ಶಿರಸಿ: ಕದಂಬ ಮಾರ್ಕೆಟಿಂಗ್, ಉ.ಕ.ಜಿಲ್ಲಾ ಅಡಿಕೆ & ಸಂಬಾರು ಬೆಳೆಗಾರರ ಸಂಘದ ಆಶ್ರಯದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಕೃಷಿ ಇಲಾಖೆಯ ನಿರ್ದೇಶಕರಾಗಿರುವ ಸುಬ್ರಾಯ ಹೆಗಡೆಯವರೊಂದಿಗೆ ಜಾಗತಿಕ ಕೃಷಿ ಸಂಶೋಧನೆಗಳ ಕುರಿತ ವಿಶೇಷ ಸಂವಾದ ಕಾರ್ಯಕ್ರಮವನ್ನು ಫೆ.14, ಬುಧವಾರದಂದು ಶಿರಸಿಯ ಕದಂಬ ಮಾರ್ಕೆಟಿಂಗ್ ಆವಾರದಲ್ಲಿ ಬೆಳಿಗ್ಗೆ 11.00 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ.
ಕಳೆದ 30 ವರ್ಷಗಳಿಂದ ಅಮೇರಿಕಾ ದೇಶದಲ್ಲಿ ನೆಲೆಸಿ ಕೃಷಿಗೆ ಸಂಬಂಧಿಸಿದ ವಿಷಯಗಳಲ್ಲಿ ಅಪಾರ ಸಂಶೋಧನೆ ನಡೆಸಿ ಜಾಗತಿಕ ಮನ್ನಣೆಗಳಿಸಿರುವ ಸುಬ್ರಾಯ ಹೆಗಡೆ ಈ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ನಮ್ಮ ಭಾಗದ ರೈತರಿಗೆ ಕೃಷಿ ಕ್ಷೇತ್ರದ ಹೊಸ ಹೊಸ ವಿಷಯಗಳ ಕುರಿತು ಅರಿವು ಮೂಡಿಸಿಕೊಳ್ಳಲು, ತಂತ್ರಜ್ಞಾನಗಳ ಮಾಹಿತಿ ಪಡೆಯಲು ಈ ಅಪರೂಪದ ಸಂವಾದ ಕಾರ್ಯಕ್ರಮ ಅನುವು ಮಾಡಿಕೊಡಲಿದ್ದು ಆಸಕ್ತ ರೈತರು ಭಾಗವಹಿಸಲು ಕೋರಲಾಗಿದೆ.
ಪರಿಚಯ:ಶಿರಸಿಯ ಸಾಲ್ಕಣಿ ಗ್ರಾಮದಲ್ಲಿ ಜನಿಸಿದ ಸುಬ್ರಾಯ ಹೆಗಡೆ 1989 ರಲ್ಲಿ ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಮತ್ತು ಪಿಎಚ್‌ಡಿ ಗಳಿಸಿದರು. ತಮ್ಮ ಡಾಕ್ಟರೇಟ್ ಸಂಶೋಧನೆಯ ಸಮಯದಲ್ಲಿ, ಕ್ರಮವಾಗಿ ಅಕ್ಕಿ ಮತ್ತು ಶೇಂಗಾದಲ್ಲಿ ಧಾನ್ಯ ಮತ್ತು ಬೀಜಗಳ ಇಳುವರಿಯನ್ನು ಹೆಚ್ಚಿಸುವತ್ತ ಸಂಶೋಧನೆ ನಡೆಸಿದ್ದರು. ಪ್ರಪಂಚದಾದ್ಯಂತ ಹಲವಾರು ಪ್ರಭೇದಗಳನ್ನು ಸಂಗ್ರಹಿಸಿ, ಸಸ್ಯಗಳಲ್ಲಿ ಹೆಚ್ಚಿನ ಬೀಜ ಇಳುವರಿಗೆ ಕಾರಣವಾಗುವ ಗುಣಲಕ್ಷಣಗಳನ್ನು ಗುರುತಿಸುವ ಕುರಿತು ಹೆಚ್ಚಿನ ಅಧ್ಯಯನ ನಡೆಸಿದ್ದರು.
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ, ಸುಬ್ರಾಯ ಹೆಗಡೆಯವರು 1994 ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ತೆರಳಿ ಸಂಶೋಧನಾ ವಿಜ್ಞಾನಿಯಾಗಿ ಕೆಲಸ ಮಾಡಿದರು. ಅವರು 1994 ರಿಂದ 2006 ರವರೆಗೆ ಕ್ಯಾಲಿಫೋರ್ನಿಯಾದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ತಳಿಶಾಸ್ತ್ರವನ್ನು ಕಲಿಸಿದರು, ಗೋಧಿ ಮತ್ತು ಮೂಲಂಗಿಗಳ ಮೇಲೆ ಸಂಶೋಧನೆ ನಡೆಸಿದರು. ಗೋಧಿಯ ಮೇಲಿನ ಅವರ ಸಂಶೋಧನೆಯು ಲೆಬನಾನ್, ಸಿರಿಯಾ ಮತ್ತು ಟರ್ಕಿಯ ಸ್ಥಳೀಯ ಗೋಧಿ ತಳಿ ವೈವಿಧ್ಯದ ಅಧ್ಯಯನ ಮಾಡುವುದನ್ನೂ ಒಳಗೊಂಡಿತ್ತು. ಆನುವಂಶಿಕ ವೈವಿಧ್ಯತೆ, ರೋಗ ನಿರೋಧಕತೆ ಮತ್ತು ಬರ ಸಹಿಷ್ಣುತೆಯ ಗುಣಲಕ್ಷಣಗಳನ್ನು ಆಧುನಿಕ ಗೋಧಿ ತಳಿಗಳಿಗೆ ವರ್ಗಾಯಿಸುವಲ್ಲಿ ಯಶಸ್ವಿಯಾಗಿದ್ದರು.
2007 ರಲ್ಲಿ, ಸುಬ್ರಾಯ ಹೆಗಡೆಯವರು ಅಮೇರಿಕಾದ ಕೃಷಿ ಇಲಾಖೆ (USDA) ಗೆ ಸೇರಿ ಪ್ರಸ್ತುತ ಜೈವಿಕ ತಂತ್ರಜ್ಞಾನ ನಿಯಂತ್ರಣ ಸೇವೆಗಳ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಇವರು ಮಾನವನ ಆಹಾರ, ಪಶು ಆಹಾರ ಮತ್ತು ಕೃಷಿ ಪರಿಸರಕ್ಕೆ ಯಾವುದೇ ಹಾನಿಯಾಗದ ಸಸ್ಯಗಳು, ಕೀಟಗಳು ಮತ್ತು ಸೂಕ್ಷ್ಮಜೀವಿಗಳ ಸುರಕ್ಷಿತ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಇವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಭೆಗಳಲ್ಲಿ ತಾಂತ್ರಿಕ ಪರಿಣತರಾಗಿದ್ದು, 50 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ತಮ್ಮ ವೈಜ್ಞಾನಿಕ ಸಂಸೋಧನೆಗಳ ವಿವಿರಗಳನ್ನು ಪ್ರಸ್ತುತಪಡಿಸಿದ್ದಾರೆ. ಅವರ ವೃತ್ತಿಜೀವನದಲ್ಲಿ USDA ಕಾರ್ಯದರ್ಶಿ ಗೌರವ ಪ್ರಶಸ್ತಿ, USDA APHIS ವರ್ಷದ ವಿಜ್ಞಾನಿ ಪ್ರಶಸ್ತಿ, USDA ಅಂಡರ್ ಸೆಕ್ರೆಟರಿ ಪ್ರಶಸ್ತಿಯಂಥ ಪ್ರತಿಷ್ಠಿತ ಗೌರವಗಳಿಂದ ಪುರಸ್ಕೃತರಾಗಿದ್ದಾರೆ.