗಿರುವ ಯಕ್ಷಗಾನ ಅಕಾಡೆಮಿಗೆ ಉತ್ತರ ಕನ್ನಡ ಜಿಲ್ಲೆಯವರನ್ನು ಯಾರನ್ನೂ ಸದಸ್ಯರನ್ನಾಗಿ ನಿಯೋಜಿಸದಿರುವುದು ಈ ಪ್ರದೇಶದ ತಿಟ್ಟಿಗೆ ಆದ ಅನ್ಯಾಯ ಮತ್ತು ಅದನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯ ಕಲಾವಿದರು ಸಂಘಟಿತ ಹೋರಾಟ ಮಾಡುವ ಮೂಲಕ ಸರಿಪಡಿಸಬೇಕೆಂದು ನುಡಿದರು. ಉಳಿದ ಎಲ್ಲ ಅತಿಥಿಗಳೂ ಸಂದರ್ಭೋಚಿತವಾಗಿ ಮಾತನಾಡಿ ಯಕ್ಷರಂಗೋತ್ಸವಕ್ಕೆ ಶುಭ ಕೋರಿ ಸಂಘಟಕರಿಗೆ ಮುಂದಿನ ದಿನಗಳಲ್ಲಿ ಹೆಚ್ಚು ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಡತೋಕಾ ಶಿವಾನಂದ ಹೆಗಡೆಯವರು ಕಡತೋಕಾ ಮಂಜುನಾಥ ಭಾಗವತರು ಕಡತೋಕಾ ಊರಿನ ಹೆಸರನ್ನು ಪ್ರಪಂಚದಲ್ಲಿ ಪರಿಚಯಿಸಿದವರಾಗಿದ್ದು ಅವರ ಸ್ಮರಣೆಯನ್ನು ಮುಂದಿನ ದಿನಗಳಲ್ಲಿ ಕಡತೋಕಾ ಊರಿನ ಸಮಗ್ರ ಸಂಸ್ಕೃತಿ ಜಾತ್ರೆಯನ್ನಾಗಿ ಸಂಘಟಿಸುವ ಉತ್ಸಾಹವಿದೆ ಎಂದು ನುಡಿದರು. ಕಡತೋಕಾದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಕಡತೋಕಾ ಭಾಗವತರ ಸಂಸ್ಮರಣೆಯಾದ ಯಕ್ಷರಂಗೋತ್ಸವಕ್ಕೆ ಊರಿನ ಮತ್ತು ಸುತ್ತಮುತ್ತಲ ಪ್ರದೇಶದ ಜನರು ನೀಡಿದ ಬೆಂಬಲಕ್ಕೆ ಧನ್ಯವಾದವನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದರು. ಸಂಘಟಕ ಸಂಸ್ಥೆಯಾದ ಯಕ್ಷಲೋಕದ ಕಾರ‍್ಯದರ್ಶಿ ಕಡತೋಕಾ ಗೋಪಾಲಕೃಷ್ಣ ಭಾಗವತರು ಎಲ್ಲರನ್ನೂ ವಂದಿಸುತ್ತಾ ಯಕ್ಷರಂಗೋತ್ಸವವನ್ನು ಸಂಘಟಿಸುವಲ್ಲಿ ಬೆಂಬವಾಗಿ ನಿಂತ ಎಲ್ಲ ವ್ಯಕ್ತಿಗಳಿಗೂ ಸಂಘ-ಸಂಸ್ಥೆಗಳಿಗೂ ಧನ್ಯವಾದ ಸಮರ್ಪಿಸಿದರು.
ನಂತರ ೬ ಗಂಟೆಯಿಂದ ಯಕ್ಷರಂಗೋತ್ಸವದ ಕೊನೆಯ ಮನರಂಜನೆಯಾಗಿ ತಾಳಮದ್ದಳೆ ಭೀಷ್ಮ ವಿಜಯ ನಡೆಯಿತು. ಇದರಲ್ಲಿ ಜನಪ್ರಿಯ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು, ಖ್ಯಾತ ಮದ್ದಳೆಗಾರ ಪರಮೇಶ್ವ ಭಂಡಾರಿ ಕರ್ಕಿ, ಉದಯೋನ್ಮುಖ ಚಂಡೆ ವಾದಕ ಗಜಾನನ ಹೆಗಡೆ ಸಾಂತೂರು ಇವರ ಪರಿಣಾಮಕಾರಿ ಹಿಮ್ಮೇಳದಲ್ಲಿ ಉಜರೆ ಅಶೋಕ ಭಟ್ಟರು ಪರಶುರಾಮನಾಗಿಯೂ ರಾಧಾಕೃಷ್ಣ ಕಲ್ಚಾರ್ ಅವರು ಸಾಲ್ವನಾಗಿಯೂ, ವಾಸುದೇವ ರಂಗಾ ಭಟ್ ಅವರು ಭೀಷ್ಮನಾಗಿಯೂ, ಪವನ ಕಿರಣಕೆರೆ ಅವರು ಅಂಬೆಯಾಗಿಯೂ ಹಾಗೂ ಗುರುಪ್ರಸಾದ ಭಟ್ ಮಾಡಗೇರಿ ಇವರು ವೃದ್ಧ ಬ್ರಾಹ್ಮಣನಾಗಿಯೂ ತಮ್ಮ ಪಾತ್ರಗಳನ್ನು ಸಮರ್ಥವಾಗಿ ಚಿತ್ರಿಸಿ ಪ್ರೇಕ್ಷಕರನ್ನು ಮಹಾಭಾರತದ ಅಲೌಕಿಕ ಪ್ರಪಂಚಕ್ಕೆ ಕೊಂಡುಹೋದರು. ಎರಡು ದಿನಗಳಲ್ಲಿ ಜಿಲ್ಲೆ ಹೊರಜಿಲ್ಲೆಯ ನೂರಾರು ಜನ ಕಲಾಸಕ್ತರು ಪಾಲ್ಗೊಂಡು ಯಕ್ಷರಂಗೋತ್ಸವದ ಸಾಂಸ್ಕೃತಿಕ ಸಂಭ್ರಮವನ್ನು ಹೆಚ್ಚಿಸಿದರು.
ಈ ಯಕ್ಷರಂಗೋತ್ಸವವನ್ನು ಹಲವು ವರ್ಷಗಳಿಂದ ದಿ.ಕಡತೋಕಾ ಮಂಜುನಾಥ ಭಾಗವತರು ಹುಟ್ಟುಹಾಕಿದ ಸಂಸ್ಥೆ ಹಳದೀಪುರದ ’ಯಕ್ಷಲೋಕ’ ಇದು ಹಳದೀಪುರದಲ್ಲಿ ನಡೆಸುತ್ತಿದ್ದು ಈ ವರ್ಷ ಕಡತೋಕಾ ಊರಿನ ಸಾಮಾಜಿಕ ಮುಖಂಡರಾದ ಕಡತೋಕಾ ಶಿವಾನಂದ ಹೆಗಡೆ ಅವರ ಮುಂದಾಳುತನದಲ್ಲಿ ಕಡತೋಕಾದಲ್ಲಿಯೇ ಸಂಘಟಿಸಿತ್ತು. ದಿ.ಕಡತೋಕಾ ಮಂಜುನಾಥ ಭಾಗವತರು ತೆಂಕು-ಬಡಗು ತಿಟ್ಟಿನ ಅಗ್ರಮಾನ್ಯ ಭಾಗವತರಾಗಿದ್ದುದರ ಜೊತೆಗೆ ಯಕ್ಷಗಾನ ರಂಗಭೂಮಿಗಾಗಿ ಪ್ರಥಮ ಬಾರಿಗೆ ಯಕ್ಷಗಾನ ಎಂಬ ಮಾಸಪತ್ರಿಕೆಯನ್ನು ಹೊರತಂದಿದ್ದು ಅದು ನಿಂತು ಹೋಗಿತ್ತು. ಕಡತೋಕಾ ಮಂಜುನಾಥ ಭಾಗವತರು ೧೯೫೭ರಲ್ಲಿ ಶಿರಸಿಯಿಂದ ಪ್ರಕಾಶಿಸಿದ ’ಯಕ್ಷಗಾನ’ ಎಂಬ ಪತ್ರಿಕೆಯು ಯಕ್ಷಗಾನ ರಂಗಭೂಮಿಯ ಪ್ರಥಮ ಪತ್ರಿಕೆಯಾಗಿರುವುದು ಅವರ ಹೆಗ್ಗಳಿಕೆಯಾಗಿದೆ. ಮತ್ತೆ ೨೦೦೫ರಲ್ಲಿ ಮಂಜುನಾಥ ಭಾಗವತರು ತಮ್ಮ ಪುತ್ರ ನ್ಯಾಯವಾದಿ ಕಡತೋಕಾ ಗೋಪಾಲಕೃಷ್ಣ ಭಾಗವತರ ಇವರ ಬೆಂಬಲದಲ್ಲಿ ’ಯಕ್ಷಲೋಕ’ ಎಂಬ ಈ ಸಂಸ್ಥೆಯನ್ನು ಹುಟ್ಟುಹಾಕಿ ’ಯಕ್ಷರಂಗ’ ಎಂಬ ಹೆಸರಿನಲ್ಲಿ ಯಕ್ಷಗಾನಕ್ಕೆ ಮೀಸಲಾದ ಮಾಸಪತ್ರಿಕೆಯನ್ನು ಪ್ರಕಟಿಸಲು ಪ್ರಾರಂಭಿಸಿದರು. ಕಳೆದ ೧೯ ವರ್ಷಗಳಿಂದ ’ಯಕ್ಷಲೋಕ ಸಂಸ್ಥೆಯು ಹಲವು ಇನ್ನಿತರ ರಂಗ ಚಟುವಟಿಕೆಗಳ ಜೊತೆಗೆ ನಿರಂತರವಾಗಿ ’ಯಕ್ಷರಂಗ’ ಮಾಸಪತ್ರಿಕೆಯನ್ನು ಪ್ರಕಾಶಿಸುತ್ತ ಬಂದಿದೆ. ’ಯಕ್ಷರಂಗ’ ಮಾಸಪತ್ರಿಕೆಯು ಉತ್ತರ ಕನ್ನಡ ಜಿಲ್ಲೆಯ ಏಕೈಕ ಸಾಂಸ್ಕೃತಿಕ ನಿಯತಕಾಲಿಕವಾಗಿದೆ. ಪತ್ರಿಕೆಯ ಸಂಸ್ಥಾಪ ಸಂಪಾದಕರಾದ ಕಡತೋಕಾ ಮಂಜುನಾಥ ಭಾಗವತರ ನಿಧನದ ನಂತರ ಯಕ್ಷರಂಗೋತ್ಸವವನ್ನು ವಿವಿಧೆಡೆ ಸಂಘಟಿಸಲಾಗುತ್ತಿದೆ. ಈ ಬಾರಿ ಮಂಜುನಾಥ ಭಾಗವತರ ಹುಟ್ಟೂರು ಕಡತೋಕಾದಲ್ಲಿ ಸಂಪನ್ನಗೊಂಡ ಯಕ್ಷರಂಗೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜೊತೆಗೆ ಅನೇಕ ಕಲಾಪ್ರಿಯ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳ ಪ್ರೋತ್ಸಾಹದೊಂದಿಗೆ ಸಂಘಟಿಸಲಾಯಿತು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.