ಜೋಯಿಡಾ: ಕುಣಬಿಗಳ ಪರಿಶಿಷ್ಟ ಪಂಗಡ ಹೋರಾಟದ ಸತ್ಯಾಗ್ರಹ ಕುಣಬಿ ಭವನ ಜೊಯಿಡಾ ಎದುರು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ, ಗ್ರೀನ್ ಇಂಡಿಯಾ ನಿರ್ದೇಶಕ ಮಹೇಂದ್ರ ಕುಮಾರ್ ಕುಟುಂಬ ಸಮೇತ ಪಾಲ್ಗೊಂಡು ಸತ್ಯಾಗ್ರಹಕ್ಕೆ ಬೆಂಬಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಬಿ.ಎನ್. ವಾಸರೆ, ನಮ್ಮ ಜಿಲ್ಲೆಯ ಕುಣಬಿ ಬುಡಕಟ್ಟುಗಳ ಪರಿಶಿಷ್ಟ ಪಂಗಡ ಸೇರ್ಪಡೆ ಹೋರಾಟಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಸಂಪೂರ್ಣವಾಗಿ ಬೆಂಬಲ ನೀಡುತ್ತಿದೆ, ನಮ್ಮನ್ನು ಆಳುವವರು ಕಾಡುವಾಸಿಗರ ಕೂಗಿಗೆ ಸ್ಪಂದಿಸಿ ನ್ಯಾಯ ನೀಡಬೇಕೆಂದು ಆಗ್ರಹಿಸಿದರು.
ಸಾಹಿತ್ಯ ಪರಿಷತ್ತು ಸಮುದಾಯಿಕ , ಸಾಂಸ್ಕೃತಿಕ ಸಂಬಂಧದ ಆಧಾರದಲ್ಲಿ ಕಾಡುವಾಸಿಗರಾದ ಕುಣಬಿಗಳ ಬದುಕು, ಕಾಡನ್ನು ದೇವರೆಂದು ಪ್ರೀತಿಸಿ ಕಾಪಾಡಿಸಿ ಬೆಳೆಸಿದ ಇವರ ಜೀವನ, ಬದುಕು ಮುಂದೆ ಇರಬೇಕು. ಬುಡಕಟ್ಟುಗಳಾದ ಇವರಿಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ನ್ಯಾಯ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತಿರುವುದಾಗಿ ಹೇಳಿದರು.
ಬುಡಕಟ್ಟುಗಳ ಪರವಾಗಿ ಬಹುಕಾಲದಿಂದ ಕೆಲಸಮಾಡುತ್ತಿದ್ದ ಗ್ರೀನ್ ಇಂಡಿಯಾ ನಿರ್ದೇಶಕ ಮಹೇಂದ್ರ ಕುಮಾರ್ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ದಾಂಡೇಲಿ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣ ಪಾಟೇಲ ಉಪಸ್ಥಿತರಿದ್ದು ಬೆಂಬಲವ್ಯಕ್ತಪಡಿಸಿದರು. ಕ.ಸಾ.ಪ. ಜೋಯಿಡಾ ಅಧ್ಯಕ್ಷ ಪಾಂಡುರಂಗ ಪಟಗಾರ,. ಖಜಾಂಚಿ ತುಳಸಿದಾಸ ವೇಳಿಪ, ಮಂಜು ಶೆಟ್ಟಿ, ಮುಂತಾದವರು ಜೊತೆಯಲ್ಲಿದ್ದರು. ಸಮಾಜದ ಮುಖಂಡರಾದ ಸುಭಾಷ್ ಗಾವಡಾ, ಅಧ್ಯಕ್ಷರು ಜಿಲ್ಲಾ ಕುಣಬಿ ಸಮಾಜ, ಅಜಿತ್ ಮಿರಾಶಿ ತಾಲೂಕ ಅಧ್ಯಕ್ಷ, ಪ್ರಮುಖರಾದ ಮಾಬಳು ಕುಂಡಲಕರ, ಸುಭಾಷ್ ವೆಳಿಪ್, ನರ್ಮದಾ ಪಾಟ್ನೇಕರ, ಮಾಜಿ ಟಿ.ಪಂ.ಅಧ್ಯಕ್ಷೆ, ರವಿ ಮಿರಾಶಿ, ದತ್ತಾ ಮಿರಾಶಿ, ಬುಧೊ ಕಾಲೇಕರ ಮುಂತಾದವರು ಇದ್ದರು.