ಬನವಾಸಿ: ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ನೂರಾರು ಅಡಿಕೆ ಗಿಡಗಳು ಸುಟ್ಟುಹೋದ ಘಟನೆ ಸಮೀಪದ ಭಾಶಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಭಾಶಿ ಗ್ರಾಮದ ತಿಮ್ಮಮ್ಮ ನಾಯ್ಕ್ ಎಂಬುವರಿಗೆ ಸೇರಿದ ಮೂರು ಎಕರೆ ಅಡಿಕೆ ತೋಟದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಗಿಡಗಳು, ತೋಟದಲ್ಲಿ ಅಳವಡಿಸಿದ್ದ ನೀರಾವರಿ ಪರಿಕರಗಳು ಸುಟ್ಟು ಲಕ್ಷಾಂತರ ರೂಪಾಯಿ ಹಾನಿ ಆಗಿದೆ. ಸಂಜೆಯ ವೇಳೆ ತೋಟಕ್ಕೆ ನೀರು ಹಾಯಿಸಲು ಬಂದಾಗ ತೋಟಕ್ಕೆ ಬೆಂಕಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಫಲ ನೀಡುತ್ತಿದ್ದ ನೂರಾರು ಅಡಿಕೆ ಗಿಡದ ಜೊತೆಯಲ್ಲಿ 5-6ವರ್ಷದ ಅಡಿಕೆ ಗಿಡಗಳು, ನೀರಿನ ಪೈಪ್, ಡ್ರಿಪ್ ಪೈಪ್‌ಗಳು ಸಂಪೂರ್ಣವಾಗಿ ನಾಶವಾಗಿದೆ. ಅಡಿಕೆ ತೋಟದಲ್ಲಿ ವಿದ್ಯುತ್ ಲೈನ್ ಹಾದುಹೋಗಿದ್ದು, ಬೆಂಕಿ ಹೊತ್ತಿಕೊಂಡಿರುವುದಕ್ಕೆ ಸರಿಯಾದ ಕಾರಣ ತಿಳಿದುಬಂದಿಲ್ಲ.
ಈ ತೋಟದ ಪಕ್ಕದಲ್ಲಿರುವ ರುದ್ರ ಶಿವಪ್ಪ ನಾಯ್ಕ್, ಜಯನಂದ ನಾಯ್ಕ್, ಜನಾರ್ಧನ ನಾಯ್ಕ್ ಎಂಬುವವರ ಅಡಿಕೆ ತೋಟವು ಬೆಂಕಿಗೆ ಆಹುತಿಯಾಗಿ ಅಪಾರ ಪ್ರಮಾಣದ ಹಾನಿಯಾಗಿದೆ.
‘ಕಣ್ಣೆದುರಿಗೆ ಅಡಿಕೆ ತೋಟ ಸುಟ್ಟಿರುವುದನ್ನು ನೋಡಲು ಆಗುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಷ್ಟಪಟ್ಟು ಬೆಳೆಸಿದ ಅಡಿಕೆ ಗಿಡಗಳು, ನೀರಿನ ಪರಿಕರಗಳು ಸಂಪೂರ್ಣ ಸುಟ್ಟು ಹಾನಿಯಾಗಿವೆ. ಬಡತನದಲ್ಲಿ ಕಷ್ಟಪಟ್ಟು ನಿರ್ಮಿಸಿದ ತೋಟ ಸಂಪೂರ್ಣ ಸುಟ್ಟು ಹೋಗಿದ್ದು ದಿಕ್ಕುತೋಚದಂತಾಗಿದೆ ಎಂದು ರೈತ ಜಯಶೀಲ ನಾಯ್ಕ್ ಕಣ್ಣೀರು ಹಾಕಿದ್ದಾರೆ.
ಘಟನಾ ಸ್ಥಳಕ್ಕೆ ಭಾಶಿ ಗ್ರಾಪಂ ಸದಸ್ಯ ಗಜಾನನ ಗೌಡ ಹಾಗೂ ಹೆಸ್ಕಾಂ ಕಛೇರಿಯ, ಕಂದಾಯ ಇಲಾಖೆಯ, ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.