ದಾಂಡೇಲಿ : ಸರಕಾರ ಪ್ರಾಧಿಕಾರ ಹಾಗೂ ಅಕಾಡೆಮಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡುವ ಸಂದರ್ಭದಲ್ಲಿ ಜಿಲ್ಲಾವಾರು ಸಮ ಪ್ರಾತಿನಿಧ್ಯವನ್ನು ನೀಡುವ ಚಿಂತನೆ ಮಾಡಬೇಕಿತ್ತು. ಪ್ರಾಧಿಕಾರ, ಅಕಾಡೆಮಿಗಳಲ್ಲಿ ಕೆಲಸ ಮಾಡುವಂತಹ ಅನೇಕ ಅರ್ಹತೆ ಇದ್ದವರು ಉತ್ತರಕನ್ನಡ ಜಿಲ್ಲೆಯಲ್ಲಿ ಇದ್ದರೂ ಸಹ ಪ್ರಾತಿನಿಧ್ಯ ನೀಡುವಲ್ಲಿ ಕೊರತೆಯಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅವರು ಈ ಬಗ್ಗೆ ನೀಡಿದ ಪ್ರಕಟಣೆಯಲ್ಲಿ ಝಮಿರುಲ್ಲಾ ಷರೀಪರವರಿಗೆ ಜಾನಪದ ಅಕಾಡೆಮಿಯ ಅಧ್ಯಕ್ಷರಾಗುವ ಅರ್ಹತೆಯಿದೆ. ಅದರೆ ಅವರನ್ನು ಸದಸ್ಯರನ್ನಾಗಿ ಸೀಮಿತಗೊಳಿಸಲಾಗಿದೆ. ಜಾನಪದ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡ ಡಾ. ಝಮಿರುಲ್ಲಾ ಷರೀಪರನ್ನ ಹಾಗೂ ಉಳಿದ ಅಕಾಡೆಮಿಗಳ / ಪ್ರಾಧಿಕಾರಗಳ ಸದಸ್ಯರಾಗಿ ಆಯ್ಕೆಯಾದ ಜಿಲ್ಲೆಯ ಎಲ್ಲ ಮಹನೀಯರನ್ನು ಅಭಿನಂದಿಸೋಣ .
ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ, ಕೊಂಕಣಿ ಸಾಹಿತ್ಯ ಅಕಾಡೆಮಿ ಸೇರಿದಂತೆ ಬೇರೆಬೇರೆ ಪ್ರಾಧಿಕಾರ, ಅಕಾಡೆಮಿಗಳಲ್ಲಿ ಇನ್ನಷ್ಟು ಪ್ರಾತಿನಿದ್ಯವನ್ನು ಉತ್ತರ ಕನ್ನಡ ಜಿಲ್ಲೆಗೆ ನೀಡಬೇಕಿತ್ತು. ಆ ಅರ್ಹತೆಯುಳ್ಳವರೂ ಜಿಲ್ಲೆಯಲ್ಲಿದ್ದರು.
ಪ್ರಕಟಗೊಂಡ 18 ಅಕಾಡೆಮಿ, ಪ್ರಾಧಿಕಾರಗಳಲ್ಲಿ ಐದು ಅಧ್ಯಕ್ಷ ಸ್ಥಾನ ದಕ್ಷಿಣ ಕನ್ನಡದ ಪಾಲಾಗಿದೆ. ಆದರೆ ಉತ್ತರಕನ್ನಡಕ್ಕೆ ಒಂದೇ ಒಂದು ಅಧ್ಯಕ್ಷತೆ ಇಲ್ಲ. ಬೇರೆ ಬೇರೆ ಜಿಲ್ಲೆಗೂ ಅಧ್ಯಕ್ಷತೆ ಒಲಿದಿದೆ. ನೇಮಕಗೊಂಡ ಸುಮಾರು 200 ಸದಸ್ಯರಲ್ಲಿ 45 ರಷ್ಟು ಸದಸ್ಯರು ದಕ್ಷಿಣ ಕನ್ನಡದವರಾಗಿದ್ದಾರೆ. ಹಾಗೆಂದು ಇದು ದಕ್ಷಿಣಕನ್ನಡಕ್ಕೆ ಹೆಚ್ಚು ಅವಕಾಶ ಸಿಕ್ಕಿತಲ್ಲಾ ಎಂಬ ಅಸೂಯೆಯೋ ಅಥವಾ ಆಕ್ಷೇಪವೋ ಅಲ್ಲ. ಉತ್ತರಕನ್ನಡಕ್ಕೆ ವಂಚನೆಯಾಗಿದೆ ಎಂದಷ್ಟೇ ಹೇಳಬಲ್ಲೆ ಎಂದು ಹೇಳಿದ್ದಾರೆ.
ಇನ್ನು ಯಕ್ಷಗಾನ ಅಕಾಡೆಮಿಯ ಸದಸ್ಯರ ನೇಮಕಾತಿಯಲ್ಲಂತೂ ಉತ್ತರ ಕನ್ನಡ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗಿದೆ. ಎಲ್ಲ ಸದಸ್ಯರು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿರುವುದು ಇದು ಸಾಂಸ್ಕೃತಿಕ ವಾಗಿ ಉತ್ತರ ಕನ್ನಡ ಜಿಲ್ಲೆಗೆ ಆಗಿರುವ ಅನ್ಯಾಯವೇ ಆಗಿದೆ. ಇದು ಖಂಡನೀಯ. ಯಕ್ಷಗಾನ ಇದು ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಇರುವ ಒಂದು ಕಲೆ. ಹಾಗೆಂದು ಇದು ಕೇವಲ ದಕ್ಷಿಣ ಕನ್ನಡ ಜಿಲ್ಲೆಗಷ್ಟೇ ಸೀಮಿತವಾದ ಕಲೆಯಲ್ಲ. ಯಕ್ಷಗಾನದ ಹುಟ್ಟು ಮತ್ತು ಬೆಳವಣಿಗೆ ಉತ್ತರ ಕನ್ನಡ ಜಿಲ್ಲೆಯಲ್ಲೇ ಆಗಿದ್ದು ಎಂದೇ ಅಧ್ಯಯನದ ಪ್ರಕಾರ ಹೇಳಲಾಗುತ್ತಿದೆ. ಯಕ್ಷಗಾನಕ್ಕೆ ಪದ್ಮಶ್ರೀ ಪ್ರಶಸ್ತಿ ತಂದುಕೊಟ್ಟ ಮೊದಲ ಜಿಲ್ಲೆ ಕೂಡ ಉತ್ತರ ಕನ್ನಡ. ಮೇಳಗಳು ಕಡಿಮೆಯಿದ್ದರೂ ಕಲಾವಿದರು ಇಲ್ಲಿಯವರೇ ಹೆಚ್ಚು. ಇಲ್ಲಿ ಯಕ್ಷಗಾನದ ಹಲವಾರು ಮೇರು ನಟರಿದ್ದಾರೆ. ಯಕ್ಷಗಾನ ಪ್ರಸಂಗ ಕರ್ತರಿದ್ದಾರೆ. ಪ್ರಸಿದ್ದ ಭಾಗವತರಿದ್ದಾರೆ. ಪ್ರಸಾದನ ಪರಿಣಿತರಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಯಕ್ಷಗಾನ ಕಲಾವಿದರಿದ್ದಾರೆ.
ಯಕ್ಷಗಾನದಲ್ಲಿ ತೆಂಕುತಿಟ್ಟು , ಬಡಗುತಿಟ್ಟು ಸೇರಿದಂತೆ ಹಲವು ರೀತಿಯ ತಿಟ್ಟುಗಳಿದ್ದು ಇವು ವಿವಿಧ ಪ್ರದೇಶಗಳನ್ನ ಪ್ರತಿನಿಧಿಸುತ್ತವೆ. ಆದರೆ ಸರ್ಕಾರ ಈ ಬಗೆಯ ಪ್ರಾದೇಶಿಕ ಪ್ರಾಕಾರಗಳಿಗೆಗಳಿಗೆ ಪ್ರಾತಿನಿಧ್ಯವನ್ನು ನೀಡದೇ, ಕೇವಲ ಒಂದು ಜಿಲ್ಲೆಗೆ ಮಾತ್ರ ಪ್ರಾತಿನಿಧ್ಯ ನೀಡಿರುವುದು ಪ್ರಶನಾರ್ಹವೇ ಆಗಿದೆ. ಯಕ್ಷಗಾನ ಅಕಾಡೆಮಿಗೆ ಉಡುಪಿ ಜಿಲ್ಲೆಯವರು ಅಧ್ಯಕ್ಷರಾಗಿದ್ದು, ಉಳಿದ 9 ಜನ ದಕ್ಷಿಣ ಕನ್ನಡದವರೇ ಸದಸ್ಯರಾಗಿದ್ದಾರೆ. (ಇದು ದಕ್ಷಿಣ ಕನ್ನಡದ ಅಕಾಡೆಮಿ ಆದಂತಾಗಿದೆ) ಇದು ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಕಲಾವಿದರು ಮತ್ತು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದ್ದು, ಸರಕಾರ ಪ್ರಕಟಿಸಿರುವ ಯಕ್ಷಗಾನ ಅಕಾಡೆಮಿಯನ್ನು ಪುನರ್ ಪರಿಶೀಲಿಸಿ ಈ ಅಕಾಡೆಮಿಯಲ್ಲಿ ಅರ್ಧದಷ್ಟು ಪ್ರಾತಿನಿದ್ಯವನ್ನು ಉತ್ತರ ಕನ್ನಡ ಜಿಲ್ಲೆಗೆ ನೀಡುವಂತಾಗಬೇಕೆಂದು ಬಿ.ಎನ್.ವಾಸರೆ ಒತ್ತಾಯಿಸಿದ್ದಾರೆ.