ಸುಧೀರ್ ನಾಯರ್
ಬನವಾಸಿ:ಕಳೆದ ವರ್ಷ ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ವರದಾ ನದಿಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಪ್ರಮಾಣ ಗಣನೀಯವಾಗಿ ತಗ್ಗಿದ್ದು, ವರದೆಯ ಒಡಲು ಬಹುತೇಕ ಬರಿದಾಗಿ ಮುಂದೇನು ಎಂದು ಜನರು ಯೋಚಿಸುವಂತಾಗಿದೆ.
ಚಳಿಗಾಲ ಮುಗಿದು ಬೇಸಿಗೆ ಆರಂಭಕ್ಕೆ ಇನ್ನೂ ಕೆಲವು ದಿನಗಳು ಬಾಕಿ ಇರುವಾಗಲೇ ಹೆಚ್ಚಿನ ಭಾಗದ ಕೆರೆ, ಬಾವಿ ಮತ್ತು ನದಿಯಲ್ಲಿ ತೀವ್ರ ನೀರಿನ ಅಭಾವ ಉಂಟಾಗಿದ್ದು, ಇನ್ನೂ 3-4 ತಿಂಗಳು ಬೇಸಿಗೆಯನ್ನು ಕಳೆಯುವುದು ಹೇಗೆ ಎಂಬ ಆತಂಕ ಎದುರಾಗಿದೆ.
ಕಳೆದ ವರ್ಷ ಮಳೆ ಕೊರತೆ ಹಿನ್ನೆಲೆಯಲ್ಲಿ ನದಿ ನೀರಿನ ಜತೆಗೆ ಕೆರೆ, ಬಾವಿಗಳಲ್ಲೂ ಸಹ ನೀರಿನ ಪ್ರಮಾಣ ತೀವ್ರ ಕಡಿಮೆಯಾಗಿದ್ದು ಮಳೆ ಬಾರದಿದ್ದರೆ ಇನ್ನೂ 3-4 ತಿಂಗಳು ಕಳೆಯಲು ಸಾಧ್ಯವೇ ಇಲ್ಲ ಅನ್ನುವ ಪರಿಸ್ಥಿತಿ ಎದುರಾಗಿದೆ.
ಬನವಾಸಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಪಟ್ಟಣದ ಸಂತೆಪೇಟೆ, ಹೂವಿನ ಕೊಪ್ಪಲಕೇರಿ, ಉಪ್ಪಾರ ಕೇರಿ, ಜನತಾ ಕಾಲೋನಿ, ಅಯ್ಯಪ್ಪ ನಗರ, ದೊಡ್ಡಕೇರಿಗಳ ನಿವಾಸಿಗರಿಗೆ 5 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಕಳೆದ ವರ್ಷ ವಿಧಾನ ಸಭಾ ಚುನಾವಣೆ ಇದ್ದ ಕಾರಣ ನೀರಿನ ಸಮಸ್ಯೆ ಎದುರಾಗುವ ಮುನ್ನವೇ ಟ್ಯಾಂಕರ್ ನೀರು ವಿತರಣೆ ಮಾಡಲಾಗಿತ್ತು. ಆದರೆ ಈ ಬಾರಿ ಯಾರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದರು. ಬನವಾಸಿ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವೊಲ್ಟೇಜ್ ಸಮಸ್ಯೆ ಎದುರಾಗುತ್ತಿರುವುದರಿಂದಲೇ ನೀರಿನ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಪಟ್ಟಣದಲ್ಲಿ ವಿದ್ಯುತ್ ಸರಬರಾಜು ಉಪಕೇಂದ್ರ ಕಾಮಗಾರಿಯು ಅರ್ಧಕ್ಕೆ ನಿಲ್ಲಿಸಲಾಗಿದೆ. ವಿದ್ಯುತ್ ಉಪಕೇಂದ್ರ ಆಗುವ ತನಕ ಈ ಸಮಸ್ಯೆ ತಪ್ಪಿದ್ದಲ್ಲ.
ವರದಾ ನದಿ, ಕೆರೆ, ಬಾವಿಗಳಲ್ಲಿ ಈಗಾಗಲೇ ನೀರಿನ ಪ್ರಮಾಣ ತೀವ್ರ ತಗ್ಗಿರುವುದು ಆತಂಕಕ್ಕೆ ಕಾರಣವಾಗಿದೆ. ತೋಟ ಗದ್ದೆಗಳಿಗೆ ನೀರು ನೀಡಲಾಗದೆ ರೈತರಲ್ಲೂ ಆತಂಕ ಮೂಡಿದೆ. ಬೇಗ ಮಳೆ ಬಾರದಿದ್ದರೆ ನೀರು ಸಿಗುವುದು ಸಹ ದುರ್ಲಭವಾಗಲಿದೆ.
ಕೋಟ್
ಮಳೆ ಕೊರೆತೆ ಹಿನ್ನೆಲೆಯಲ್ಲಿ ನೀರಿನ ಅಭಾವ ಎದುರಾಗಿದ್ದು, ಸಮರ್ಪಕ ನೀರಿನ ಸರಬರಾಜು ಮಾಡಲು ವಿದ್ಯುತ್ ವೋಲ್ಟೇಜ್ ಸಮಸ್ಯೆ ಎದುರಾಗಿದೆ. ನೀರು ಸರಬರಾಜು ಮಾಡಲು ಬೇಕಾದ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. — ಹನುಮಂತ ಛಲವಾದಿ
ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಪಟ್ಟಣದಲ್ಲಿ 6 ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದಾರೆ. ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಜನಪ್ರತಿನಿಧಿಗಳು, ಶಾಸಕರು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಜನರ ಕಷ್ಟಕ್ಕೆ ಸ್ಪಂದಿಸದೇ ಇಂತಹ ಸಂದರ್ಭದಲ್ಲಿ ಸ್ಪಂದಿಸಬೇಕು. ಕುಡಿಯುವ ನೀರಿನ ಸರಬರಾಜಿಗೆ ಸೂಕ್ತ ಕ್ರಮಕೈಗೊಳ್ಳಬೇಕು. –ಸಿದ್ಧಲಿಂಗೇಶ್ ಕಬ್ಬೂರ
ಬನವಾಸಿ ಗ್ರಾಮಸ್ಥರು
ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದೆ. ಬನವಾಸಿ ಗ್ರಾಮ ಪಂಚಾಯತಿಯ ಅಧಿಕಾರಿಗಳ ಜೊತೆಗೆ 15ದಿನಕೊಮ್ಮೆ ಸಭೆ ನಡೆಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಯಾವ ಮಾಹಿತಿಯನ್ನು ನೀಡಿಲ್ಲ. ಇನ್ನೇರಡು ದಿನಗಳಲ್ಲಿ ಬನವಾಸಿಗೆ ಭೇಟಿ ನೀಡುತ್ತೇನೆ. ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ಶೀಘ್ರವಾಗಿ ಟ್ಯಾಂಕರ್ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. –ಶ್ರೀಧರ್ ಮುಂದಲಮನಿ
ತಹಶೀಲ್ದಾರ ಶಿರಸಿ