ಬನವಾಸಿ: ಐತಿಹಾಸಿಕ ಹಿನ್ನೆಲೆಯ ಬನವಾಸಿಯ ಅಭಿವೃದ್ಧಿಗೆ ಹೋರಾಟದ ಹಾದಿ ಅನಿವಾರ್ಯವಾಗಿದೆ ಎಂದು ಸಮಾಜ ಸೇವಕಿ ಶಾಂತಲಾ ಕಾನಳ್ಳಿ ಹೇಳಿದರು.
ಅವರು ಬುಧವಾರ ಬನವಾಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬನವಾಸಿ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಸಾವಿರಾರು ಪ್ರವಾಸಿಗರು ಪ್ರತಿನಿತ್ಯ ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಇಲ್ಲಿ ಸರಿಯಾದ ಮೂಲಭೂತ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ. ನೀರಿನ ಸೌಲಭ್ಯ, ಶೌಚಾಲಯ, ವಸತಿ ಸೌಕರ್ಯಗಳ ಕೊರತೆಯಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡಿಗರ ಪ್ರಥಮ ರಾಜಧಾನಿ ಎಂಬ ಹೆಗ್ಗಳಿಕೆಯಿರುವ ಶ್ರೀ ಮಧುಕೇಶ್ವರ ದೇವಸ್ಥಾನ ಕಳೆದ 15ವರ್ಷಗಳಿಂದ ಮಳೆಗಾಲದಲ್ಲಿ ಸೋರುತ್ತಿದೆ. ಇದು ಕನ್ನಡಿಗರಿಗೆ ಅವಮಾನ. ಬನವಾಸಿ ಅಭಿವೃದ್ಧಿಯ ಬಗ್ಗೆ ಸರ್ಕಾರ ಮತ್ತು ಪುರಾತತ್ವ ಇಲಾಖೆಗೆ ಇಷ್ಟು ನಿರ್ಲಕ್ಷ್ಯ ಯಾಕೆ? ಬನವಾಸಿಯ ಮಧುಕೇಶ್ವರ ದೇವಸ್ಥಾನಕ್ಕೆ ಪ್ರತಿವರ್ಷ ಲಕ್ಷಾಂತರ ರೂ. ಆದಾಯವಿದೆ. ಅದರೆ ಅಭಿವೃದ್ಧಿ ಕಾರ್ಯ ಶೂನ್ಯವಾಗಿದೆ. ಸರ್ಕಾರ ಮತ್ತು ಪುರಾತತ್ವ ಇಲಾಖೆಯು ಬನವಾಸಿಯ ಗತ ವೈಭವವನ್ನು ಉಳಿಸಿಕೊಂಡು ಹೋಗಬೇಕು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳದಿದ್ದರೆ ಹೋರಾಟದ ಹಾದಿ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಯಶ್ರೀ ಉಳ್ಳಾಗಡ್ಡಿ, ಗಂಗಾ ಸಹವಾಸಿ, ಉಮಾ ಸಂಗೀತಗಾರ, ಸುಮಂಗಲಾ ಬಾಹುಬಲಿ ಇದ್ದರು.