ಶಿರಸಿ: ನಾಡಿನ ಪ್ರಸಿದ್ಧ ಜಾತ್ರೆಯಾಗಿರುವ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ಇದೇ ಮಾ.19ರಿಂದ ಆರಂಭವಾಗುತ್ತಿದೆ. ಅದಕ್ಕೆ ಬೇಕಾದ ಎಲ್ಲ ಸೌಲಭ್ಯವನ್ನು ದೇವಾಲಯದ ಆಡಳಿತ ಮಂಡಳಿ, ಪೋಲೀಸ್ ಇಲಾಖೆ, ನಗರಸಭೆ, ಕಂದಾಯ ಹಾಗೂ ಇತರ ಇಲಾಖೆಯ ಅಧಿಕಾರಿಗಳು, ಸಿಬ್ಬಂಧಿಗಳು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಸಿದ್ಧತೆ ನಡೆಸಿದ್ದಾರೆ. ಬಾಬುದಾರರು ಅವರ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಪೋಲೀಸ್ ಇಲಾಖೆ ಭದ್ರತೆಗೆ ಎಲ್ಲ ಸಿದ್ಧತೆ ಮಾಡಿ 200 ಸಿಸಿ ಕ್ಯಾಮೆರಾ ಅಳವಡಿಸಿ ನಿಗಾ ಇಡುವ ಕೆಲಸ ಮಾಡುತ್ತಿದೆ. ನಗರಸಭೆ ಮಹಿಳೆಯರು ಹಾಗೂ ಪುರುಷರಿಗಾಗಿ ಪ್ರತ್ಯೇಕ ಶೌಚಾಲಯ ಒದಗಿಸುತ್ತಿದ್ದು, ಸ್ವಚ್ಛತೆಗೆ ಬೇಕಾಗುವ ಎಲ್ಲ ವ್ಯವಸ್ಥೆ ಕಲ್ಪಿಸುವ ಕೆಲಸ ನಡೆಸುತ್ತಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಜಾತ್ರಾ ಪರಿಸರಕ್ಕೆ ಭೇಟಿ ನೀಡಿ, ತಯಾರಿಗಳನ್ನು ವೀಕ್ಷಿಸಿ ಮಾಧ್ಯಮದೊಡನೆ ಮಾತನಾಡುತ್ತಾ, ಜಾತ್ರಾ ಚಪ್ಪರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಸಾರಿಗೆ ಇಲಾಖೆ ಹಿಂದಿನಿಂದಲೂ 150 ಬಸ್ ಒದಗಿಸಿ ಉತ್ತಮ ಸೇವೆ ನೀಡುತ್ತಾ ಬಂದಿದ್ದು, ಈ ವರ್ಷ 200ಕ್ಕೂ ಹೆಚ್ಚು ಬಸ್ ಸೇವೆಯಲ್ಲಿರಲಿದೆ. ಸಿದ್ದಾಪುರ, ಕುಮಟಾ, ಯಲ್ಲಾಪುರ, ಹುಬ್ಬಳ್ಳಿ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಭದ್ರತೆಗಾಗಿ ಸಭೆ ನಡೆಸಿ ಎಲ್ಲ ರೀತಿಯಿಂದ ಭದ್ರತೆ ಒದಗಿಸಲು ಯೋಜನೆ ರೂಪಿಸಲಾಗಿದೆ. ಜಾತ್ರೆಯ ದೊಡ್ಡ ಜವಾಬ್ದಾರಿ ಭದ್ರತೆಯಾಗಿದ್ದು ನಗರಸಭೆ ಅದಕ್ಕೆ ಸಿದ್ಧಗೊಳ್ಳುತ್ತಿದೆ. ಈ ಹಿಂದೆ ಯಾವ ರೀತಿ ನಡೆಯುತ್ತಾ ಬಂದಿತ್ತೋ ಅದೇ ರೀತಿ ಸೂಕ್ತ ಭದ್ರತೆ, ಸಹಕಾರದಿಂದ ಅದ್ದೂರಿಯಾಗಿ ದೇವಿಯ ಆಶೀರ್ವಾದದಿಂದ ನಡೆಯುವ ವಿಶ್ವಾಸ ಇದೆ ಎಂದರು.
ಪ್ರತಿಬಾರಿಯ ಜಾತ್ರೆಗಿಂತ ಈ ವರ್ಷ 2 ಪಟ್ಟು ಹೆಚ್ಚು ಮಹಿಳಾ ಭಕ್ತರು ಬರುವ ನಿರೀಕ್ಷೆ ಎಲ್ಲರಿಂದ ವ್ಯಕ್ತವಾಗಿದ್ದು, ಅದಕ್ಕೆ ಹೆಚ್ಚಿನ ವ್ಯವಸ್ಥೆಗೆ ಮುಂದಾಗಿದ್ದೇವೆ. ರಥೋತ್ಸವ ಸಂದರ್ಭದಲ್ಲಿ ಸೂಕ್ತ ಭದ್ರತೆಗೆ, ಜಾಗ್ರತೆಗೆ ಪ್ರಾಮುಖ್ಯತೆ ನೀಡಲಾಗಿದೆ. ಹೊರ ಊರುಗಳಿಂದ ಸಂಪರ್ಕಿಸುವ ರಸ್ತೆಗಳಲ್ಲಿ ವಿಶೇಷ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಎಲ್ಲ ಸಂಘಟನೆಗಳು, ಜನಪ್ರತಿನಿಧಿಗಳ ಸಹಕಾರ, ಹಿರಿಯ, ಭಕ್ತರ ಸಹಕಾರದಿಂದ ನಾಡಿನ ಜಾಗೃತ ಶಕ್ತಿಪೀಠದ ಶ್ರೀದೇವಿಯ ಜಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾರಿಕಾಂಬಾ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುದೇಶ ಜೊಗಳೇಕರ್, ಸದಸ್ಯರಾದ ಸುಧೀರ ಹಂದ್ರಾಳ, ಎಸ್.ಪಿ.ಶೆಟ್ಟಿ, ಬಾಬುದಾರ ಜಗದೀಶ ಗೌಡ, ಬಾಬುದಾರ ಪ್ರಮುಖರು, ಡಿವೈಎಸ್‌ಪಿ ಎಂ.ಎಸ್.ಪಾಟೀಲ್, ಸಿಪಿಐ ಶಶಿಕಾಂತ ವರ್ಮಾ, ಪೌರಾಯುಕ್ತ ಕಾಂತರಾಜ, ಪ್ರಭಾರಿ ತಹಶೀಲ್ದಾರ ರಮೇಶ ಹೆಗಡೆ, ಹೆಸ್ಕಾಂ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.