ಶಿರಸಿ: ಶಿರಸಿಯ ರೋಟರಿ ಸದಸ್ಯರ ಸೇವೆಯನ್ನು ಪರಿಶೀಲಿಸಿ ಹೃದಯ ತುಂಬಿ ಬಂದಿದೆ. ತಾವೇ ಸ್ವತಃ ಹೃದಯವೈಶಾಲ್ಯದಿಂದ ದಾನಮಾಡಿ ಇತರರಿಗೆ ಮಾದರಿಯಾಗುವ ಸದಸ್ಯರು ಇಲ್ಲಿದ್ದಾರೆ. ಅದೇ ಮಾದರಿಯಲ್ಲಿ ರವಿ ಹೆಗಡೆ ಗಡಿಹಳ್ಳಿ, ಪ್ರವೀಣ ಕಾಮತ ಮತ್ತು ಗುರು ಮಾಡಗೇರಿಯವರ ಪ್ರಾಯೋಜಕತ್ವದ ಫಲವಾಗಿ ಶಿರಸಿಯ ಮೂರು ಕಡೆಗಳಲ್ಲಿ ಬಸ್ ತಂಗುದಾಣ ನಿರ್ಮಾಣಗೊಂಡು ಅವುಗಳನ್ನು ಉದ್ಘಾಟಿಸಿ ಲೋಕಾರ್ಪಣೆಗೊಳಿಸುವ ಭಾಗ್ಯವಿಂದು ನನ್ನದಾಯಿತು ಎಂದು ರೋ.ಅಂ. ಜಿಲ್ಲೆ 3170ರ ಪ್ರಸಕ್ತ ಸಾಲಿನ ಪ್ರಾಂತಪಾಲ ನಾಸಿರ್ ಬೋರ್ಸದ್ವಾಲಾ ತಿಳಿಸಿದ್ದಾರೆ.
ಮಾ. 13ರರಂದು ಶಿರಸಿ ರೋಟರಿಗೆ ಅವರು ನೀಡಿದ ಅಧಿಕೃತ ಭೇಟಿಯ ಸಂದರ್ಭದಲ್ಲಿ ಏರ್ಪಾಟಾಗಿದ್ದ ಸಾರ್ವಜನಿಕ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ದಾನಿಗಳನ್ನು ಸಂಮಾನಿಸಿ ಮಾತನಾಡುತ್ತ ಶಿರಸಿ ರೋಟರಿಯ ಲೆಕ್ಕಪತ್ರ ವ್ಯವಹಾರವೂ ಅತ್ಯಂತ ಪಾರದರ್ಶಕವಾಗಿದೆ. ಶಿರಸಿ ರೋಟರಿ ಆಸ್ಪತ್ರೆ ಸೇರಿದಂತೆ ಎಲ್ಲ ಸಮುದಾಯ ಸೇವಾ ಯೋಜನೆಗಳಿಗೆ ರೋಟರಿ ಪ್ರತಿಷ್ಠಾನದ ಹಿಂದಿನ ಮ್ಯಾಚಿಂಗ್ ಗ್ರಾಂಟ್ ಮತ್ತು ಈಗಿನ ಗ್ಲೋಬಲ್ ಗ್ರಾಂಟ್ ಹಣಕ್ಕೆ ಹೆಚ್ಚಿನ ಹಣ ಸೇರಿಸಿ ಅತ್ಯತ್ತಮ ಕಾರ್ಯ ಮಾಡಿದ್ದಾರೆ. ಉದಾಹರಣೆಗೆ ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಡಾ. ದಿನೇಶ ಹೆಗಡೆಯವರ ವಿಶೇಷ ಮುತುವರ್ಜಿಯಿಂದ ಪ್ರಾರಂಭಿಸಲಾದ ನವಜಾತ ಶಿಶುಘಟಕ(NICU)ದಿಂದಾಗಿ ವರ್ಷವೂ 400ರಷ್ಟು ಸಂಖ್ಯೆಯ ಶಿಶುಗಳು ಬದುಕುಳಿಯುತ್ತಿವೆ. ಭಗವಂತ ಇಂತಹ ಕಾರ್ಯಕ್ಕೆ ನಮ್ಮನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಭಾವಿಸಿ, ನಿಸ್ವಾರ್ಥ ಸೇವೆಯನ್ನು ಜೀವನಶೈಲಿಯಾಗಿಸಿಕೊಂಡಾಗ ಇಂತಹ ಕಾರ್ಯ ಸಾಧ್ಯ. ಬೆಳಕೇ ಇಲ್ಲದಾಗ ಪ್ರಕಾಶದ ಮಹತ್ವ ಅರಿವಿಗೆ ಬರುವಂತೆ ರೋಟರಿ ಇಲ್ಲದ ಶಿರಸಿಯನ್ನು ಕಲ್ಪಿಸಿಕೊಂಡಾಗ ನಿಮ್ಮ ಅನುಪಮ ಸೇವೆಯ ಅರಿವು ನಿಮಗಾಗುವುದು ಎಂದು ತಿಳಿಸಿದರು.
ಸಹಾಯಕ ಪ್ರಾಂತಪಾಲ ಶೈಲೇಶ್ ಹಳದೀಪುರ ಧ್ವನಿಮೂಲಕ ಶುಭಾಶಯ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀಧರ ಹೆಗಡೆ ಸ್ವಾಗತಿಸಿದರು. ಶ್ರೀಮತಿ ಪದ್ಮಾ ಮತ್ತು ರವಿ ಗಡಿಹಳ್ಳಿ ದಂಪತಿ, ಪ್ರವೀಣ ಕಾಮತ ಮತ್ತು ಗುರು ಮಾಡಗೇರಿ ಸನ್ಮಾನ ಸ್ವೀಕರಿಸಿದರು. ಕಿರಣ ಭಟ್ ಮುದ್ರಿತ ಧ್ವನಿಯಲ್ಲಿ ಅತಿಥಿಗಳ ಪರಿಚಯವಾಯಿತು. ಶ್ರೀಮತಿ ರೇಖಾ ಭಟ್ಟ ನಾಡ್ಗುಳಿ ಪ್ರಾರ್ಥನೆ ಹಾಡಿದರು. ಪವರ್ ಪಾಯಿಂಟ್ ಮೂಲಕ ಕಾರ್ಯಚಟುವಟಿಕೆಗಳ ವರದಿ ನೀಡಿದ ಕಾರ್ಯದರ್ಶಿ ಗಣಪತಿ ಹೆಗಡೆ ವಂದಿಸಿದರು.