ಹೊನ್ನಾವರ : ತಾಲೂಕಿನ ಕವಲಕ್ಕಿ ಹತ್ತಿರದ ನಿರ್ವತ್ತಿಕೋಡ್ಲ ಹಿ. ಪ್ರಾ. ಶಾಲೆಯ ಆವರಣದಲ್ಲಿ ಆಯುಷ್ ಪೇಡರೇಷನ್ ಆಫ್ ಇಂಡಿಯಾ (AFI) ಉತ್ತರ ಕನ್ನಡ ಹಾಗೂ ಸರ್ವೋದಯ ಯುವಕ ಸಂಘ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘ ಇವರ ಸಹಯೋಗದಲ್ಲಿ ಬೃಹತ್ ಆಯುರ್ವೇದ ಚಿಕಿತ್ಸಾ ಶಿಬಿರ ಫೆ.18 ರವಿವಾರದಂದು ನಡೆಯಲಿದೆ.
ಅಂದು ಬೆಳಿಗ್ಗೆ 9.30 ಕ್ಕೆ ಆಯುರ್ವೇದ ಚಿಕಿತ್ಸಾ ಶಿಬಿರ ಉದ್ಘಾಟನೆಯನ್ನು ಮುಗ್ವಾ ಗ್ರಾಮ ಪಂಚಾಯತ ಸದಸ್ಯ ಆಯ್. ವಿ. ನಾಯ್ಕ ನಡೆಸಿಕೊಡಲಿದ್ದಾರೆ. ಅಭಯ ಚಿಕಿತ್ಸಾಲಯ ಕವಲಕ್ಕಿಯ ವೈದ್ಯರಾದ ಡಾ. ಲಕ್ಷ್ಮೀಶ ಟಿ. ಭಟ್ಟ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಗ್ರಾ. ಪಂ. ಸದಸ್ಯರಾದ ಗೋವಿಂದ ಭಟ್ಟ ಅಗ್ನಿ, ಪರಮೇಶ್ವರಿ ಮುಕ್ರಿ ಆಗಮಿಸಲಿದ್ದಾರೆ.
ಹಿರೇಬೈಲ್ ಸರಕಾರಿ ಆರೋಗ್ಯ ಚಿಕಿತ್ಸಾಲಯದ ಡಾ. ಪ್ರವೀಣ ಜಿ. ಎನ್, ಡಾ. ರಂಗನಾಥ ಪೂಜಾರಿ ಹೊನ್ನಾವರ, ಡಾ. ಸುನೀಲ ಜತ್ತನ್ ಮುರುಡೇಶ್ವರ, ಡಾ. ನಿರಂಜನ ಹೆಬ್ಬಾರ ಭಟ್ಕಳ, ಡಾ. ಲಕ್ಷ್ಮೀಶ ಭಟ್ಟ ಕವಲಕ್ಕಿ, ಡಾ. ಸಂದೀಪ ಶೆಟ್ಟಿ, ಡಾ. ವಿಶ್ವನಾಥ ಹೆಗಡೆ ಚಂದಾವರ, ಡಾ. ಹರಿಪ್ರಸಾದ ಮುರುಡೇಶ್ವರ ಇವರು ಆಯುರ್ವೇದ ಚಿಕಿತ್ಸಾ ನಡೆಸಿ ಕೊಡಲಿದ್ದಾರೆ. ಈ ಎಲ್ಲಾ ಸೇವೆ ಉಚಿತವಾಗಿದ್ದು, ದೀರ್ಘಕಾಲೀನ ರೋಗಗಳಿಂದ ಬಳಲುವವರೊಂದಿಗೆ ಪ್ರತ್ಯೇಕ ಸಂವಾದ, ಉಚಿತ ಸಲಹೆ ಸೂಚನೆ ನೀಡಲಿದ್ದಾರೆ. ದಿನಚರ್ಯ, ಋತುಚರ್ಯ ಹಾಗೂ ವಿರುದ್ದ ಆಹಾರಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ದೀರ್ಘಕಾಲದ ಆರೋಗ್ಯ ಸಮಸ್ಯೆ ಇದ್ದವರು ಸಂಬಂಧ ಪಟ್ಟದ ರಿಪೋರ್ಟ್ ತರಲು ತಿಳಿಸಲಾಗಿದೆ.
ಅದೇ ದಿನ ಸಂಜೆ 4 ಗಂಟೆಗೆ ಸ ಹಿ ಪ್ರಾ ಶಾಲೆ ನಿರ್ವತ್ತಿಕೋಡ್ಲು ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ಮತ್ತು ಲಘು ಮನರಂಜನಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ವೋದಯ ಯುವಕ ಸಂಘದ ಅಧ್ಯಕ್ಷರಾದ ಪ್ರಭಾಕರ ಹೆಗಡೆ ವಹಿಸಲಿದ್ದಾರೆ. ಶ್ರೀಕುಮಾರ ಸಮೂಹ ಸಂಸ್ಥೆಯ ಮಾಲೀಕರಾದ ವೆಂಕಟರಮಣ ಹೆಗಡೆ ಕವಲಕ್ಕಿ ಸುವರ್ಣ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಲಕ್ಷ್ಮೀಶ ಭಟ್ಟ ಕವಲಕ್ಕಿ, ಆರೋಗ್ಯ ನೀರಿಕ್ಷಣ ಅಧಿಕಾರಿ ಚಿದಾನಂದ ಎಸ್., ಅತಿಥಿಗಳಾಗಿ ನಾಗಪ್ಪ ಗೌಡ ನಿರ್ವತ್ತಿಕೋಡ್ಲು, ಸಂಜೀವ ಮಡಿವಾಳ ಪಾಲ್ಗೊಳ್ಳಲಿದ್ದಾರೆ.