ಕಾರವಾರ: ಗ್ರಾಮೀಣ ಭಾಗದ ಜನರಿಗೆ ಪೌಷ್ಟಿಕ ಆಹಾರ ಒದಗಿಸುವ ದೃಷ್ಟಿಯಿಂದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಹಯೋಗದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಮನೆಯಂಗಳದಲ್ಲಿ ಕೈತೋಟ ನಿರ್ಮಿಸಿ ಫಲ ಪಡೆಯುವಂತಾಗಿದೆ.
ಕಾಲಕ್ರಮೇಣ ಗ್ರಾಮೀಣ ಭಾಗದಲ್ಲಿನ ಜನರು ಸಹ ಆಧುನೀಕರಣದತ್ತ ವಾಲುತ್ತಿದ್ದು, ಕೈತೋಟ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಉದ್ಯೋಗ ಖಾತರಿ ಯೋಜನೆಯಡಿ ರೂ.4500ಗಳ ಆರ್ಥಿಕ ನೆರವು ನೀಡಿ ಪೌಷ್ಟಿಕ ಕೈತೋಟ ನಿರ್ಮಾಣಕ್ಕೆ ಬೆಂಬಲ ನೀಡಲಾಗುತ್ತಿದೆ.
ಸಿದ್ದಾಪುರ ತಾಲೂಕಿನಾದ್ಯಂತ 2022-23ನೇ ಸಾಲಿನಲ್ಲಿ 1000ಕ್ಕೂ ಹೆಚ್ಚು ಫಲಾನುಭವಿಗಳು ಕೈತೋಟ ನಿರ್ಮಿಸಿಕೊಂಡಿದ್ದು, ಪಪ್ಪಾಯಿ, ಪೇರಲೆ, ಕರಿಬೇವು, ನುಗ್ಗೆ, ದಾಲ್ಚಿನಿ, ಲಿಂಬು ಗಿಡಗಳನ್ನು ಬೆಳೆಸಿ ಫಲ ಪಡೆಯುತ್ತಿದ್ದಾರೆ. ಪ್ರತಿ ಕಾಮಗಾರಿಗೆ 10 ಮಾನವದಿನಗಳ ಸೃಜನೆಯೊಂದಿಗೆ ರೂ.3090 ಕೂಲಿ ವೆಚ್ಚ ಹಾಗೂ 950 ಸಾಮಗ್ರಿ ವೆಚ್ಚ ನೀಡಲಾಗುತ್ತಿದೆ. ತೋಟಗಾರಿಕಾ ಇಲಾಖೆಯಡಿ ಎನ್‌ಆರ್‌ಎಲ್‌ಎಮ್ ಹಾಗೂ ಕೃಷಿ ಸಖಿಯರ ಸರಕಾರದಲ್ಲಿ ಫಲಾನುಭವಿಗಳನ್ನು ಗುರುತಿಸಿ ಉಚಿತವಾಗಿ 14 ಗಿಡಗಳನ್ನು ನೀಡಲಾಗುತ್ತಿದೆ. ರಾಸಾಯನಿಕ ಗೊಬ್ಬರಗಳನ್ನು ಬಳಸಿ ಬೆಳೆಯುವ ಆಹಾರ ಪದಾರ್ಥಗಳಿಗಿಂತ ನಿಮ್ಮ ಕೈತೋಟದ ಬೆಳೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಉತ್ತಮ ಆರೋಗ್ಯದೊಂದಿಗೆ ನರೇಗಾ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವಿಜಯಾ ನಾಯ್ಕ ತಿಳಿಸಿದರು.
ಪೌಷ್ಟಿಕ ಕೈತೋಟ ನಿರ್ಮಾಣದಿಂದ ನರೇಗಾದಡಿ ವೈಯಕ್ತಿಕ ಬೇಡಿಕೆಯ ಸಹಭಾಗಿತ್ವ ನೋಡುವುದಾದರೆ ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ಇದೇ ಮಹತ್ತರ ಬೆಳವಣಿಗೆಯಾಗಿದೆ ಜೊತೆಗೆ ಮಹಿಳೆಯರ ಪಾಲ್ಗೊಳ್ಳುವಿಕೆಯು ಹೆಚ್ಚಾಗಿದ್ದು, ವರ್ಷದ ಗುರಿ ಸಾಧನೆಗೂ ಪೌಷ್ಟಿಕ ಕೈತೋಟ ಕಾಮಗಾರಿಯೇ ಕಾರಣವಾಗಿದೆ ಎಂದು ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಮಹಾಬಲೇಶ್ವರ ಬಿ. ಎಸ್ ತಿಳಿಸಿದರು.
ಇನ್ನೂ ಪೌಷ್ಟಿಕ ಕೈತೋಟ ನಿರ್ಮಿಸಿಕೊಂಡು ಪ್ರತಿಫಲ ಪಡೆಯುತ್ತಿರುವ ನಂದಿನಿ ಗೌಡರ್ ಹೇಳುವಂತೆ ನಾವು ನಮ್ಮ ಮನೆಯಂಗಳದಲ್ಲಿ ಸಾವಯವ ಗೊಬ್ಬರ ಬಳಸಿ ಗಿಡಗಳನ್ನು ಬೆಳೆದು ನುಗ್ಗೆ ಸೊಪ್ಪು, ಪಪ್ಪಾಯಿ, ಪೇರಲೆ ಹಣ್ಣುಗಳನ್ನು ಬೆಳೆಯುತ್ತಿದ್ದೆವೆ ಇದರಿಂದ ತುಂಬಾ ಅನುಕೂಲವಾಗಿದೆ ಹಾಗೂ ಸಂತಸವಾಗಿದೆ ಎಂದರು.