ಶಿರಸಿ: ಋಷಿಮುನಿಗಳ ತಪಸ್ಸಿನ ಪುಣ್ಯಭೂಮಿ ಶ್ರೀಕ್ಷೇತ್ರ ಕೊಳಗಿಬೀಸ್ ಈಗಾಗಲೇ ರಾಜ್ಯಾದ್ಯಂತ ಹೆಸರು ಮಾಡಿದ್ದು, ಪ್ರಸಿದ್ಧ ದೇವಸ್ಥಾನ ಮಾರುತಿ ದೇವಾಲಯ ನಿರಂತರವಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಕಳೆದ 2 ವರ್ಷದ ಹಿಂದೆ ಆಲಯಕ್ಕೆ ಮಹಾದ್ವಾರ ನಿರ್ಮಿತಗೊಂಡಿತ್ತು. ಇದೀಗ ಆಲಯಕ್ಕೆ ಮುಖ್ಯದ್ವಾರ ನಿರ್ಮಿಸಿಕೊಡುವ ಸಂಕಲ್ಪ ಮಾಡಿದ್ದ ಅಲ್ಲಿಯ ಭಕ್ತರೂ ಆದ ಶಿರಸಿಯ ಹೇಮಾ ಹೆಬ್ಬಾರ್ ವಿವಿಧ ಧಾರ್ಮಿಕ ವಿಧಿ-ವಿಧಾನದೊಂದಿಗೆ ಮುಖ್ಯದ್ವಾರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದರು.
ಕೊಳಗಿಬೀಸ್ ಪ್ರಧಾನ ಅರ್ಚಕ ವಿ.ಕುಮಾರ ಭಟ್ಟ ಆಚಾರ್ಯತ್ವ, ಮಾರ್ಗದರ್ಶನದಲ್ಲಿ ವೈದಿಕರ ಮಂತ್ರ ಪಠಣಗಳೊಂದಿಗೆ ವಿದ್ಯುಕ್ತವಾಗಿ ಭೂಮಿ ಪೂಜೆ ನೆರವೇರಿದ್ದು, ಸುತ್ತಸುಮತ್ತಲಿನ ಊರ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಕ್ಷೀಕರಿಸಿದರು. ಮುಖ್ಯ ದ್ವಾರವು 30ಅಡಿ ಅಗಲ ಹಾಗೂ 20ಅಡಿ ಎತ್ತರದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಅದರ ಮೇಲ್ಭಾಗದಲ್ಲಿ ಬೃಹದಾಕಾರದ ಮಾರುತಿ ಮೂರ್ತಿ ಕೂಡ ನಿರ್ಮಿತಗೊಳ್ಳಲಿದೆ. ಹಳೆಯ ಶೈಲಿಯಲ್ಲಿಯೇ ಮುಖ್ಯ ದ್ವಾರ ನಿರ್ಮಿಸುವ ಸಂಕಲ್ಪವಿದ್ದು, ಅದರ ರೂಪು ರೇಷೆಯ ಮಾಹಿತಿಯನ್ನು ಹೇಮಾ ಹೆಬ್ಬಾರ್ ಪತಿ ಶ್ರೀನಿವಾಸ ಹೆಬ್ಬಾರ ವಿವರಿಸಿದರು. ಇದೊಂದು ಶಿರಸಿ ತಾಲೂಕಿನ ಇನ್ನಿತರ ದೇವಸ್ಥಾನದಲ್ಲಿರುವ ದ್ವಾರಕ್ಕಿಂತ ವಿಭಿನ್ನವಾಗಿರುತ್ತಿದ್ದು, ಭಕ್ತರನ್ನು ಸಂತೃಪ್ತಿ ಭಾವನೆಗೊಳಿಸುವ ವಿಶೇಷ ದ್ವಾರವಾಗಿ ನಿರ್ಮಿತಗೊಳ್ಳಲಿದೆ ಎಂದರು.
ಭೂಮಿಪೂಜೆ ಸಮಾರಂಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ ಭಟ್ಟ ಇಳ್ಳುಮನೆ, ಸದಸ್ಯರಾದ ಶಿರಿ ಭಟ್ಟ, ಉಮಾಪತಿ ಭಟ್ಟ, ರಮೇಶ ಭಟ್ಟ ಸೇರಿದಂತೆ ಎಲ್ಲರೂ ಪಾಲ್ಗೊಂಡು ಸಹಕರಿಸಿದರು. ಇದೇ ಸಂದರ್ಭದಲ್ಲಿ ಮುಖ್ಯ ದ್ವಾರ ನಿರ್ಮಾಪಕರಿಗೆ ಧಾರ್ಮಿಕ ಪದ್ದತಿಯಂತೆ ದ್ವಾರ ನಿರ್ಮಾಣದ ಉಪಕರಗಳನ್ನು ಹೇಮಾ ಶ್ರೀನಿವಾಸ ಹೆಬ್ಬಾರ ಹಸ್ತಾಂತರಿಸಿದರು.