ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾ.ಪಂ. ವ್ಯಾಪ್ತಿಯ ಅರೇಅಂಗಡಿಯಲ್ಲಿ 50 ಲಕ್ಷ ವೆಚ್ಚದಲ್ಲಿ ರಸ್ತೆ ಮರು ಡಾಂಬರಿಕರಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.
ಸಾಲ್ಕೋಡ್ ಮಂಗೊಳ್ಳಿಕೇರಿ, ಜನಸಾಲೆ ಸಂಪರ್ಕಿಸುವ ರಸ್ತೆ ಹದಗೆಟ್ಟಿರುದರಿಂದ ಗ್ರಾಮಸ್ಥರ ಒತ್ತಾಯದ ಮೇರೆಗೆ ಈ ಹಿಂದೆ 50 ಲಕ್ಷ ವೆಚ್ಚದಲ್ಲಿ ಮಂಜೂರಾಗಿದ್ದ ಕಾಮಗಾರಿಗೆ ಶನಿವಾರ ಶಾಸಕರು ಜನತಾ ಕಾಲೂನಿ ಸಮೀಪ ಚಾಲನೆ ನೀಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಪ್ರಥಮ ಬಾರಿಗೆ ಶಾಸಕನಾದಾಗ ಈ ರಸ್ತೆ ಡಾಂಬರಿಕರಣ ಮಾಡಲಾಗಿತ್ತು. ಉತ್ತಮ ಗುಣಮಟ್ಟದ ರಸ್ತೆ ಆಗಿದುದರಿಂದ ಇಷ್ಟು ದಿನ ಉತ್ತಮವಾಗಿದೆ. ಈ ಬಾರಿ ರಸ್ತೆಗೆ ಮರುಡಾಂಬರಿಕರಣಗೊಳಿಸಲು ಹಿಂದಿನ ಬಿಜೆಪಿ ಸರ್ಕಾರದಿಂದ 50 ಲಕ್ಷ ಹಣ ಮಂಜೂರಾಗಿತ್ತು. ಚುನಾವಣೆಯ ನೀತಿಸಂಹಿತೆ ಮಳೆಗಾಲ ಹಾಗೂ ಕಾಂಗ್ರೇಸ್ ಸರ್ಕಾರ ಅನುದಾನ ತಡೆ ಹಿಡಿದ ಕಾರಣದಿಂದ ಆರಂಭಿಸಲು ವಿಳಂಬವಾಗಿ ಇಂದು ಚಾಲನೆ ದೊರೆತಿದೆ. 2 ಕೋಟಿ ವೆಚ್ಚದ ಕಾಮಗಾರಿಗೆ ಕ್ಷೇತ್ರದಲ್ಲಿ ಇಂದು
ಚಾಲನೆ ನೀಡಲಾಗಿದೆ. ಸಾಲ್ಕೋಡ್ ಗ್ರಾಮದಲ್ಲಿ ಈ ಹಿಂದೆ ನನ್ನ ಅವಧಿಯಲ್ಲಿ ಒಂದು ಕೋಟಿ ವೆಚ್ಚದ ಸಾಲ್ಕೋಡ್ ಸೇತುವೆ, ನೆನಗುದಿಗೆ ಬಿದ್ದ ಹೊಯ್ನಿರ್ ಸೇತುವೆ, ದರ್ಬೆಜಡ್ಡಿ ಮತ್ತು ಹಂದಿಗದ್ದೆ ಸೇತುವೆ ಈಗಾಗಲೇ ನಿರ್ಮಾಣಗೊಂಡಿದೆ. ಸಾಲ್ಕೋಡ್ ಹೊಳೆಗೆ ಸಂಪರ್ಕಿಸುವ ಪುಟ್ ಬ್ರೀಜ್ ಕಾಮಗಾರಿಯು ಮುಕ್ತಾಯದ ಹಂತ ತಲುಪಿದೆ. ಸಂಸದರಾದ ಅನಂತಕುಮಾರ ಹೆಗಡೆಯವರ ಮೂಲಕ ಗ್ರಾಮದ ಕಾನಕ್ಕಿ, ಕೆರಮನೆಕಚ್ಚರಕೆ ಕಚ್ಚಾರಸ್ತೆಯಿಂದ ಪ್ರಥಮ ಬಾರಿಗೆ ಉತ್ತಮ ಸಿ.ಸಿ ರಸ್ತೆ ನಿರ್ಮಾಣಗೊಂಡು ಜನತೆಗೆ ಅನೂಕೂಲವಾಗಿದೆ.
ಈ ಹಿಂದೆ ಕ್ಷೇತ್ರಕ್ಕೆ ವಿಶೇಷ ಅನುದಾನದ ಮೂಲಕ ಶಿಕ್ಷಣ, ಆರೋಗ್ಯ, ರಸ್ತೆ ಸೇತುವೆ ಮೂಲಕ ಹಲವು ಜನಪರ ಕಾರ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಯಮುನಾ ನಾಯ್ಕ, ಉಪಾಧ್ಯಕ್ಷ ಬಾಲಚಂದ್ರ ನಾಯ್ಕ, ಕಡ್ಲೆ ಗ್ರಾ.ಪಂ.ಅಧ್ಯಕ್ಷ ಗೊವಿಂದ ಗೌಡ, ಸದಸ್ಯರಾದ ರಜನಿ ನಾಯ್ಕ, ಲಕ್ಷ್ಮೀ ಮುಕ್ರಿ, ಗಣಪತಿ ಭಟ್, ನಾಗೇಶ ಗೌಡ, ಬಿಜೆಪಿ ಮುಖಂಡರಾದ ಜಿ.ಜಿ.ಭಟ್, ಆರ್.ಎಂ.ಹೆಗಡೆ, ಎನ್.ಎಸ್.ಹೆಗಡೆ, ವಿಶ್ವನಾಥ ಹೆಗಡೆ, ಶ್ರೀನಿವಾಸ ಶೆಟ್ಟಿ, ರವಿ ನಾಯ್ಕ, ಸುಬ್ರಹ್ಮಣ್ಯ ಹೆಗಡೆ, ಮಣಿಕಂಠ ಶೆಟ್ಟಿ, ವಿನಾಯಕ ಭಟ್, ಸುಬ್ರಹ್ಮಣ್ಯ ನಾಯ್ಕ, ದತ್ತು ಅವಧಾನಿ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರು ಹಾಜರಿದ್ದರು.