ದಾಂಡೇಲಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾರ್ಗದರ್ಶನದಲ್ಲಿ ದಾಂಡೇಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಡಿ ನಗರದ ಕಾರ್ಮಿಕ ಭವನದಲ್ಲಿ ದಾಂಡೇಲಿ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ
ಸಮ್ಮೇಳನ ನಡೆಯುವ ಕಾರ್ಮಿಕ ಭವನದ ಆವರಣದಲ್ಲಿ ಗುರುವಾರ ಬೆಳಿಗ್ಗೆ ತಹಶೀಲ್ದಾರ್ ಎಂ.ಎನ್. ಮಠದ್ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆ ಪರಿಷತ್ತಿನ ಧ್ವಜಾರೋಹಣವನ್ನು ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ದಾಂಡೇಲಿ ತಾಲೂಕು ಅಧ್ಯಕ್ಷರಾದ ನಾರಾಯಣ ನಾಯ್ಕ ನಾಡ ದ್ವಜಾರೋಹಣವನ್ನು ನೆರವೇರಿಸಿದರು.
ಆನಂತರ ನಗರದ ಕೆ.ಸಿ ವೃತ್ತದಿಂದ ಸಮ್ಮೇಳನ ಅಧ್ಯಕ್ಷರ ಭವ್ಯ ಮೆರವಣಿಗೆಗೆ ನಗರಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಚಾಲನೆಯನ್ನು ನೀಡಿದರು.
ಆರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಉಸ್ತಾದ್. ಕೆ. ಎಲ್. ಜಮಾದಾರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗೌರವಾರ್ಪಣೆಯನ್ನು ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆಯನ್ನು ನೀಡಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್, ವಾಸರೆ, ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಎಸ್. ಪ್ರಕಾಶ್ ಶೆಟ್ಟಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾರಾಯಣ ನಾಯ್ಕ, ನಗರಸಭೆಯ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಆಜೀವ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಹಾಗೂ ಸಾರ್ವಜನಿಕರು ಮತ್ತು ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.