Slide
Slide
Slide
previous arrow
next arrow

ಹೊನ್ನಾವರದಲ್ಲಿ ‘ನಾಟ್ಯ ಲಾಸ್ಯ’ ಕಾರ್ಯಕ್ರಮ ಯಶಸ್ವಿ

300x250 AD

ಹೊನ್ನಾವರ: ಪಟ್ಟಣದ ಲಯನ್ಸ್ ಸಭಾಭವನದಲ್ಲಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಹೊನ್ನಾವರ ಶಾಖೆಯ “ನಾಟ್ಯ ಲಾಸ್ಯ” ಭರತನಾಟ್ಯ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಕುಮಾರ್ ಟ್ರಾವೆಲ್ಸ್ ನ ಮಾಲಕರಾದ  ವೆಂಕಟರಮಣ ಹೆಗಡೆ ಮಾತನಾಡಿ ಕಲೆಯನ್ನು ಪ್ರೋತ್ಸಾಹಿಸುವುದು ತುಂಬಾ ಅಗತ್ಯದ ಸಂಗತಿ.ಅದರಲ್ಲೂ ಶಾಸ್ತ್ರೀಯ ಕಲೆಯಾದ ಭರತನಾಟ್ಯವನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಿದೆ ಎಂದು ಶರಾವತಿ ಉತ್ಸವವನ್ನು 17 ವರ್ಷಗಳಿಂದ ನಡೆಸಿಕೊಂಡು ಬಂದ ಅನುಭವವನ್ನು ಹಂಚಿಕೊಂಡರು.

ಹಿರಿಯ ವರದಿಗಾರ ಜಿ.ಯು.ಭಟ್ಟ ಮಾತನಾಡಿ,  ಭರತನಾಟ್ಯ ಕಲೆಯು ಭಾರತೀಯ ಪರಂಪರೆಯ ಶ್ರೇಷ್ಠ ಪ್ರಕಾರವಾಗಿದೆ.ಸಂಗೀತ,ನೃತ್ಯ ಮುಂತಾದ ಕಲೆಗಳು ಮಾನವನ ಆರೋಗ್ಯವನ್ನು ಕಾಪಾಡುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ನಿವೃತ್ತ ಪ್ರಾಂಶುಪಾಲರಾದ  ಎಸ್.ಜಿ.ಭಟ್ಟ ಕವಲಕ್ಕಿ ಮಾತನಾಡಿ, ಹೊನ್ನಾವರ ಎಂಬುದು ಶ್ರೇಷ್ಠ ಕಲಾವಿದರನ್ನು ನಾಡಿಗೆ ನೀಡಿದ ಊರು.ಇಲ್ಲಿ ಸಂಗೀತ,ನೃತ್ಯ,ಯಕ್ಷಗಾನ ಮುಂತಾದ ಹಲವು ಬಗೆಯ ಕಲಾವಿದರನ್ನು ಹೊಂದಿದ್ದು ಪ್ರಪಂಚದಾದ್ಯಂತ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿರುತ್ತಾರೆ.ಕಲೆಗೆ ಪ್ರೋತ್ಸಾಹ ನೀಡುವಂತಹ ಕಾಲದಲ್ಲಿ ನಾವಿದ್ದೇವೆ. ಇದು ಭಾರತೀಯ ಸಂಸ್ಕೃತಿಯನ್ನು ಉತ್ತುಂಗಕ್ಕೇರಿಸುತ್ತದೆ‌. ಇಂದು ಜಗತ್ತು ಭಾರತೀಯ ಸಂಸ್ಕೃತಿಯನ್ನು ಅನುಸರಿಸುವಷ್ಟರ ಮಟ್ಟಿಗೆ ನಾವು ಮಾದರಿಯಾಗಿದ್ದೇವೆ ಎಂದರು.

ಲಯನ್ ಮಹಾಬಲೇಶ್ವರ ನಾಯ್ಕ ಮಾತನಾಡಿ ಭರತನಾಟ್ಯ ಒಂದು ದೈವೀ ಕಲೆ,ಇಂತಹ ಕಲೆಯನ್ನು ಬೆಳೆಸುವ ಕಾರ್ಯವನ್ನು ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಮಾಡುತ್ತಿದೆ ಎಂದರು.

300x250 AD

ಶ್ರೀ ಚನ್ನಕೇಶವ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಸೀಮಾ ಭಟ್ಟ ಮಾತನಾಡಿ ಭರತಮುನಿಯಿಂದ ಪ್ರಾರಂಭವಾದ ಭರತನಾಟ್ಯ ಕಲೆ ಇಂದಿಗೂ ಮುಂದುವರಿದುಕೊಂಡು ಬಂದು ಎರಡು  ಸಾವಿರಕ್ಕೂ ಹೆಚ್ಚು  ವರ್ಷಗಳಿಂದಲೂ ತನ್ನತನವನ್ನು ಉಳಿಸಿಕೊಂಡು ಬೆಳೆದು ಜಗತ್ತಿಗೇ ಮಾದರಿಯಾಗಿದೆ ಎಂದರು.

ನೃತ್ಯ ಗುರು ಡಾ.ಸಹನಾ ಭಟ್ಟ ಮಾತನಾಡಿ ಎಲ್ಲಾ ಪಾಲಕರು ಮತ್ತು ಪೋಷಕರ ಸಹಕಾರದಿಂದ ಭರತನಾಟ್ಯ ಬೆಳೆಯಲು ಸಾಧ್ಯವಾಗಿದೆ ಎಂದರು. ಹೊನ್ನಾವರ ಶಾಖೆಯ ನೃತ್ಯ ಗುರು ವಿದುಷಿ ವಿನುತಾ ಹೆಗಡೆ ಸಾಂದರ್ಭಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಅಧ್ಯಕ್ಷರಾದ ಪ್ರದೀಪ್ ಭಟ್ಟ ಅಧ್ಯಕ್ಷೀಯ ನುಡಿಗಳೊಂದಿಗೆ ಎಲ್ಲರನ್ನೂ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. ರಾಘವೇಂದ್ರ ಎಸ್ ಹೆಗಡೆ ಸ್ವಾಗತಿಸಿದರು.ಕುಮಾರಿ ಹರ್ಷಿತಾ ಭಟ್ಟ ನಿರ್ವಹಿಸಿದರು.

ನೃತ್ಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭರತನಾಟ್ಯದ ವಿವಿಧ ನೃತ್ಯಬಂಧಗಳಾದ ಪುಷ್ಪಾಂಜಲಿ, ಅಲರಿಪು,ಗಣೇಶ ಸ್ತುತಿ,ಶ್ಲೋಕ,ಜತಿಸ್ವರ
ಮುಂತಾದವುಗಳನ್ನು ಸೊಗಸಾಗಿ  ಪ್ರದರ್ಶಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರದೀಪ್ ಭಟ್ಟ ಅವರು ರಚಿಸಿದ ಡಾ.ಸಹನಾ ಭಟ್ಟ ಅವರು ನಿರ್ದೇಶಿಸಿದ “ವೀರ ಅಭಿಮನ್ಯು” ನೃತ್ಯ ರೂಪಕವು ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.

Share This
300x250 AD
300x250 AD
300x250 AD
Back to top