ಮುಂಡಗೋಡ: ಜಿಂಕೆಯನ್ನು ಬೇಟೆಯಾಡಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿರುವ ಘಟನೆ ಭಾನುವಾರ ರಾತ್ರಿ ತಾಲೂಕಿನ ಪಾಳಾ ವ್ಯಾಪ್ತಿಯ ಭದ್ರಾಪುರ ಬಳಿ ನಡೆದಿದೆ.
ಶಿರಸಿಯ ಕಸ್ತೂರಿಬಾ ನಗರದ ಅಹ್ಮದಖಾನ್ ಇಬ್ರಾಹಿಂಖಾನ್ (35), ರಾಜೀವ ನಗರದ ಇಮಾಮಸಾಬ್ ಹುಸೇನಸಾಬ್ ಸಂಶಿ (19) ಬಂಧಿತ ಆರೋಪಿಗಳು. ಇನ್ನಿಬ್ಬರು ಆರೋಪಿಗಳಾದ ರಾಜೀವ ನಗರದ ಅಬ್ದುಲ್ ಮೂಜಿದ್ ಹಾಗೂ ರೆಹಮಾನ್ ಶೇಖ್ ಬಂದೂಕಿನೊಂದಿಗೆ ಪರಾರಿಯಾಗಿದ್ದಾರೆ. ಬಂಧಿತರಿಂದ ಜಿಂಕೆಯ ಶವ, ಕಾರು ಹಾಗೂ ಹತ್ತು ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ತಾಲೂಕಿನ ಪಾಳಾ ಅರಣ್ಯ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಗಸ್ತು ತಿರುಗುವ ವೇಳೆ ಅರಣ್ಯದಲ್ಲಿ ಬಂದೂಕಿನಿಂದ ಗುಂಡು ಹಾರಿಸಿದ ಶಬ್ದ ಕೇಳಿಸಿದೆ. ಕೂಡಲೆ ಬಂದೂಕಿನಿಂದ ಶಬ್ದ ಕೇಳಿಸಿದ ಸ್ಥಳಕ್ಕೆ ಹೋದಾಗ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಇನ್ನಿಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಆರ್.ಎಫ್.ಒ. ಮಂಜುನಾಥ ನಾಯ್ಕ, ಉಪ ವಲಯ ಅರಣ್ಯ ಅರಣ್ಯಾಧಿಕಾರಿ ಚಂದ್ರಕಾಂತ ಮುಕ್ರಿ, ನಾಗರಾಜ ಕಲಾಲ, ಅರುಣ ಕುಮಾರ ಸಿಬ್ಬಂದಿಗಳಾದ ಮಂಜುನಾಥ ದೊಡ್ಡಣ್ಣನವರ, ಮಲ್ಲನಗೌಡ, ವಿನಾಯಕ ಸುಂಕದ ಹಾಗೂ ಚಾಲಕ ಕೃಷ್ಣ ಹೊಸಳ್ಳಿ ಇದ್ದರು.