ಅಂಕೋಲಾ: ರಾಜ್ಯಸಭೆಯ ಚುನಾವಣೆಯ ಬಳಿಕ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆಯಲ್ಲಿ ಬಿಜೆಪಿಯವರದೇ ಕೈವಾಡ ಇದೆ. ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಂಕೋಲಾದ ಕಾಂಗ್ರೆಸ್ ಕಾರ್ಯಕರ್ತರು ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ಚುನಾಯಿತರಾದ ನಾಲ್ಕು ಸದಸ್ಯರಲ್ಲಿ 3 ಜನ ಸದಸ್ಯರು ಕಾಂಗ್ರೆಸ್ ಪಕ್ಷದವರಾಗಿರುವುದು ತುಂಬಾ ಹರ್ಷದಾಯಕ ವಿಷಯ. ಸಂವಿಧಾನದ ಮೂಲಕ ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನದೇ ಆದ ಘನತೆಯನ್ನು ಕಾಯ್ದುಕೊಂಡು ಬಂದಿದೆ. ಆದರೆ ದುರದೃಷ್ಟಕರ ವಿಷಯವೆಂದರೆ ರಾಜ್ಯಸಭೆ ಚುನಾಯಿತರಾದ ನಾಸಿರ ಹುಸೇನ್ ಅಭಿಮಾನಿಗಳು ಜಯಘೋಷ ಕೂಗುವಾಗ ತನ್ಮಧ್ಯೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ನಮಗೆ ತೀವ್ರ ನೋವು ಉಂಟು ಮಾಡಿದೆ. ಆದರೆ ಅದು ಕಾಂಗ್ರೆಸ್ ಕಾರ್ಯಕರ್ತರ ಬಾಯಿಯಿಂದ ಬಂದಿದ್ದಲ್ಲ, ಬದಲಾಗಿ ವಿರುದ್ಧ ಪಕ್ಷದವರ ಕುಮ್ಮಕ್ಕಿನಿಂದ ಯಾರೋ ಮೂರ್ಖರು ಹೀಗೆ ಕೂಗಿರಬಹುದು ಎಂಬುದು ನಮ್ಮ ಅಭಿಪ್ರಾಯವಾಗಿದೆ. ಈ ಹಿಂದೆ 15 ತಿಂಗಳ ಮೊದಲು ಮಂಡ್ಯ ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದಾಗ ಅಂತಹ ದ್ರೋಹಿಗಳನ್ನು ಹಿಡಿದು ಶಿಕ್ಷೆಗೊಳಪಡಿಸುವಲ್ಲಿ ಆವತ್ತಿನ ಬಿಜೆಪಿ ಸರ್ಕಾರ ವಿಫಲವಾಗಿರುವುದನ್ನು ನಾವು ತಮ್ಮ ಗಮನಕ್ಕೆ ತರಬಯಸುತ್ತೇವೆ. ಇಂತಹ ಅನೇಕ ಆಪಾದನೆಗಳು ಹಲವು ಬಾರಿ ನಡೆದಿರುವುದು ಟಿ.ವಿ. ಮಾಧ್ಯಮಗಳ ಮೂಲಕ ದಾಖಲಾಗಿರುವುದು ಕಂಡುಬಂದಿದೆ. ಆದರು ಸೂಕ್ತ ತನಿಖೆ ನಡೆಸಿ ದೇಶ ದ್ರೋಹಿಗಳ ಮೇಲೆ ಕಠಿಣ ಕ್ರಮ ಜರುಗಿಸಿ ಉಗ್ರ ಶಿಕ್ಷೆ ವಿಧಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ, ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಡಿ.ಜಿ. ನಾಯ್ಕ, ನಾಗೇಂದ್ರ ಡಿ.ನಾಯ್ಕ ಬೇಳಾ, ಗಜಾನನ ಗಣಪತಿ ನಾಯ್ಕ ಬೇಳಾ, ವಿಜು ಪೀಟರ ಪಿಳ್ಳೈ, ದಿನೇಶ ನಾಯ್ಕ, ಮಂಜುನಾಥ ವಿ ನಾಯ್ಕ, ಅಲಗೇರಿ ಗ್ರಾ.ಪಂ. ಅಧ್ಯಕ್ಷ ಸಂತೋಷ ನಾಯ್ಕ, ಸುರೇಶ ನಾಯ್ಕ ಅಸ್ಲಗದ್ದೆ ಇದ್ದರು.