Slide
Slide
Slide
previous arrow
next arrow

ದ್ವೇಷ ಬಿತ್ತುವವರ ಬಗ್ಗೆ ಎಚ್ಚರವಿರಲಿ; ಸಿಎಂ ಸಿದ್ಧರಾಮಯ್ಯ

300x250 AD

ಕದಂಬೋತ್ಸವ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ | ಮುಖ್ಯಮಂತ್ರಿಗೆ ಮಂತ್ರಿ ಮಹೋದಯರ ಸಾಥ್

ಶಿರಸಿ: ಬನವಾಸಿ ಕನ್ನಡದ ಪ್ರಪ್ರಥಮ ರಾಜಧಾನಿಯಾಗಿದೆ. ಕರ್ನಾಟಕ ರಾಜ್ಯದ ಮೊದಲ ರಾಜವಂಶ ಕದಂಬರು, ಕಲೆ, ಸಾಹಿತ್ಯ, ಸಂಸ್ಕೃತಿಗೆ ನೀಡಿದ ಕೊಡುಗೆಯನ್ನು ಸ್ಮರಿಸುವ ಹಾಗೂ ಯುವ ಜನತೆಗೆ ಬನವಾಸಿಯ ಇತಿಹಾಸವನ್ನು ತಿಳಿಸುವ ಉದ್ದೇಶದಿಂದ ಕದಂಬೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಬನವಾಸಿಯಲ್ಲಿ ಆಯೋಜಿಸಿದ್ದ ಕದಂಬೋತ್ಸವ 2024 ಅನ್ನು ಉದ್ಘಾಟಿಸಿ ಮಾತನಾಡಿದರು.

ಇತಿಹಾಸವನ್ನು ನೋಡಿದಾಗ ಕನ್ನಡದ ಮೊದಲ ರಾಜಧಾನಿ ಬನವಾಸಿ. ಕ್ರಿ.ಶ 355 ರಲ್ಲಿ ಮಯೂರ ವರ್ಮ ಬನವಾಸಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಈ ರಾಜ್ಯವನ್ನು ಸ್ಥಾಪನೆ ಮಾಡಿದರು. ನಾಡಿಗೆ ಅವರ ಕೊಡುಗೆ ಅಪಾರ. ಕರ್ನಾಟಕದ ಇತಿಹಾಸ, ಕಲೆ ಸಂಸ್ಕೃತಿ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದರು.

ಆದಿ ಕವಿ ಪಂಪ ಹೇಳಿದಂತೆ ಮತ್ತೆ ಜನ್ಮ ತಾಳುವುದಾದರೆ ಈ ನೆಲದಲ್ಲಿ (ಬನವಾಸಿ) ದುಂಬಿಯಾಗಿ ಹುಟ್ಟಬೇಕು ಎಂದು ಹೇಳುವ ಮೂಲಕ ಬನವಾಸಿ ನೆಲದ ಬಗ್ಗೆ ಹೇಳಿದ್ದರು. ಮನುಷ್ಯ ಮನುಷ್ಯರ ನಡುವೆ ಜಾತಿ ಧರ್ಮದ ದ್ವೇಷದ ಬೀಜ ಬಿತ್ತಿ ದ್ವೇಷ ಹರಡುವವರ ಬಗ್ಗೆ ಎಚ್ಚರವಿರಬೇಕು. ಮನುಷ್ಯರ ನಡುವೆ ಪ್ರೀತಿಯಿರಬೇಕು. ಬುದ್ದ, ಬಸವ, ಗಾಂಧಿ, ಅಂಬೇಡ್ಕರ್, ಕನಕದಾಸರ ಆದರ್ಶ, ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಸಹೋದರ ಭಾವದಿಂದ ಬದುಕಬೇಕು ಎಂದರು.

ಸಂವಿಧಾನದಲ್ಲಿ ತಿಳಿಸಿರುವಂತೆ ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಅಳವಡಿಸಿಕೊಂಡು,‌ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಮೂಲಕ ಸಮಾನತೆಯ ಸಮಾಜ ನಿರ್ಮಾಣ ಮಾಡುವುದು ನಮ್ಮ ಉದ್ದೇಶವಾಗಿದ್ದು, ಅಸಮಾನತೆಯ ಸಮಾಜ ತೊಡೆದು ಹಾಕಲು ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಅಧಿಕಾರಕ್ಕೆ ಬಂದ 9 ತಿಂಗಳೊಳಗಾಗಿ 5 ಗ್ಯಾರಂಟಿ‌ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಸವಾದಿ ಶರಣರಂತೆ ನುಡಿದಂತೆ ನಡೆದಿದ್ದೇವೆ ಎಂಬ ಹೆಮ್ಮೆಯಿದೆ ಎಂದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಅರಬೈಲ್ ಶಿವರಾಂ ಹೆಬ್ಬಾರ್ ಅವರು, ಆದಿ ಕವಿ ಪಂಪ ಕಂಡ ಕನ್ನಡದ ಮೊದಲನೆ ರಾಜಧಾನಿ ಬನವಾಸಿ. ಈ ಹಿಂದೆ ಮುಖ್ಯಮಂತ್ರಿ ಅವರು 1110 ಕೋಟಿ ವರದಾನದಿ‌ ನೀರು ತುಂಬುವ ಯೋಜನೆ ನೀಡಿ ಈ ಭಾಗದ ಜನರಿಗೆ ಅನುಕೂಲ ಮಾಡಿದ್ದಾರೆ ಎಂದರು.

ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ ಮಾತನಾಡಿ, ಈ ಭಾಗದ ಜನರ‌ ಬೇಡಿಕೆ ಮೇಲೆ 1996ರಿಂದ ಕದಂಬೋತ್ಸವ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಬನವಾಸಿಯಲ್ಲಿ ಅನೇಕ ಅಭಿವೃದ್ಧಿ ಮಾಡಲಾಗಿದೆ ಎಂದು ತಿಳಿಸಿದರು.

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಮತ್ತು‌ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರು ಮಾತನಾಡಿ, 3ನೇ ಶತಮಾನದಲ್ಲಿ ಮಯೂರ ವರ್ಮ ಅವರು ಆಡಳಿತ ಮಾಡಿದ ನಾಡಿದು. ಕದಂಬರ ಇತಿಹಾಸವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕದಂಬೋತ್ಸವ ಆಯೋಜಿಸಿಕೊಂಡು ಬರಲಾಗುತ್ತಿದೆ. ರಾಜರ ಅವಧಿಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಪ್ರೋತ್ಸಾಹಿಸಿದ್ದರು. ಅದೇ ರೀತಿ ಮಾನ್ಯ ಮುಖ್ಯಮಂತ್ರಿ ಅವರು ಪ್ರೋತ್ಸಾಹಿಸಿಕೊಂಡು ಬಂದಿದ್ದಾರೆ ಎಂದರು.

ಮುಖ್ಯಮಂತ್ರಿ ಅವರು ಜಿಲ್ಲೆಗೆ ಅತಿ ಹೆಚ್ಚು ಅನುದಾನ‌ ನೀಡಿ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಿದ್ದಾರೆ. ಜಿಲ್ಲೆಗೆ ಸಂಬಂಧಿಸಿದ ಯಾವುದೇ ಕಡತ ತೆಗೆದುಕೊಂಡು ಹೋದರೂ, ಅವರಿಂದ ಉತ್ತಮ ಸ್ಪಂದನೆ ದೊರತಿದೆ ಎಂದರು.‌

ಕಾರ್ಯಕ್ರಮದಲ್ಲಿ ಕರ್ನಾಟಕ ಮಾರ್ಕೆಟಿಂಗ್ ಅಂಡ್ ಅಡ್ವರ್ಟೈಸಿಂಗ್ ಏಜೆನ್ಸೀಸ್ ಅಧ್ಯಕ್ಷ ಸತೀಶ್ ಕೆ ಸೈಲ್, ಶಾಸಕ ಭೀಮಣ್ಣ ಟಿ ನಾಯ್ಕ, ವಿ.ಎಸ್ ಪಾಟೀಲ್, ನಿವೇದಿತ್‌ ಆಳ್ವಾ, ಸರ್ಕಾರದ ಪ್ರಧಾನ‌ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್‌ ಸಿಂಗ್, ಬನವಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಬಿ. ಆಯುಷಾ ಖಾಸಿಮ್ ಖಾನ್, ಅಂಜಲಿ ನಿಂಬಾಳ್ಕರ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಜಿಲ್ಲಾ ಪಂಚಾಯತ್ ಸಿಇಒ‌ ಈಶ್ವರ್ ಕುಮಾರ್‌ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಮತ್ತಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top