ಶಿರಸಿ: ಹಿರಿಯ ಸಹಕಾರಿ, ಜಿಲ್ಲಾ ಕಾಂಗ್ರೆಸ್ ನ ನೇತಾರರು ಮತ್ತು ಟಿಎಸ್ಎಸ್ ಮಾಜಿ ಅಧ್ಯಕ್ಷರಾಗಿದ್ದ ಶಾಂತಾರಾಮ ಹೆಗಡೆ ಶೀಗೇಹಳ್ಳಿಯವರ ಸಾವು ಜಿಲ್ಲೆಯಲ್ಲಿ ಶೂನ್ಯದ ವಾತಾವರಣವನ್ನು ಉಂಟುಮಾಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಲ್ಲ ರೈತಾಪಿ ಜನರನ್ನೊಳಗೊಂಡಂತೆ ತನ್ನ ಸುತ್ತಲಿನವರಿಗೆ, ಕಾರ್ಯಕರ್ತರಿಗೂ ಹಿರಿಯಣ್ಣನ ರೀತಿಯಲ್ಲಿದ್ದ ಶಾಂತಣ್ಣನ ಮೃದು ಸ್ವಭಾವ, ವ್ಯಕ್ತಿತ್ವ ಎಂದಿಗೂ ಮರೆಯಲು ಅಸಾಧ್ಯ. ಶೈಕ್ಷಣಿಕ, ಧಾರ್ಮಿಕ ಕ್ಷೇತ್ರವನ್ನೊಳಗೊಂಡ ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಾಂತಾರಮ ಹೆಗಡೆಯವರ ಕೊಡುಗೆ ಜಿಲ್ಲೆಯ ಜನ ನೆನೆಯಲೇಬೇಕಾಗಿದೆ. ಪ್ರತಿಷ್ಟಿತ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾಗಿ ನಿಜಾರ್ಥದಲ್ಲಿ ಸಹಕಾರ ಕ್ಷೇತ್ರಕ್ಕೆ ಅನರ್ಘ್ಯ ರತ್ನ ಎನಿಸಿದ್ದಾರೆ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಕುಟುಂಬಸ್ಥರಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಪ್ರಾರ್ಥಿಸುವುದಾಗಿ ಅವರು ತಿಳಿಸಿದ್ದಾರೆ.