Slide
Slide
Slide
previous arrow
next arrow

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗದಿದ್ದಲ್ಲಿ ಆಮರಣಾಂತ ಉಪವಾಸ; ಅನಂತಮೂರ್ತಿ ಎಚ್ಚರಿಕೆ

300x250 AD

ಮೂರು ದಿನದ ಪಾದಯಾತ್ರೆಯಲ್ಲಿ ಸಾವಿರಾರು ಜನರ ಆಗ್ರಹ | ರಾಜ್ಯ ಸರ್ಕಾರದಿಂದ ಆಸ್ಪತ್ರೆಗೆ ಹಣ ಬಿಡುಗಡೆಗೆ ಆಗ್ರಹ

ಭಟ್ಕಳ: ರಾಜ್ಯ ಸರ್ಕಾರ ರಾಜ್ಯದ ಕರಾವಳಿ ಪ್ರದೇಶಗಳ ಸಮುದ್ರತೀರವನ್ನು ಸ್ವಚ್ಛಗೊಳಿಸುವ ಯೋಜನೆಗೆ ಮೀಸಲಿಟ್ಟ ರೂ.840 ಕೋಟಿ ಹಣದಲ್ಲಿ ಜಿಲ್ಲೆಯ ಜನರಿಗೆ ಅತ್ಯವಶ್ಯವಾಗಿ ಬೇಕಾಗಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿ, ಇಲ್ಲವೇ ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆ ಮಾಡುವಂತೆ ಘೋಷಣೆ ಮಾಡಿಸಿ ಇಲ್ಲವಾದರೆ ನಿಮ್ಮ ಕಛೇರಿಯ ಮುಂದೆ ಯುವಕರೊಂದಿಗೆ ಆಮರಣಾಂತ ಉಪವಾಸ ಮಾಡಿ ಉಗ್ರ ಹೋರಾಟ ಮಾಡಲಾಗುವುದು. ಮುಂದೆ ಅಗುವ ಅನಾಹುತಕ್ಕೆ ತಾವು ಕಾರಣರಾಗುತ್ತೀರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯಗೆ ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದರು.

ಅವರು ಮುಂಬರುವ ಬಜೆಟ್ ನಲ್ಲಿ ಕುಮಟಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಮಂಜೂರು ಮಾಡಬೇಕು ಹಾಗೂ ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡುವ ಯೋಜನಗಳ ಘೋಷಣೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿ ಕುಮಟಾದಿಂದ ಭಟ್ಕಳದವರೆಗೆ ಮೂರು ದಿನಗಳ ಕಾಲ ಹಮ್ಮಿಕೊಂಡ ಪಾದಯಾತ್ರೆಯ ಕೊನೆಯ ದಿನವಾದ ಬುಧವಾರ, ಭಟ್ಕಳದ ಉಸ್ತುವಾರಿ ಸಚಿವರ ಕಛೇರಿಯನ್ನು ತಲುಪಿ, ಮನವಿ ಸಲ್ಲಿಸಿ ಮಾತನಾಡಿದರು. ಉತ್ತರಕನ್ನಡ ಜಿಲ್ಲೆಗೆ ಈಗಾಗಲೇ ಕುಮಟಾದಲ್ಲಿ ಹಿಂದಿನ ಸರ್ಕಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸ್ಥಳವನ್ನು ಗುರುತಿಸಿದ್ದು, ಆದರೆ ನಂತರ ಬಂದ ಸರ್ಕಾರ ಆ ಬಗ್ಗೆ ಮುಂದಿನ ಕ್ರಮ ಕೈಗೊಂಡಿರುವುದಿಲ್ಲ. ಅದಕ್ಕೆ ತಕ್ಷಣ ಸರ್ಕಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು. ಇದೇ ಫೆ.16 ರಂದು ಸದನದಲ್ಲಿ ಮಂಡನೆಯಾಗುವ ಬಜೆಟ್‌ನಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದ ಅಗತ್ಯ ಕ್ರಮ ಮತ್ತು ಹಣವನ್ನು ಘೋಷಣೆ ಮಾಡಿ ಎಂದರು.

ಈಗಾಗಲೇ ಹಿಂದೊಮ್ಮೆ ಶಿರಸಿಯಿಂದ-ಕಾರವಾರದವರೆಗೆ ಪಾದಯಾತ್ರೆ ಮತ್ತು ಬೆಳಗಾವಿಯಲ್ಲಿ ನಡೆದ ಅಧಿವೇಶನ ಸಮಯದಲ್ಲೂ ಹೋರಾಟ ಮಾಡಿ ಉತ್ತರಕನ್ನಡ ಜಿಲ್ಲೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಬೇಡಿಕೆ ಇಟ್ಟರೂ, ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಆರೋಗ್ಯದ ವಿಚಾರದಲ್ಲಿ ಜಿಲ್ಲೆಯ ಜನರ ಜೀವನದ ಜೊತೆ ಆಟವಾಡದೆ ಈ ತಕ್ಷಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದ ಹಣವನ್ನು ಮಂಜೂರು ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ ಉತ್ತರಕನ್ನಡ ಜಿಲ್ಲೆ ಉತ್ತರವಿಲ್ಲದೆ ಅಭಿವೃದ್ಧಿಯಲ್ಲಿ ವಂಚಿತವಾಗಿದೆ. ಆ ನಿಟ್ಟಿನಲ್ಲಿ ಹಿರೇಗುತ್ತಿಯಲ್ಲಿ ಸರ್ಕಾರದ ಅಧೀನದಲ್ಲಿರುವ ಕೆಐಎಡಿಬಿಯ 1800 ಎಕರೆ ಜಾಗವಿದೆ. ಕನಿಷ್ಠ 1 ಸಾವಿರ ಎಕರೆಯಲ್ಲಿ ಸಾಪ್ಟ್ವೇರ್ ಪಾರ್ಕ್ ಮಾಡಿ, ಕಂಪನಿಗಳಿಗೆ ಜಾಗ ನೀಡಿ ಅಹ್ವಾನ ನೀಡಿದಲ್ಲಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಇದಕ್ಕೆ ಬೇಕಾದ ಕಾರ್ಯಚಟುವಟಿಕೆಗೆ ಸರ್ಕಾರ ಮುಂದಾಗಬೇಕು. 

ಸರ್ಕಾರ ಈ ಕೂಡಲೆ ಆರೋಗ್ಯ ಸೌಲಭ್ಯವನ್ನು ಆದ್ಯತೆಯನ್ನಾಗಿ ಸ್ವೀಕರಿಸಿ, ಉತ್ತರಕನ್ನಡ ಜಿಲ್ಲೆಗೆ ಅವಶ್ಯ ಇರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಬೇಕಾದ ಹಣವನ್ನು ಮಂಜೂರು ಮಾಡಬೇಕು. ಅಲ್ಲದೆ ಉತ್ತರಕನ್ನಡ ಜಿಲ್ಲೆಯ ಅಭಿವೃದ್ದಿಗೆ ನಾವು ಆಗ್ರಹಿಸರುವ ಉಳಿದ ಅಂಶಗಳನ್ನು ಪರಿಗಣಿಸಿ ಅಗತ್ಯ ಕ್ರಮದ ಚಿಂತನೆ ನಡೆಸಿ ಕಾರ್ಯರೂಪಕ್ಕೆ ತರಬೇಕೆಂದು ಆಗ್ರಹಿಸಿದರು. 

300x250 AD

ಸರಕಾರ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಜನಾಂದೋಲನ ರೂಪಿಸಿ ಆಮರಣಾಂತ ಉಪವಾಸ ಸತ್ಯಾಗ್ರಹದಂತ ಉಗ್ರ ಹೋರಾಟ ಮಾಡಲಾಗುವುದೆಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇನೆ ಎಂದರು.

ಬುಧವಾರ ಬೆಳಿಗ್ಗೆ ಮುರುಡೇಶ್ವರದಿಂದ ಆರಂಭವಾದ ಮೂರನೇ ದಿನದ ಪಾದಯಾತ್ರೆಯು ಮಾರ್ಗಮಧ್ಯ ಕಾಯ್ಕಿಣಿ, ಬಸ್ತಿ, ಸಾದರಹೊಳೆ, ಶಿರಾಲಿಗಳಲ್ಲಿ ಸಭೆಗಳನ್ನು ನಡೆಸಿ ಜನರಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆ ಬಗ್ಗೆ ತಿಳಿಸುತ್ತಾ, ಭಟ್ಕಳವನ್ನು ತಲುಪಿ, ನಗರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಕಛೇರಿಗೆ ತೆರಳಿ ಅವರ ಸಿಬ್ಬಂದಿಗೆ ಮನವಿ ಸಲ್ಲಿಸಿದರು.

ಪಾದಯಾತ್ರೆಯಲ್ಲಿ ರಾಜ್ಯ ಅನ್ನದಾತ ರೈತ ಸಂಘದ ಅಧ್ಯಕ್ಷ ಚಿದಾನಂದ ಹರಿಜನ, ಕರವೇ ಜನಧ್ವನಿ ಅಧ್ಯಕ್ಷ ಉಮೇಶ್ ಹರಿಕಾಂತ, ನಾಗರಾಜ ಪಟಗಾರ, ಸಂದೀಪ್‌ ನಾಯ್ಕ, ವಿವೇಕ ನಾಯ್ಕ, ಸಂತೋಷ ನಾಯ್ಕ, ಅಹೀಶ ಹೆಗಡೆ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top