ದಾಂಡೇಲಿ : ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಪ್ರದಾನ ಮಾಡಬೇಕಾಗಿದ್ದ ಪಂಪ ಪ್ರಶಸ್ತಿಯನ್ನು ಬೆಂಗಳೂರಲ್ಲಿ ಪ್ರಧಾನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದು ಸರಿಯಾದ ಕ್ರಮವಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಆಕ್ಷೇಪಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು 2023 – 24ನೇ ಸಾಲಿನ ಪಂಪ ಪ್ರಶಸ್ತಿಗೆ ನಾಡಿನ ಹಿರಿಯ ಸಾಹಿತಿ ನಾ. ಡಿಸೋಜಾ ಆಯ್ಕೆ ಆಗಿರುವುದು ಸ್ವಾಗತಾರ್ಹ. ಪ್ರಶಸ್ತಿಗೆ ಭಾಜನರಾದ ಹಿರಿಯ ಸಾಹಿತಿ ನಾ. ಡಿಸೋಜರನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ. ಆದರೆ ಈ ಪ್ರಶಸ್ತಿಯನ್ನು ಕದಂಬೋತ್ಸವದಲ್ಲಿ ಪ್ರದಾನ ಮಾಡದೇ ಬೆಂಗಳೂರಿನಲ್ಲಿ ಬೇರೆ ಯಾವುದೋ ಕಾರ್ಯಕ್ರಮದಲ್ಲಿ ನೀಡಿದ್ದು ಮಾತ್ರ ಸಮಂಜಸವಾದುದಲ್ಲ.
ಕನ್ನಡಿಗರ ಮೊದಲ ರಾಜಧಾನಿ ಬನವಾಸಿಯಲ್ಲಿ ಹಲವು ವರ್ಷಗಳಿಂದ ಕದಂಬೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಮೂರು ವರ್ಷಗಳ ನಂತರ ಕಳೆದ ವರ್ಷ ಮತ್ತೆ ಆ ಸಂಭ್ರಮ ಬನವಾಸಿಯಲ್ಲಿ ಕಳೆಕಟ್ಟಿತು. ಈ ವರ್ಷ ಕೂಡ ಮಾರ್ಚ್ 5 ಮತ್ತು 6 ರಂದು ಕದಂಬೋತ್ಸವ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರ ಪ್ರತಿ ವರ್ಷ ಪಂಪ ಪ್ರಶಸ್ತಿಯನ್ನು ಕೊಡ ಮಾಡುತ್ತಿದ್ದು, ಈ ಪ್ರಶಸ್ತಿಯನ್ನು ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಪ್ರಧಾನ ಮಾಡುತ್ತ ಬಂದಿರುವುದು ಇಲ್ಲಿವರೆಗೂ ನಡೆದು ಬಂದಿರುವ ಪರಂಪರೆ. ಆದರೆ ಈ ವರ್ಷ ಮಾತ್ರ ಕದಂಬೋತ್ಸವ ನಡೆಯುತ್ತಿರುವ ಸಂದರ್ಭದಲ್ಲಿಯೇ ಪಂಪ ಪ್ರಶಸ್ತಿಯನ್ನು ಘೋಷಿಸಿ, ಅದನ್ನ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರದಾನ ಮಾಡಿದ್ದಾರೆ. ಕದಂಬೋತ್ಸವದಲ್ಲಿ ಪ್ರಧಾನ ಮಾಡಬೇಕಿದ್ದ ಪಂಪ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪ್ರಧಾನ ಮಾಡಿದ್ದು ಯಾಕೆ ಎಂಬುದೇ ಪ್ರಶ್ನೆಯಾಗಿದೆ.
ಹಾಗಿದ್ದರೆ ಮಾರ್ಚ್ 5 ಮತ್ತು 6 ರಂದು ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಪಂಪ ಪ್ರಶಸ್ತಿಯನ್ನು ಪ್ರಧಾನ ಮಾಡುವುದಿಲ್ಲವೇ?ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡದೆ ಕದಂಬೋತ್ಸವವನ್ನು ಆಚರಿಸಿದರೆ ಕದಂಬೋತ್ಸವ ಸಮಗ್ರತೆಯನ್ನು ಕಂಡುಕೊಳ್ಳಲು ಸಾಧ್ಯವೇ? ಪಂಪ ಪ್ರಶಸ್ತಿಯಿಲ್ಲದ ಕದಂಬೋತ್ಸವ ಅರ್ಥಪೂರ್ಣವಾದೀತೇ? ಅಥವಾ ಮುಖ್ಯಮಂತ್ರಿಗಳಿಗೆ ಕದಂಬೋತ್ಸವಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ಬೆಂಗಳೂರಿನಲ್ಲಿಯೇ ಪ್ರಶಸ್ತಿ ಪ್ರದಾನ ಮಾಡಿದರೇ? ಎಂಬನೇಕ ಪ್ರಶ್ನೆಗಳು ಸಾಹಿತ್ಯ ವಲಯದ್ದಾಗಿದೆ.
ಕದಂಬೋತ್ಸವದಲ್ಲಿ ಪ್ರಧಾನ ಮಾಡಬೇಕಿದ್ದ ಪಂಪ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪ್ರಧಾನ ಮಾಡುವ ಮೂಲಕ ಇಲ್ಲಿಯವರೆಗೂ ನಡೆದುಕೊಂಡು ಬಂದ ಪರಂಪರೆಯನ್ನು ಈ ಬಾರಿ ಮುರಿಯಲಾಗಿದೆ. ಮುಂದೆ ಹೀಗಾಗದಂತೆ ಸರ್ಕಾರ ಜಾಗೃತಿ ವಹಿಸಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.
ಜಿಲ್ಲೆಯ ಸಾಹಿತಿಗೆ ಪಂಪ ಪ್ರಶಸ್ತಿ ಬರಬೇಕಿತ್ತು:
ಉತ್ತರ ಕನ್ನಡ ಜಿಲ್ಲೆ ಇದು ಪಂಪ ನಡೆದಾಡಿದ ನೆಲ. ಕನ್ನಡಿಗರ ಮೊದಲ ರಾಜಧಾನಿ ಬನವಾಸಿ ಕೂಡ ಉತ್ತರ ಕನ್ನಡದಲ್ಲಿದೆ. ಆದರೆ ಇಲ್ಲಿಯವರೆಗೆ ಉತ್ತರ ಕನ್ನಡ ಜಿಲ್ಲೆಗೆ ಪಂಪ ಪ್ರತಿ ಸಿಕ್ಕಿದ್ದು ಕೇವಲ ಒಬ್ಬರಿಗೆ ಮಾತ್ರ. ಕದಂಬೋತ್ಸವದ ಸಂದರ್ಭದಲ್ಲಿ ಕೂಡ ಮಾಡುವ ಪಂಪ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಓರ್ವ ಹಿರಿಯ ಸಾಹಿತಿಯನ್ನು ಗುರುತಿಸಿ ನೀಡುವಂತೆ ಕಳೆದ ವರ್ಷವೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಒತ್ತಾಯಿಸಿತ್ತು. ಅಂತಹ ಅರ್ಹತೆಯಿದ್ದವರೂ ಕೂಡಾ ನಮ್ಮ ಜಿಲ್ಲೆಯಲ್ಲಿದ್ದಾರೆ. ಅದರೆ ಈ ವರ್ಷ ಕೂಡ ಉತ್ತರ ಕನ್ನಡ ಜಿಲ್ಲೆಯ ಸಾಹಿತಿಗೆ ಪಂಪ ಪ್ರಶಸ್ತಿಯನ್ನು ನೀಡದೇ ಅನ್ಯಾಯ ಮಾಡಲಾಗಿದೆ. ಬರುವ ವರ್ಷಗಳಲ್ಲಾದರೂ ಕದಂಬೋತ್ಸವದ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಸಾಹಿತಿಯೋರ್ವರನ್ನು ಗುರುತಿಸಿ ಪಂಪ ಪ್ರಶಸ್ತಿಗೆ ಆಯ್ಕೆ ಮಾಡುವಂತಾಗಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಒತ್ತಾಯಿಸಿದ್ದಾರೆ.