ಶಿರಸಿ: ತಾಲೂಕಿನ ಭೈರುಂಬೆಯ ಶ್ರೀ ಶಾರದಾಂಬಾ ಪ್ರೌಢಶಾಲೆಯ ಆವರಣದ ಗೋಡೆಯ ಮೇಲೆ ಚಿತ್ರಿಸಿದ ಸಂಪೂರ್ಣ ರಾಮಾಯಣ ಕುರಿತ ಹಸೆ ಚಿತ್ರಕಲೆ ಎಲ್ಲರ ಗಮನ ಸೆಳೆಯುತ್ತಿದೆ.
ಪ್ರೌಢಶಾಲೆಯ ಹಳೆ ವಿದ್ಯಾರ್ಥಿನಿ ಸಂಹಿತಾ ಹೆಗಡೆ ಹಸೆ ಚಿತ್ರಕಲೆ ಮೂಲಕ ಶ್ರೀರಾಮನ ಬಾಲ್ಯದಿಂದ, ಪಟ್ಟಾಭಿಷೇಕದ ಸಂಪೂರ್ಣ ರಾಮಾಯಣವನ್ನು ಸುಂದರವಾಗಿ ಚಿತ್ರಿಸಿದ್ದು, ಮಕ್ಕಳಿಗೆ ಇತಿಹಾಸ ತಿಳಿಸುವ ದೃಷ್ಠಿಯಿಂದ ಅನೇಕ ವಿಷಯಾಧಾರಿತ ಚರ್ಚೆ ಹಾಗೂ ವಿನೂತನ ಮಾದರಿಯ ವಿದ್ಯಾಭ್ಯಾಸದ ಜತೆ ಪುರಾಣದ ಅರಿವನ್ನು ಮೂಡಿಸುವ ಉದ್ದೇಶ ಇದಾಗಿದೆ. ಈ ಚಿತ್ರಗಳು ವಿದ್ಯಾರ್ಥಿಗಳಲ್ಲಿ ರಾಮಾಯಣದ ಬಗೆಗಿನ ಆಸಕ್ತಿ ಹೆಚ್ಚುವಂತೆ ಮಾಡಿದೆ. ಅಲ್ಲದೇ ಚಿತ್ರಗಳಿಂದ ಸುಲಭವಾಗಿ ರಾಮಾಯಣವನ್ನು ನೆನಪಿಟ್ಟುಕೊಳ್ಳಬಹುದಾಗಿದೆ.
ಈ ಶಾಲೆಯ ವಿದ್ಯಾರ್ಥಿಗಳು ರಾಮಾಯಾಣದ ಕುರಿತು ಎಳೆ-ಎಳೆಯಾಗಿ ತಿಳಿದುಕೊಂಡಿದ್ದಾರೆ. ಭಗವದ್ಗೀತೆಯ ಕುರಿತು ಉಪನ್ಯಾಸ ನೀಡುವ ಅನೇಕ ವಿದ್ಯಾರ್ಥಿಗಳು ಈ ಶಾಲೆಯಲ್ಲಿದ್ದಾರೆ. ಪುರಾಣ-ಇತಿಹಾಸಗಳ ಮೇಲೆ ಅತಿ ಹೆಚ್ಚು ಆಸಕ್ತಿ ಹೊಂದಿರುವ ಇಲ್ಲಿನ ವಿದ್ಯಾರ್ಥಿಗಳಿಗೆ ಅವುಗಳನ್ನು ತಿಳಿಸುವ ಪ್ರಯತ್ನ ಮಾಡಿರುವುದು ಇತರೆ ಶಾಲೆಗಳಿಗೂ ಮಾದರಿಯಾಗಿದೆ.
ಶಾಲೆಯ ನೂತನ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಅದೇ ವೇಳೆ ನಮ್ಮ ಪ್ರಾಂಶುಪಾಲರು ಗೋಡೆಯ ಮೇಲೆ ಪೌರಾಣಿಕ ಕಥೆ ಬಿಡಿಸುವಂತೆ ತಿಳಿಸಿದ್ದರು. ಹಾಗಾಗಿ ವರ್ಲಿ ಆರ್ಟ್ ಬೇಸ್ ಆಗಿ ಇಟ್ಟುಕೊಂಡು ರಾಮಾಯಾಣ ಕುರಿತು ಚಿತ್ರಿಸಿದ್ದೇನೆ. ಇದು ಪುರಾಣದ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಹೆಚ್ಚಿಸಲಿದೆ. -ಸಂಹಿತಾ ಹೆಗಡೆ, ಶಾಲೆ ಹಳೆ ವಿದ್ಯಾರ್ಥಿನಿ
ವಿದ್ಯಾರ್ಥಿಗಳಿಗೆ ಈ ರೀತಿಯ ಪುರಾಣಗಳ ಮಹತ್ವ ತಿಳಿಸುವ ಉದ್ದೇಶ ನಮ್ಮದಾಗಿತ್ತು. ರಾಮಾಯಣ ಅಷ್ಟೇ ಅಲ್ಲದೆ ಮುಂದಿನ ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿರುವ ಶಾಲೆಯ ಬೇರೆ ನೂತನ ಕಟ್ಟಡದ ಗೋಡೆಗಳಿಗೆ ಮಹಾಭಾರತದ ಪೌರಾಣಿಕ ಮಹತ್ವವನ್ನು ಚಿತ್ರಕಲೆ ಮೂಲಕ ಪ್ರಸ್ತುತಪಡಿಸಲಾಗುವುದು. -ವಸಂತ್ ಹೆಗಡೆ. ಪ್ರಾಂಶುಪಾಲರು. ಶ್ರೀ ಶಾರದಾಂಬಾ ಪ್ರೌಢಶಾಲೆ.