ಅಂಕೋಲಾ: ಶ್ರೀ ಕೇಶವ ದೇವಸ್ಥಾನ ಬ್ರಹ್ಮೂರು ಅಂಕೋಲಾ ಇದರ ಜಾತ್ರಾ ಪ್ರಯುಕ್ತ ಶ್ರೀದೇವರ ಸಂಪ್ರೀತಿಗಾಗಿ ಸಂಗೀತ ಸಂಧ್ಯಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಖ್ಯಾತ ಹಿಂದುಸ್ಥಾನಿ ಗಾಯಕರಾದ ವಿದ್ವಾನ್ ಶಿವಾನಂದ ಭಟ್ಟ ಹಡಿನಬಾಳ ಇವರು ರಾಗ ಮಾಲಕಂಸದೊಂದಿಗೆ ಪ್ರಾರಂಭಿಸಿ ನಂತರ ಹಾಡಿದ ಭಜನ್‌ಗಳು ಸೇರಿದ ಅಪಾರ ಜನರನ್ನು ಭಕ್ತಿಪರವಶರಾಗುವಂತೆ ಮಾಡಿತು. ಇವರೊಂದಿಗೆ ಖ್ಯಾತ ತಬಲವಾದಕರಾದ ಶೇಷಾದ್ರಿ ಅಯ್ಯಂಗಾರ್ ಹಾಗೂ ಅವರ ಶಿಷ್ಯ ಕೃಷ್ಣ ಪ್ರಸಾದ ಹೆಗಡೆ ತಬಲಾ ಹಾಗೂ ಪಕಾವಾಜ್ ಉತ್ತಮ ಸಾಥ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟರು. ಸಂವಾದಿನಿಯಲ್ಲಿ ಹರಿಶ್ಚಂದ್ರ ನಾಯ್ಕ, ಬಾನ್ಸುರಿಯಲ್ಲಿ ಕುಮಟಾದ ಸುಧೀರ್ ಹೆಗಡೆಯವರು ಸುಂದರವಾಗಿ ಸಾಥ್ ನೀಡಿದರು.
ಈ ಮೊದಲು ಕುಮಾರ ಪ್ರಥಮ ಭಟ್ಟ, ಕುಮಾರಿ ರಂಜಿತಾ ನಾಯ್ಕ, ಕುಮಾರಿ ಮಹಾಲಕ್ಷ್ಮಿ ಅಂಬಿಗ ಸುಶ್ರಾವ್ಯವಾಗಿ ಹಾಡಿ ಜನಮನ ರಂಜಿಸಿದರು. ಇವರಿಗೆ ಸಾಥಿಯಾಗಿ ಪ್ರಶಾಂತ ಶೇಟಿಯ ಅಂಕೋಲಾ, ಕುಮಾರ ಪ್ರಥಮ ಭಟ್ಟ, ಶ್ರೀಕೃಷ್ಣ ಪ್ರಸಾದ್ ಹೆಗಡೆ, ಕುಮಾರ ಶ್ರೀಶ ತಬಲಾ ಹಾಗೂ ಸಂವಾದಿನಿ ಸಾಥ್ ನೀಡಿದರು. ದೇವಾಲಯದ ಪ್ರಧಾನ ಅರ್ಚಕರಾದ ಸೀತಾರಾಮ ಪುರಾಣಿಕ ಹಾಗೂ ಕೇಶವ ಪುರಾಣಿಕರು ಕಲಾವಿದರನ್ನು ಶಾಲು ಹೊದಿಸಿ ಸನ್ಮಾನಿಸಿದರು.