ದಾಂಡೇಲಿ : ನಗರದ ಅಂಬೆವಾಡಿಯಲ್ಲಿ ನಿರ್ಮಾಣವಾಗುತ್ತಿರುವ ಜಿ+2 ಆಶ್ರಯ ಮನೆಗಳ ನಿರ್ಮಾಣ ಕಾರ್ಯವನ್ನು ತ್ವರಿತಗತಿಯಲ್ಲಿ ಮುಗಿಸಿ ಕೂಡಲೇ ಅರ್ಹ ಫಲಾನುಭವಿಗಳಿಗೆ ವಿತರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಈಗಾಗಲೇ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಕೆ.ಎಚ್.ಬಿ ನಿವೇಶನಗಳನ್ನು ನೀಡಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯು ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್ ನೇತೃತ್ವದಲ್ಲಿ ಬುಧವಾರ ದಾಂಡೇಲಿ ನಗರಸಭೆಯ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರಲ್ಲಿ ಸದ್ಯದ ಪರಿಸ್ಥಿತಿಯನ್ನು ವಿವರಿಸಿ, ಈ ಬಗ್ಗೆ ಕೂಡಲೇ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಲಾಯಿತು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಜಿ+2 ಆಶ್ರಯ ಮನೆ ವಿತರಣೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಮನವರಿಕೆ ಮಾಡಿಕೊಡಲಾಗಿದೆ. ಕೆ.ಎಚ್.ಬಿ ನಿವೇಶನಗಳ ಹಂಚಿಕೆಯ ಕುರಿತಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.