ಶಿರಸಿ: ಸೋಂದಾ ಸ್ವರ್ಣವಲ್ಲೀ ಸರ್ವಜ್ಞೇಂದ್ರ ಸರಸ್ವತಿ ಮಹಾಸಂಸ್ಥಾನದ ಅಂಗಸಂಸ್ಥೆ ಯೋಗ ಮಂದಿರದ 27ನೇ ವಾರ್ಷಿಕೋತ್ಸವ ಜ.27 ಶನಿವಾರದಂದು ನಗರದ ಯೋಗ ಮಂದಿರದ ಆವಾರದಲ್ಲಿ ನಡೆಯಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸನ್ಮಾನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಸ್ವರ್ಣವಲ್ಲೀ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಧಾರ್ಮಿಕ ಹಾಗೂ ಸಭಾ ಕಾರ್ಯಕ್ರಮಗಳಲ್ಲಿ ಸಾನ್ನಿಧ್ಯ ನೀಡಲಿದ್ದಾರೆ.
ಅಂದು ಬೆಳಿಗ್ಗೆ 8.30ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಸ್ವರ್ಣವಲ್ಲೀ ಶ್ರೀಗಳ ಪಾದಪೂಜೆ ಮತ್ತು ಭಿಕ್ಷೆಯ ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ಇರಲಿದೆ. ಮಧ್ಯಾಹ್ನ 3.30ಕ್ಕೆ ಶ್ರೀಗಳ ಸಾನ್ನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಸ್ವರ್ಣವಲ್ಲೀ ಮಹಾಸಂಸ್ಥಾನದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಉಪಾಧ್ಯಕ್ಷ ನಾರಾಯಣ ಭಟ್ಟ ಬಳ್ಳಿ ಹಾಗೂ ಕೇಂದ್ರ ಮಾತೃ ಮಂಡಲದ ಅಧ್ಯಕ್ಷೆ ಗೀತಾ ಹೆಗಡೆ ಶೀಗೆಮನೆ ಉಪಸ್ಥಿತರಿರಲಿದ್ದಾರೆ. ಇದೇ ವೇಳೆ ಸಮಾಜ ಸೇವಕ, ಅಂಕಣಕಾರ ವಿ.ಪಿ. ಹೆಗಡೆ ವೈಶಾಲಿ ಹಾಗೂ ಪರಿಸರ ತಜ್ಞ ಶಿವಾನಂದ ಕಳವೆ ಅವರಿಗೆ ಸಮ್ಮಾನ ನಡೆಯಲಿದೆ. ಬಳಿಕ ವಾರ್ಷಿಕೋತ್ಸವದ ಅಂಗವಾಗಿ ನಡೆದ ಬಾಲವಾಡಿ ಮಕ್ಕಳಿಗೆ ಛದ್ಮವೇಷ, ಶ್ಲೋಕ ಹೇಳುವುದು ಹಾಗೂ ಶಂಕರ ಸ್ತೋತ್ರ ಪಠಣ. ಮಾತೆಯರಿಗೆ ಸಾಂಪ್ರದಾಯಿಕ ಹಾಡು ಹೇಳುವುದು, ಭಗವದ್ಗೀತೆ 10ನೇ ಅಧ್ಯಾಯದ ಕಂಠಪಾಠ, ಭಕ್ತಿಗೀತೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಯೋಗ ಮಂದಿರದ ಅಧ್ಯಕ್ಷ ಎಸ್.ಎನ್.ಭಟ್ಟ ಉಪಾಧ್ಯ, ಕಾರ್ಯದರ್ಶಿ ಸಿ.ಎಸ್ ಹೆಗಡೆ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.