ಬನವಾಸಿ: ಸಂವಿಧಾನದ ಆಶಯಗಳನ್ನು ಅರಿತು, ಕಾನೂನನ್ನು ಪ್ರತಿಯೊಬ್ಬ ಪ್ರಜೆಯೂ ಪಾಲನೆ ಮಾಡಬೇಕು ಎಂದು ಬನವಾಸಿ ಗ್ರಾಪಂ ಅಧ್ಯಕ್ಷೆ ಬೀಬಿ ಆಯಿಷಾ ಖಾಸಿಂ ಖಾನ್ ಹೇಳಿದರು.
ಅವರು ಪಟ್ಟಣದ ದಿ.ಹರ್ಡೇಕರ ಮಂಜಪ್ಪ ಸ್ಮಾರಕ ರಂಗಮಂದಿರದ ಆವರಣದಲ್ಲಿ ಶುಕ್ರವಾರ 75 ನೇ ಗಣರಾಜ್ಯೋತ್ಸವದ ಪ್ರಯುಕ್ತ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ಆಡಳಿತಕ್ಕೊಂದು ಶಿಸ್ತು ರೂಪಿಸುವ ಸಂವಿಧಾನವನ್ನು ಅನುಸರಿಸುವುದು, ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇಶದ ಪ್ರಗತಿಗೆ ಸುಭದ್ರ ಅಡಿಪಾಯ ಹಾಕಿಕೊಟ್ಟ ಸಂವಿಧಾನ ಜಾರಿಗೆ ತರುವಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಅನೇಕ ಮಹನೀಯರು ಶ್ರಮಿಸಿದ್ದಾರೆ. ಅವರನ್ನು ಸ್ಮರಿಸುವ ಜೊತೆಗೆ, ಅವರ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದರು.
ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಸಿದ್ದವೀರೇಶ ನೆರಗಲ್, ಹಿರಿಯರಾದ ಟಿ.ಜಿ.ನಾಡಿಗೇರ, ಎಮ್.ಜಿ ದಾವಣಗೆರೆ, ಪ್ರಾಂಶುಪಾಲರಾದ ಎಮ್.ಕೆ ನಾಯ್ಕ್, ತಿಮ್ಮಣ್ಣ ರೆಡ್ಡಿ, ಚನ್ನಬಸಪ್ಪ, ಹಾಗೂ ಗ್ರಾಪಂ ಸದಸ್ಯರು, ಶಾಲಾ ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ಹಾಗೂ ಮನೋರಂಜನಾ ಕಾರ್ಯಕ್ರಮ ನಡೆಯಿತು.