ಕಾನಸೂರು: ಯಕ್ಷಗಾನ ಕನ್ಮಡದ ಬೆಳವಣಿಗೆಗೆ ಸಹಕಾರಿ.ಸಂಘಟನೆ ಮಾಡುವುದು ಅಷ್ಟು ಸುಲಭವಲ್ಲ. ಇಂತಹ ಸಂಘಟನೆ ಮಾಡುವಾಗ ಸಮಾಜದಿಂದ ತಿರಸ್ಕಾರ, ಅವಹೇಳನಗಳನ್ನು ಕೇಳಬೇಕಾಗುತ್ತದೆ. ಒಂದು ಸಂಘಟನೆ 25 ವರ್ಷ ತನ್ನ ಸೇವೆಯನ್ನು ನಡೆಸಿ ರಜತಮಹೋತ್ಸವ ಆಚರಿಸಿಕೊಳ್ಳುತ್ತದೆ ಎಂದರೆ ಅದರ ಹಿಂದಿನ ಕಷ್ಟದ ಫಲ ಅರಿವಾಗುತ್ತದೆ ಎಂದು ಹೊನ್ನಾವರದ ಶಿವಾನಂದ ಹೆಗಡೆ ಹೇಳಿದರು.
ಅವರು ಕಾನಸೂರಿನ ಸೇವಾರತ್ನಾ ಮಾಹಿತಿ ಕೇಂದ್ರದ 25ನೇ ವರ್ಷದ ರಜತಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಂಘಟನೆಯ ಮೂಲಕ ಊರು ಬೆಳೆಯಲು ಸಾಧ್ಯ. ಅದರಲ್ಲೂ ತಾಳಮದ್ದಳೆ, ಯಕ್ಷಗಾನದ ಮೂಲಕ ಕನ್ನಡದ ಉಳಿವನ್ನು ಬೆಳೆಸಲು ನಮ್ಮಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಾಂಸ್ಕೃತಿಕ ಸಂಘಟನೆ ಬೇರೆ ಬೇರೆ ಕಡೆ ನಡೆಸುವದು ಸುಲಭವಲ್ಲ. ಇದೊಂದು ತಪಸ್ಸು.ಯಾವುದೇ ಒಂದು ಕಲೆಯಲ್ಲಿ ಪ್ರತಿಭೆ ಅರಳಲು ಪೋಷಕರು, ಕಲಾವಿದರು, ಪ್ರೇಕ್ಷಕರು ಕಾರಣ. ಯಾವುದೇ ಕಲೆ ಇದ್ದಂತೇ ತಲುಪಿಸಬೇಕು ಅಂತಹ ಕಾರ್ಯವನ್ನು ಸೇವಾರತ್ನಾ ಮಾಹಿತಿ ಕೇಂದ್ರ ನಡೆಸಿಕೊಂಡು ಬಂದಿದೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಹೆರವಟ್ಟ ಹೇಳಿದರು.
ಇಷ್ಟು ದಿನಗಳನ್ನು ಆಧುನಿಕ ಲೋಕದಲ್ಲಿ ಕಳೆದಿದ್ದೇವೆ. ಆದರೆ ಯಕ್ಷಗಾನ ಕಲೆ ಎಂದರೆ ಬದುಕಿಗೆ ಬೇಕದ್ದನ್ನುಕೊಡುತ್ತದೆ. ಗ್ರಾಮೀಣ ಭಾಗದಲ್ಲಿ ೨೫ ವರ್ಷದಿಂದ ಕಲಾ ಸಂಘಟನೆ ನಡೆಸುತ್ತಿರುವ ಸೇವಾ ರತ್ನಾ ಮಾಹಿತಿ ಕೇಂದ್ರ ತನ್ನ ೨೫ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವುದು ಅಭಿನಂದನೀಯ ಎಂದು ಸ್ಕಾಡ್ ವೇಸ್ ನ ಡಾ.ವೆಂಕಟೇಶ ನಾಯ್ಕ ಹೇಳಿದರು.
ಇದೇ ಸಂದರ್ಭದಲ್ಲಿ ಉಪಕಾರ ಸ್ಮರಣೆ ಮೂಲಕ ಸಂಘಟನೆ ಬೆಳೆಯಲು ಕಾರಣಿಕರ್ತರಾದ ಉದ್ಯಮಿ ಆರ್.ಜಿ.ಶೇಟ್ ಕಾನಸೂರು, ನಿವೃತ ತಹಶೀಲ್ದಾರ ಡಿ.ಜಿ.ಹೆಗಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರತಿ ವರ್ಷ ಸಂಸ್ಥೆಯಿಂದ ನೀಡುವ ಕಲಾಸಿಂಧು ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಲಕ್ಷ್ಮಣ ಪಟಗಾರ ಮಾಸೂರು ಹಾಗೂ ಪ್ರತಿಪ್ರಭಾ ಪುರಸ್ಕಾರವನ್ನು ಭರತನಾಟ್ಯ ಕಲಾವಿದೆ ಶ್ರೀ ಹೆಗಡೆ ಅವರಿಗೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಸೇವಾರತ್ನಾ ಪ್ರಕಾಶನ ಇವರು ಹೊರತಂದ ಹೆಚ್.ಸಿ. ಬಾಲಕೃಣ್ಣ ಹಿಲ್ಲೋಡಿ ಬರೆದಿರುವ ಶಕಪುರುಷ ಶಾಲಿವಾಹನ ಪುಸ್ತಕವನ್ನು ರಜತಮಹೋತ್ಸವ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಮಧ್ಯಾಹ್ನ ೩ ಗಂಟೆಯಿಂದ ಪಾದುಕಾ ಪ್ರದಾನ ತಾಳಮದ್ದಲೆ ಹಾಗು ರಾತ್ರಿ ಶಕಪುರುಷ ಶಾಲಿವಾಹನ ಯಕ್ಷಗಾನ ನಡೆಯಿತು. ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಅನಿತಾ ನಾಯ್ಕ, ಜೈ ಹನುಮಾನ ಸಂಘದ ಅಧ್ಯಕ್ಷ ಬಲರಾಮ ನಾಮಧಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಬ್ಬಣ್ಣ ಸ್ವಾಗತಿಸಿದರೆ ಸಂಘ ನಡೆದ ಬಂದ ದಾರಿಯನ್ನು ರತ್ನಾಕರ ಭಟ್ ಕಾನಸೂರು ವೇದಿಕೆಗೆ ತಿಳಿಸಿದರು. ಆರ್.ಜಿ.ಭಟ್ ವಂದಿಸಿದರು.