ಅಂಕೋಲಾ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ ಇವರ ನಿರ್ದೇಶನದ ಮೇರೆಗೆ ಮಾರ್ಚ್ 9 ರಂದು ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ನಡೆಯಲಿದ್ದು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ಪ್ರಕರಣಗಳನ್ನು ಲೋಕ್ ಅದಾಲತ್ ನಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ
ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಜೆ.ಎಂ.ಎಫ್. ಸಿ ಹಿರಿಯ ನ್ಯಾಯಾಧೀಶ ಮನೋಹರ. ಎಂ ಹೇಳಿದರು.
ತಾಲೂಕಿನ ಜೆ.ಎಂ.ಎಫ್. ಸಿ ನ್ಯಾಯಾಲಯದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಬಹಳ ಕಾಲದಿಂದ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಲೋಕ ಅದಾಲತ್ ಉತ್ತಮ ವೇದಿಕೆಯಾಗಿದ್ದು ಇದರ ಪ್ರಯೋಜನ ಪಡೆಯುವ ಮೂಲಕ ಕಾರ್ಯಕ್ರಮದ ಉದ್ದೇಶವನ್ನು ಯಶಸ್ವಿಗೊಳಿಸಬೇಕಿದೆ ಎಂದರು.
ತಾಲೂಕಿನ ನ್ಯಾಯಾಲಯದಲ್ಲಿ ಹಣಕಾಸಿನ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಬಹಳಷ್ಟು ಪ್ರಕರಣಗಳು ಬಾಕಿಯಿದ್ದು ಹಣಕಾಸು ಸಂಸ್ಥೆಗಳು ಮತ್ತು ಸಾಲಗಾರರು ಇಬ್ಬರೂ ಪರಸ್ಪರ ಯಾರಿಗೂ ಹೊರೆ ಆಗದಂತೆ ಪ್ರಕರಣಗಳ ಇತ್ಯರ್ಥಕ್ಕೆ ಮನ ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಪ್ರಶಾಂತ ಬಾದವಾಡಗಿ ಮಾತನಾಡಿ ಬಾಕಿ ಇರುವ ಪ್ರಕರಣಗಳ ತ್ವರಿತ ಇತ್ಯರ್ಥದ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಕೊಳ್ಳುವ ಮೂಲಕ ಸಮಯದ ಉಳಿತಾಯ, ಕೌಟುಂಬಿಕ ಮತ್ತು ಮಾನಸಿಕ ನೆಮ್ಮದಿ ಪಡೆಯಬಹುದು, ವಿವಿಧ ಸರ್ಕಾರಿ ಇಲಾಖೆಗಳು ಸಹ ಬಾಕಿ ಇರುವ ಪ್ರಕರಣಗಳನ್ನು ಮುಗಿಸಿಕೊಂಡರೆ ಸಾರ್ವಜನಿಕರ ಸೇವೆಗಾಗಿ ತಮ್ಮ ಸಮಯ ನೀಡಬಹುದಾಗಿದೆ ಎಂದರು.
ಅಂಕೋಲಾ ನ್ಯಾಯಾಲಯದಲ್ಲಿ ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿಯಿದ್ದು ರಾಜಿ ಮೂಲಕ ಇತ್ಯರ್ಥ ಲೋಕ್ ಅದಾಲತ್ ನಲ್ಲಿ ಅವಕಾಶವಿದೆ ಎಂದು ಅವರು ತಿಳಿಸಿದರು.
ಹೆಚ್ಚುವರಿ ನ್ಯಾಯಾಧೀಶೆ ಅರ್ಪಿತಾ ಬೆಲ್ಲದ್, ಸಹಾಯಕ ಸರ್ಕಾರಿ ಅಭಿಯೋಜಕ ಗಿರೀಶ್ ಪಟಗಾರ, ಶಿಲ್ಪಾ ನಾಯ್ಕ, ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ್ ತಹಶೀಲ್ಧಾರ ಬಿ.ಜಿ.ಕುಲಕರ್ಣಿ, ಪಿ.ಎಸ್. ಐ ಜಯಶ್ರೀ ಪ್ರಭಾಕರ್ ಸೇರಿದಂತೆ ಅರಣ್ಯ, ಅಬಕಾರಿ, ಪುರಸಭೆ, ಕಂದಾಯ ಇಲಾಖೆಗಳ ಅಧಿಕಾರಿಗಳು, ಹಣಕಾಸು ಸಂಸ್ಥೆ ಗಳ ವ್ಯವಸ್ಥಾಪಕರು, ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು, ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.