Slide
Slide
Slide
previous arrow
next arrow

ಕೃಷಿ ಭೂಮಿ -ರೈತರ ಶ್ರೀರಕ್ಷೆ- ವಿಶೇಷ ಲೇಖನ

300x250 AD

ಡಾ. ಕೋಮಲಾ ಭಟ್ಟ ನಿವೃತ ಪ್ರಾಚಾರ್ಯರು ಎಮ್‌ ಎಮ್‌ ಕಲಾ ಮತು ವಿಜ್ಞಾನ ಮಹಾವಿದ್ಯಾಲಯ ಶಿರಸಿ

ದೂರದ ಜರ್ಮನಿಯಲ್ಲಿ ಕುಳಿತು ಪತ್ರಿಕೆಯೊಂದನ್ನು ಓದುತ್ತಿದ್ದಾಗ ಸ್ವರ್ಣವಲ್ಲಿ ಶ್ರೀಗಳಿಂದ ಕೃಷಿ ಭೂಮಿ ಕಾಪಾಡುವ ಆಂದೋಲನ, ಮಠದ ಮಹತ್ವದ ಯೋಜನೆ. ಓದಿ ಸಂತಸವಾಯಿತು. ಕಾರಣ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳು ಬರಿದಾಗುತ್ತಿವೆ. ಶತಮಾನಗಳಿಂದ ಉತ್ತರಕನ್ನಡದ ಜನರು ನೆಚ್ಚಿಕೊಂಡು ಬಂದಿರುವ ಕೃಷಿ,ಹೈನುಗಾರಿಕೆ, ಕರಗುತ್ತಿದೆ. ಭೂಮಿ ಎಂದರೆ ಬರೀ ರಿಯಲ್‌ ಎಸ್ಟೇಟ್ ಬಿಸನೆಸ್‌ಗೆ ಸೀಮಿತವಾಗುತ್ತಿದೆ. ಹಳ್ಳಿಗಳ ಕಡೆಗೆ ಹೋದರೆ ಬೇಣಗಳು ರೆಸಾರ್ಟ್‌ಗಳಾಗಿ, ನಿವೇಶನಗಳನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ. ಅಡಿಕೆ ತೋಟದ ಸಲುವಾಗಿ ಬಿಟ್ಟ ಸರಕಾರಿ ಬೇಣವನ್ನು ದನಗಳ ಮೇವಿಗೆ, ಇಲ್ಲ ಇತರ ಬಳಕೆಗಳಿಗೆ ಅಂದರೆ ಸೊಪ್ಪಿಗೆ ಅಲ್ಪ ಸ್ವಲ್ಪ ಉರುವಲಿಗೆ, ಮೇವಿಗೆ ಉಪಯೋಗಿಸಿ ಮರ ಗಿಡಗಳನ್ನು ಇಲ್ಲಿಯತನಕ ಕಾಯ್ದುಕೊಂಡು ಬರಲಾಗಿತ್ತು. ಬೇಣಗಳು ಬೋಳಾಗಿ,ಹಸುಗಳು ಕಡಿಮೆಯಾಗಿ,ಜುಳು ಜುಳು ಹರಿಯುತ್ತಿರುವ ನೀರು ಒಂದೇ ತಿಂಗಳಲ್ಲಿ ಬರಿದಾಗಿ ,ಕಾಡು ಮಾಯವಾಗಿ ಎಲ್ಲೆಲ್ಲೂ ಮನೆಗಳು ತಲೆ ಎತ್ತುತ್ತಿವೆ. ಊರುಗಳೆಲ್ಲ ಯುವಕರಿಲ್ಲದೇ ಬಣಗೆಡುತ್ತಿದೆ.
ಜಿಲ್ಲೆಯಲ್ಲಿ ಶಿಕ್ಷಿತರ ಸಂಖ್ಯೆ, ಉದ್ಯೋಗ ಅರಸಿ ನಗರಗಳಿಗೆ ಹೋಗುವವರ ಪ್ರಮಾಣ ಹೆಚ್ಚಾಗಿ ,ಅಷ್ಟರಲ್ಲಾಗಲೇ ಬುದ್ದಿವಂತರೆನಿಸಿಕೊಂಡವರು ಊರು ತೊರೆದು ಪಟ್ಟಣ ಸೇರಿ ಬದುಕು ಕಟ್ಟಿಕೊಳ್ಳಲು ಪ್ರಾರಂಭಿಸಿಯಾಗಿತ್ತು. ಆದರೆ ಕೊವಿಡ್‌ ಸಮಯದಲ್ಲಿ ಬೇರೆ ಊರಿನಿಂದ ತಮ್ಮ ಊರಿಗೆ ಬಂದ ಹಲವಾರು ಐಟಿ ಉದ್ಯೋಗಿಗಳು ತಮ್ಮ ತಮ್ಮ ಊರಿನಲ್ಲಿ ಕೆಲಸ ಪ್ರಾರಂಭ ಮಾಡಿದ ನಂತರ ಬದಲಾವಣೆ ತೀವ್ರಗೊಂಡಿತು. ಪಟ್ಟಣಗಳಲ್ಲಿ ವಾಸವಾಗಿದ್ದ ಉದ್ಯೋಗಿಗಳು ತಮ್ಮ ಮನೆಗಳಲ್ಲಿ ಬಂದು ಖಾಲಿ ಇದ್ದ ಜಾಗ ಸುಮ್ಮನೆ ಇಡದಿರಿ ಬೇಕಾದಷ್ಟು ಹಣ ಮಾಡಬಹುದು ಎಂಬ ಆಮಿಷ ತೋರಿಸಿರಲೂಬಹುದು. ಹಲವರು ತಮ್ಮ ನೌಕರಿ ಬಿಟ್ಟು ಹಳ್ಳಿಗಳಲ್ಲಿ ವಾಸಿಸಲು ಪ್ರಾರಂಭಿಸಿರಲೂ ಬಹುದು. ಅಷ್ಟರಲ್ಲೇ ಅಪ್ಪ ಅಮ್ಮಹೆಚ್ಚಿನ ಊರುಗಳಲ್ಲಿ ಅಬ್ಬೆಪಾರಿಗಳಾಗುವ ಹಂತ ತಲುಪಿಯಾಗಿತ್ತು. ನಗರೀಕರಣದ ಕದಂಬಬಾಹುಗಳು ಹಳ್ಳಿಗಳ ಬಾಚಿ ತಬ್ಬಿಕೊಂಡಾಗಿತ್ತು. ಇನ್ನೇನು? ಯಾರಿಗಾಗಿ ಇಷ್ಟೆಲ್ಲಾ ಹೋರಾಟ? ಹಗಲು ರಾತ್ರಿಯೆನ್ನದೇ ಮಕ್ಕಳ ಸಲುವಾಗಿ ಉಳಿಸಿಕೊಂಡ ಭೂಮಿಯನ್ನು ,ಮಣ್ಣಿನ ವಾಸನೆಯ ಅರಿವಿರದ, ಕೃಷಿಯ ಲವಲೇಶ ಗೊತ್ತಿರದ ಮಕ್ಕಳಿಗೆ ನೋಡಿಕೊಳ್ಳಿ ಎನ್ನುವುದು ? ಆದಕ್ಕೆ ಕೋಟಿ ಕೋಟಿ ಗಿಟ್ಟಿಸುವ, ಯಾರು ಹೆಚ್ಚು ದುಡ್ಡುಕೊಡುತ್ತಾರೋ ಅವರಿಗೆ ಜಮೀನು ಮಾರಿ ಕಂತೆ ಕಂತೆ ಹಣದ ಜೊತೆಗೆ ಮಕ್ಕಳೊಡನೆ ಇರುವ ಕನಸ ಹೊತ್ತು ಪಟ್ಟಣದ ಕಡೆ ಪಾಲಕರು/ ಕೃಷಿಕರು ಮುಖಮಾಡಿಯಾಗಿತ್ತು. ಭೂಮಿಯ ಪ್ರೀತಿ ಕಡಿಮೆಯಾಗಿ ಇಳೆ ವಾಣಿಜ್ಯೀಕರಣ ಪ್ರಕ್ರಿಯೆಯಾಗಿ ಪರಿವರ್ತನೆಯಾಯಿತು. ನಗರಗಳಲ್ಲಿ ಕಂಡುಬರುವ ಹೆಚ್ಚಿನ ಬಡಾವಣೆಗಳೂ ಇದೇರೀತಿಯಲ್ಲಿ ಪರಿವರ್ತನೆಗೊಂಡ ಸಂಪದ್ಭರಿತ ಹಳ್ಳಿಗಳು. ಒಮ್ಮೆ ಮೈಸೂರಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಅಟೋ ಚಾಲಕ ಹೇಳಿದ ಮಾತು ಕೇಳಿ ಕರುಳು ಚುರುಕ್‌ ಎಂದಿತು. ಅವನ ಸಂಬಂಧಿಕರು ಹಳ್ಳಿಗಳಲ್ಲಿ ಸುಖವಾಗಿ ವಾಸ ಮಾಡಿ ಕೃಷಿಯನ್ನು ನೆಚ್ಚಿಕೊಂಡು ಸುಂದರ ಬದುಕು ರೂಪಿಸಿಕೊಂಡಿದ್ದರು. ಅವರ ಮಗನಿಗೆ ಅವರ ಪಕ್ಕದ ಮನೆಯವರು ತಮ್ಮ ಹೊಲ ಮಾರಿ ಕೋಟಿ ಹಣ ತೆಗೆದುಕೊಂಡು ಬೆಂಗಳೂರು ಸೇರಿದ ವಿಷಯ ಗೊತ್ತಾಗಿ ಪಾಲಕರ ಮನಃ ಪರಿವರ್ತನೆ ಮಾಡಿ ತಾನೂ ಹೊಲ ಮಾರಿಸಿ ಬೆಂಗಳೂರು ಸೇರಿ ಒಂದು ಸಣ್ಣ ಮನೆಯಲ್ಲಿ ಇಡೀ ಪರಿವಾರ ಉಳಿದು ಯಾವ ಕೆಲಸವೂ ಬಾರದೇ ಮಕ್ಕಳು ಮಜ ಉಡಾಯಿಸಿ ಇಂದು ಬೀದಿಪಾಲಾಗಿರುವ ಸತ್ಯ ಕಥೆ ಹೇಳಿದ ಮೇಲೆ ಅದೆಷ್ಟೋ ಜನ ಹೀಗೇ ದುಡ್ಡಿನ ಆಸೆಗೆ, ಮನೆ ಮಠ ತೊರೆದು ಪಟ್ಟಣ ಸೇರಿ ಯಾವ ಕೆಲಸ ಮಾಡಬೇಕು ಎಂದು ತಿಳಿಯದೇ ಬೀದಿ ಪಾಲಾದ ಘಟನೆಗಳು ಲೆಕ್ಕಕ್ಕೆ ಸಿಗದಿಷ್ಟು ಇರಬಹುದೇನೋ! ಎಂಬ ಅನಿಸಿಕೆ ಮನವನ್ನು ಕಾಡಲು ಪ್ರಾರಂಬಿಸಿತು.

ಇಂದು ಉತ್ತರ ಕನ್ನಡದ ಬಹುತೇಕ ಹಳ್ಳಿಗಳು ಖಾಲಿ ಖಾಲಿ. ತಂದೆ ತಾಯಿಗೆ ಒಬ್ಬರೋ ಇಬ್ಬರೋ ಮಕ್ಕಳು. ಯುವಜನತೆ ಪಟ್ಟಣದ ಕಡೆ ಮುಖ ಮಾಡಿ ಬಹಳ ಕಾಲವಾಗಿದೆ. ಇರುವವರು ಕೈಲಾಗದ ವೃದ್ಧರು.ಮುಂದಿನ ಪೀಳಿಗೆಗೆ ಮಣ್ಣಿನ ವಾಸನೆ ತಿಳಿಯದು. ಪಟ್ಟಣದ ಹುಡುಗನೊಬ್ಬ ನಮ್ಮ ಮನೆಗೆ ಬಂದಾಗ ನಮ್ಮಹಳ್ಳಿ ಮನೆಯಲ್ಲಿ ಇನ್ನೂ ಭತ್ತ ಬೆಳೆಯುತ್ತಿದ್ದಾರೆ ಎಂದೆ. ಭತ್ತ ಮನೆಯ ಒಳಗೆ ಬೆಳೆಯುತ್ತಾರೆಯೇ? ಎಂದು ಗಂಭೀರವಾಗಿ ಪ್ರಶ್ನಿಸಿದ ಆ ಹುಡುಗ. ಭಾರತದಲ್ಲಿ ಹುಟ್ಟಿ ಆಸ್ಟೇಲಿಯಾದಲ್ಲಿ ಓದಿದ ಹುಡುಗನಿಗೆ ಭತ್ತ ಎಲ್ಲಿ ಬೆಳೆಯುತ್ತಾರೆ ಎಂಬ ವಿಷಯ ಗೊತ್ತಿಲ್ಲ. ಅಥವಾ ಮಕ್ಕಳಿಗೆ ತಂದೆ ತಾಯಿ ನಮ್ಮ ಹಾಗೆ ನೀನಾಗಬೇಡ ಮಗನೇ, ಈ ಮಣ್ಣಿನ ಸಹವಾಸ ನಿನಗೆ ಸಾಕು ನೀನು ಓದಿ ಪಟ್ಟಣ ಸೇರಿಕೊ. ಸಂಬಳ ಬಂದರೆ ಏನಾದರೂ ಮಾಡಬಹುದು ಎಂಬ ಬುದ್ದಿವಾದ ಹೇಳಿ ನಗರವಾಸವೇ ಶ್ರೇಷ್ಠವೆಂಬುದನ್ನು ಬಿಂಬಿಸಿ ಕೃಷಿಯಲ್ಲಿ ಆಸಕ್ತಿ ಹುಟ್ಟದಂತೆ ನೋಡಿಕೊಳ್ಳುತಾರೆ. ಕಾಲೇಜಿನಲ್ಲಿ ಓದುತ್ತಿರುವ ಹೆಣ್ಣುಮಕ್ಕಳಿಗೆ ನಿಮಗೆ ಹೊಲ ತೋಟಗಳು ಇದೆಯಾ ಎಂದು ಕೇಳಿದರೆ ಅದು ನಮ್ಮಪ್ಪನಿಗೆ ಗೊತ್ತು ಮೇಡಂ ನಾವೆಂದೂ ಹೋಗಿಲ್ಲ ಅನ್ನುತ್ತಾರೆ. ಐಟಿ ಬಿಟಿಗಳಿಂದ ಹಲವಾರು ಬುದ್ದಿವಂತ ಬಡ ಮಕ್ಕಳಿಗೆ ಉದ್ಯೋಗ ದೊರೆತು ತಮ್ಮ ಬದುಕನ್ನು ಕಟ್ಟಿಕೊಂಡಿರಬಹುದು ಆದರೆ ಸಾಕಷ್ಟು ಫಲವತ್ತಾದ ಭೂಮಿ ಹೊಂದಿರುವ ಯುವ ಜನತೆ ಕೃಷಿಯಿಂದ ವಿಮುಖರಾಗಿ ಭೂಮಿಯನ್ನು ಮಾರಾಟ ಮಾಡಿ ನೆಲೆ ಕಳೆದು ಕೊಳ್ಳುತ್ತಿರುವದು ಶೋಚನೀಯವೇ ಸರಿ.

ಕೃಷಿ ಭೂಮಿ ಮಾರಾಟಕ್ಕೆ ಮುಂದಾಗುತ್ತಿರುವದಕ್ಕೆ ಕಾರಣಗಳು:
೧. ಕೃಷಿಯಲ್ಲಿ ನಿರಾಸಕ್ತಿ:
ಎಲ್ಲವೂ ಗ್ಯಾರಂಟಿ,ಅಕ್ಕಿ,ತಿಂಗಳಿಗೆ ಹೆಂಗಸರಿಗೆ ೨೦೦೦ ರೂಪಾಯಿ,ಭಾಗ್ಯಲಕ್ಷ್ಮಿ,ಗೃಹಲಕ್ಷ್ಮಿ ಕರೆಂಟ್ ಪುಕ್ಕಟೆ, ಹೆಂಗಸರಿಗೆ ತಿರುಗಾಟ ಪುಕ್ಕಟೆ, ಯಾಕೆ ಅಷ್ಟೊಂದು ಕಷ್ಟ ಪಡಬೇಕು ಎಲ್ಲಾ ಪುಕ್ಕಟೆ ಬರುವಾಗ. ಕಷ್ಟ ಪಟ್ಟು ಭತ್ತ ಬೆಳೆಯುವವರ ಸಂಖ್ಯೆ ಈಗ ಗಣನೀಯವಾಗಿ ಕಡಿಮೆಯಾಗುತ್ತಿದೆ.

೨. ಕೃಷಿಯಿಂದ ಲಾಭ ಕಡಿಮೆ:
ತಿಂಗಳಿಗೆ ಬರುವ ಪಗಾರಿನ ಮುಂದೆ ಕೃಷಿಯಿಂದ ಬರುವ ಲಾಭ ಬಹಳ ಕಡಿಮೆ. ವರ್ಷವಿಡಿ ದುಡಿಯಬೇಕು ಪಗಾರು ಬರುವವರ ತರಹ ಇರಲು ತಮಗಾಗದು ಎಂಬ ಹೋಲಿಕೆ ಕೃಷಿಕರನ್ನು ಕೃಷಿಯಿಂದ ವಿಮುಖಗೊಳಿಸುತ್ತಿದೆ.

೩. ಹೈನುಗಾರಿಕೆ ಕ್ಷೀಣ: ಹೈನುಗಾರಿಕೆ ಗಣನೀಯವಾಗಿ ನಮ್ಮ ಜಿಲ್ಲೆಯಲ್ಲಿ ಕಡಿಮೆಯಾಗಲು ಮೂಲ ಕಾರಣವೆಂದರೆ ದನ ಕಟ್ಟಿದರೆ ಮನೆ ಬಿಟ್ಟು ಹೋಗಲು ಸಾಧ್ಯವಾಗದು. ಮಕ್ಕಳು ಹೊರಗಡೆಗೆ ಇರುತ್ತಾರೆ ಅವರ ಜೊತೆ ಕಾಲ ಕಳೆಯಲು, ಪ್ರವಾಸಕ್ಕೆ ಹೋಗಲು ತಾಪತ್ರಯ. ಈ ಗೋಜೇ ಬೇಡ ಗೊಬ್ಬರ ತೆಗೆದುಕೊಂಡರಾಯಿತು ಎಂಬ ಮನೋಭಾವ ಕೃಷಿಕರಲ್ಲಿ ಹೆಚ್ಚಾಗುತ್ತಿದೆ. ಕೃಷಿಯಿಂದ ಬಂದ ಉತ್ಪನ್ನ ಕೆಲಸಗಾರರಿಗೆ ಸಮ ಎಂಬ ಮಾತು ಕೃಷಿಕರಲ್ಲಿ ಮನೆಮಾತಾಗಿದೆ. ಇದಕ್ಕೆ ಪೂರಕವಾಗಿ ಕೆಲಸಗಾರರ ಕೊರತೆ ಎದ್ದು ಕಾಣುತ್ತಿದ್ದು ಕೃಷಿಕರನ್ನು ಹೈರಾಣಗೊಳಿಸಿದೆ.

೪. ಪರಿಣಿತ ಕಾರ್ಮಿಕರ ಕೊರತೆ
ಕೊನೆ ಕೊಯ್ಲ ಬಂತೆಂದರೆ ಕೊನೆ ಗೌಡನದೇ ಚಿಂತೆ, ಗದ್ದೆ ನೆಟ್ಟಿ ಬಂತೆಂದರೆ, ತೆಂಗಿನ ಕಾಯಿ ಕೊಯ್ಲಿಗೆ ಮತ್ತದೇ ಪರಿಣಿತ ಕೆಲಸಗಾರರ ಚಿಂತೆ, ಹಲವಾರು ತಾಂತ್ರಿಕತೆ, ಆಧುನಿಕತೆ ಮೈಗೂಡಿಸಿಕೊಂಡರೂ ಕೆಲಸಗಾರರ ಕೊರತೆ ಎದ್ದು ಕಾಣುತ್ತಿದೆ.

300x250 AD

೫. ಭೌಗೋಳಿಕ ಅಂಶಗಳು
ಮಳೆ ಹೆಚ್ಚು,ಮಳೆ ಕಡಿಮೆ, ಮಳೆಯ ಸಂಗಡ ಜೂಜಾಟ ನಿರಂತರ, ನೀರಿನ ಕೊರತೆ,ಕಾಡುಪ್ರಾಣಿಗಳಿಂದ ಬೆಳೆ ನಾಶಇತ್ಯಾದಿ ನೈಸರ್ಗಿಕ ಕಾರಣಗಳು ಕೃಷಿಕರನ್ನು ಹೈರಾಣಗೊಳಿಸಿದೆ.

೬. ಐಷಾರಾಮಿ ಬದುಕಿನ ಆಸೆ, ನಿರೀಕ್ಷೆ:
ಕೈ ಕೆಸರಾದರೆ ಬಾಯ ಮೊಸರು ಹಾಸಿಗೆ ಇದ್ದಷ್ಟು ಕಾಲು ಚಾಚು, ಬರೀ ಗಾದೆಯಾಗಿ ಉಳಿದಿದೆ. ಎಲ್ಲರೂ ದುಡಿಮೆಗಿಂತ ಮಿಗಿಲಾಗಿ ನೀರೀಕ್ಷೆಗಳು, ಸುಖ, ಅವಶ್ಯಕತೆಗೆ ಮೀರಿದ ಆಕಾಂಕ್ಷೆಗಳು, ನಿರಾಸೆಯಾದರೆ ಆತ್ಮಹತ್ಯೆಗಳಂತ ಹೀನ ಕೃತ್ಯಗಳು, ಹೇಗಾದರಾಗಲಿ, ಕೈಯಲ್ಲಿ ಕಂತೆಕಂತೆ ದುಡ್ಡಿರಬೇಕೆಂಬ ಆಸೆ.

೭. ಮಾರ್ಗದರ್ಶನದ ಕೊರತೆ
ಸರಿಯಾದ ಮಾರ್ಗದರ್ಶನದ ಕೊರತೆ ಎಲ್ಲೆಲ್ಲುಕಾಣುತ್ತಿದೆ. ಮಕ್ಕಳು ಮನೆಯಿಂದ ಹೊರಗೆ ಇದ್ದವರ ಪಾಡು ಹೇಳಲಸದಳ. ಜಮೀನು ಕೊಡಬೇಕೆ, ಇಟ್ಟುಕೊಳ್ಳಬೇಕೆ ವಯಸ್ಸಾಗಿದೆ ತಮಗೆ ದುಡಿಯಲಿಕ್ಕೆ, ದುಡಿಸಲಿಕ್ಕೆ ಆಗದು ಏನು ಮಾಡೋಣ, ಮನೆಯಲ್ಲಿದ್ದ ಗಂಡುಮಕ್ಕಳಿಗೆ ಮದುವೆಯಿಲ್ಲ, ಮಕ್ಕಳಿಲ್ಲ, ಹೊರಗಡೆ ಇದ್ದವರು ಬರಲೊಪ್ಪರು, ಕಷ್ಟ ಪಡಬೇಡಿ ,ಮಾರಿಬಿಡಿ ಎಂಬ ಸಲಹೆ ಮಕ್ಕಳಿಂದ, ಮನಸೊಪ್ಪದು, ೧೦೦-೨೦೦ ವರ್ಷಗಳಿಂದ ನಿರಂತರವಾಗಿ ಭೂಮಿಯ ಜೊತೆ ಬೆಸೆದ ಬಾಂಧವ್ಯ, ಭೂಮಿಹುಣ್ಣಿಮೆಯ ಪೂಜೆ,ತೋಟದಲ್ಲಿ ಸವೆಸಿದ ಹೆಚ್ಚಿನ ಸಮಯ, ಮದ್ದು ಹೊಡೆಯುವಾಗಿನ ಕಲರವ, ಕೊನೆಕೊಯ್ಲಿನ ಸಿಹಿ ಘಳಿಗೆ, ಪೇಟೆಗೆ ಅಡಿಕೆ ತರುವಾಗಿನ ಖುಷೀ, ಕೊನೆ ಹೊಲಿಕೆಗೆ ಮಾಡುವ ಸಿಹಿ ತಿನಿಸು , ಎಲ್ಲಾ ನೆನಪಾದರೆ ಬೇಡ ನಮ್ಮೂರೇ ನಮಗೆ ಲೇಸು ಎಂಬ ಭಾವ, ಆದರೆ ವಯಸ್ಸು ಖಾಯಿಲೆ ಇಲ್ಲಿಇರಗೊಡದು.

೮. ಸಾಮಾಜಿಕ ಅಂಶಗಳು
ಸಾಮಾಜಿಕ ಬದಲಾವಣೆ ಅತಿ ವೇಗದಲ್ಲಿ ಸಾಗುತ್ತಿದೆ. ಹೆಣ್ಣು ಮನಸ್ಸು ಮಾಡಿದರೆ ಎಲ್ಲ ಸಾಧ್ಯ.ಒಂದು ಕಾಲದಲ್ಲಿ ಕೃಷಿ ಭೂಮಿ ಇದ್ದರೆ ಮಾತ್ರ ಹೆಣ್ಣುಮಕ್ಕಳನ್ನು ಕೊಡುತ್ತಿದ್ದ ಪಾಲಕರು ಇಂದು ಬದಲಾಗುತ್ತಿದ್ದಾರೆ. ಮನೆಯಲ್ಲಿ ಕೃಷಿ ನೆಚ್ಚಿಕೊಂಡವರಿಗೆ ಇರುವ ಒಬ್ಬ ಮಗಳನ್ನು ಕೊಡಲು ಮನಬಾರದೇ, ಕೃಷಿಯ ಲವಲೇಷ ಗೊತ್ತಿರದಂತೇ ಬೆಳೆಸುವದು, ನಮ್ಮ ಸಂಸ್ಕೃತಿಯನ್ನುಮಕ್ಕಳಲ್ಲಿ ಸರಿಯಾಗಿ ತುಂಬದೇ ಇರುವದು ಇನ್ನೊಂದು ಪ್ರಮುಖ ಅಂಶ.ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ, ಅಣ್ಣತಮ್ಮಂದಿರ ವ್ಯಾಜ್ಯ. ೧೦-೨೦ ವರ್ಷವಾದರೂ ಮುಗಿಯದು, ಮುಗಿದರೂ ಅಲ್ಲಿ ವಾಸ ಮಾಡಲು ಆಗದೇಮಾರಿ ಬೇರೆಡೆ ಹೋಗುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಸಮಪಾಲಿನಡಿಯಲ್ಲಿ ಅದೆಷ್ಟೋ ಮನೆಗಳಲ್ಲಿ ನಾಕೊಡೆ ನೀ ಬಿಡೆ , ಮತ್ತದೇ ವ್ಯಾಜ್ಯ, ಮಾರಾಟದಲ್ಲಿ ಅಂತ್ಯ.

ಪರಿಹಾರೋಪಾಯಗಳು:

ಇದಕ್ಕೆಲ್ಲಾ ಪರಿಹಾರ ಇಲ್ಲದಿಲ್ಲ. ನಮ್ಮ ಸ್ವರ್ಣವಲ್ಲಿ ಗುರುಗಳು ಈ ನಿಟ್ಟಿನಲ್ಲಿ ಪ್ರಯತ್ನಪ್ರಾರಂಭಿಸಿರುವುದು ನಮಗೆಲ್ಲಾ ಭರವಸೆಯನ್ನು ಹೆಚ್ಚಿಸಿದೆ. ನೆಲೆ ಕಳಕೊಂಡರೆ ಬೆಲೆ ಇರದು, ನೆಲೆಯ ಬೆಲೆ ಏನೆಂಬುದು ನೆಲೆ ಇಲ್ಲದವರನ್ನು ನೋಡಿ ತಿಳಿದುಕೊಳ್ಳಬೇಕಿದೆ. ನಾವಿಂದು ಇಷ್ಟು ಆತ್ಮ ವಿಶ್ವಾಸ ಹೊಂದಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ಸ್ವಂತ ನೆಲ. ಭೂಮಿ ನಮ್ಮ ಕೈ ಬಿಡದು ಎಂಬ ಆಶಾಭಾವನೆ. ನೌಕರಿ ಬದುಕು ಪರಾವಲಂಬನೆ. ಭೂಮಿ ಸ್ವಂತದ್ದಾದರೆ ಹೇಗಾದರೂ ಜೀವನ ನಡೆಸಬಹುದು ಎಂಬ ಗೊತ್ತಿರುವ ಸತ್ಯವನ್ನು ಪುನಃಪುನಃ ಮನವರಿಕೆ ಮಾಡಿಕೊಡಬೇಕಾಗಿದೆ. ಬದುಕಿನ ಉದ್ದೇಶ ಸಹಜಜೀವನ. ಅದು ಸವಿಜೇನಿನಂತೇ. ಅದಕ್ಕೆ ಪೂರಕ ನಮ್ಮ ನೆಲ, ಜಲ. ಕೃಷಿಯನ್ನು ಕೀಳರಿಮೆಯಿಂದ ಕಾಣುವ ಜನಗಳು, ಅದರಲ್ಲೇ ದ್ವೀತಿಯ, ತೃತೀಯ ಮಾದರಿಯ ಉದ್ಯೋಗ ಸೃಷ್ಟಿ ಮಾಡಿ ಸೈ ಎನ್ನಿಸಿಕೊಂಡವರಿಂದ ಪಾಠ ಕಲಿಯುವ ಕಾಲ ಸನ್ನಿಹಿತವಾಗಿದೆ. ಸ್ತ್ರೀಯರ ಮನ ಬದಲಿಸುವ ,ಕೃಷಿಯಲ್ಲಿ ಇರುವ ನಿಜ ಸುಖ ಅದರ ಅವಶ್ಯಕತೆ, ಅನಿವಾರ್ಯತೆ ಮನದಟ್ಟು ಮಾಡುವ ಕಾರ್ಯ ಈಕೂಡಲೇ ಆಗಬೇಕಿದೆ. ಇದು ಅಷ್ಟು ಸುಲಭದ ಕೆಲಸವಲ್ಲ. ಭೂಮಿ ತಾಯಿ ಅನ್ನುವ ನಾವೇ ಇಂದು ಅದನ್ನು ಮಾರಿ ಮುಂದಿನ ಪೀಳಿಗೆಯನ್ನು ಅನಾಥರನ್ನಾಗಿ ಮಾಡ ಹೊರಟಿದ್ದೇವೆ ಎಂಬುದನ್ನು ಸಾರಿ ಸಾರಿ ಹೇಳಬೇಕಿದೆ. ಕೃಷಿ ಭೂಮಿ -ರೈತರ ಶ್ರೀರಕ್ಷೆ ಅದು ಎಂದಿಗೂ ನಮ್ಮ ಕೈ ಬಿಡದು ಇದು ಎಂದಿಗೂ ಸತ್ಯ. ಇನ್ನೂ ಕಾಲ ಮಿಂಚಿಲ್ಲ. ಸ್ವರ್ಣವಲ್ಲಿ ಶ್ರೀಗಳ ಕೃಪಾಶೀರ್ವಾದದಿಂದ ನಮ್ಮೆಲ್ಲರ ಗಟ್ಟಿ ಮನೋಬಲದಿಂದ ಅದನ್ನು ಸಾಧಿಸೋಣ. ನಾವೆಲ್ಲಾ ಸೇರಿ ಇದನ್ನು ಆಂದೋಲನವಾಗಿಸೋಣ.

Share This
300x250 AD
300x250 AD
300x250 AD
Back to top