ದಾಂಡೇಲಿ: ಸಾರಿಗೆ ಇಲಾಖೆ ರೂಪಿಸಿರುವ ರಸ್ತೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ವೈ.ಎನ್. ಮಸರ್ಕಲ್ ಹೇಳಿದರು. ಪಟ್ಟಣದ ಕೆಎಲ್ಎಸ್ ವಿಡಿಐಟಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ 2024 ಕಾರ್ಯಕ್ರಮವನ್ನು ಜ. 25ರಂದು ಆಯೋಜಿಸಲಾಗಿತ್ತು. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ದಾಂಡೇಲಿಯ ಹಿರಿಯ ವಾಹನ ಮೋಟಾರ್ ನಿರೀಕ್ಷಕರಾದ ವೈ.ಎನ್. ಮಸರ್ಕಲ್ ಅತಿಥಿಗಳಾಗಿ ಆಗಮಿಸಿ, ಕರ್ನಾಟಕ ರಾಜ್ಯ ಸರ್ಕಾರ ರೂಪಿಸಿರುವ ರಸ್ತೆ ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸುತ್ತ, ಕಡ್ಡಾಯವಾಗಿ ನಿಯಮವನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಾಹನ ನಡೆಸುವ ವಿಚಾರದಲ್ಲಿನ ಹಲವಾರು ನಿಬಂಧನೆಗಳನ್ನು ವಿವರಿಸುತ್ತ, ವಾಹನ ಚಲಾವಣೆ ಮಾಡುವ ಸಮಯದಲ್ಲಿ ಮೊಬೈಲ್ ಫೋನ್ ಬಳಸದಂತೆ ಹಾಗೂ ಕಡ್ಡಾಯವಾಗಿ ಹಲ್ಮೆಟ್ ಧರಿಸುವಂತೆ ಮತ್ತು ಲೈಸನ್ಸ್ ಹೊಂದದೆ ವಾಹನ ಚಲಾವಣೆ ಮಾಡಬಾರದು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ವಿ ಎ ಕುಲಕರ್ಣಿ ರಸ್ತೆ ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ ಅಪಘಾತವಾಗದಂತೆ ವಾಹನ ಚಲಾಯಿಸಿಬೇಕೆಂದು ನುಡಿದರು. ದಾಂಡೇಲಿಯ ಎ.ಆರ್. ಟಿ. ಓ. ಕಚೇರಿಯು ನೀಡುತ್ತಿರುವ ಸಹಕಾರಕ್ಕೆ ಮಹಾವಿದ್ಯಾಲಯವು ಆಭಾರಿಯಾಗಿದೆ ಎಂದು ಹೇಳಿದರು. ದಾಂಡೇಲಿಯ ಎ.ಆರ್. ಟಿ. ಓ. ಕಚೇರಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನಪ್ಪ ಕೊಪ್ರದ್ ಕಾರ್ಯಕ್ರಮ ನಿಯೋಜನೆಗೆ ಸಹಕರಿಸಿದರು.
ಎನ್ಎಸ್ಎಸ್ ಸಂಚಾಲಕ ಪ್ರೊ. ಸಂತೋಷ್ ಸವಣೂರ್ ಸ್ವಾಗತಿಸುತ್ತ, ಸಭಿಕರಿಗೆ ಸುರಕ್ಷತಾ ಪ್ರತಿಜ್ಞೆ ಮತ್ತು ಮತದಾರ ಪ್ರತಿಜ್ಞೆ ಬೋಧಿಸಿದರು. ಸಾರಿಗೆ ವಿಭಾಗದ ಸಂಚಾಲಕ ಡಾ. ಅನಂತ ಜೋಶಿ ವಂದಿಸಿದರು. ಡಾ. ವಿನೋದ್ ನಾಯಕ್ ಮತ್ತು ವಿರೂಪಾಕ್ಷ ಮೇಲಿನಮನಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಮಹಾವಿದ್ಯಾಲಯದ ಸಾರಿಗೆ ವಿಭಾಗ ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ದಾಂಡೇಲಿ ಸಹಯೋಗದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗದ ಡೀನ್ ಗಳು, ವಿಭಾಗ ಮುಖ್ಯಸ್ಥರುಗಳು ಹಾಗೂ 200ಕ್ಕೂ ಅಧಿಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.