ಕವಲಕ್ಕಿ ಸಮಾನ ಮನಸ್ಕರ ಕಾರ್ಯಕ್ಕೆ ಶ್ಲಾಘನೆ
ಹೊನ್ನಾವರ: ಅಯೋಧ್ಯೆಯ ಶ್ರೀ ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಶ್ರೀ ರಾಮಭಕ್ತರು ದೇಶಾದ್ಯಂತ ಪೂಜೆ, ಭಜನೆ, ಅನ್ನ ಪ್ರಸಾದ ಸಂತರ್ಪಣೆ, ಸಂಗೀತ, ನೃತ್ಯ, ನಾದಾರಾಧನೆ ಹೀಗೆ ನಾನಾ ರೀತಿಯಲ್ಲಿ ಕಾರ್ಯಕ್ರಮವನ್ನು ವೈಭಯುತವಾಗಿ ಆಚರಣೆ ಮಾಡಿ ಸಂಭ್ರಮ ಪಟ್ಟಿದ್ದಾರೆ. ಇಲ್ಲೊಂದು ರಾಮ ಭಕ್ತರ ತಂಡ ಈ ಎಲ್ಲಾ ಕಾರ್ಯಕ್ರಮಕ್ಕಿಂತಲು ವಿಭಿನ್ನವಾಗಿ ಆಚರಣೆ ಮಾಡುವುದರ ಮೂಲಕ ಪ್ರಶಂಸೆಗೆ ಪಾತ್ರ ರಾಗಿದ್ದಾರೆ.
ಮುಗ್ವಾ ಗ್ರಾಮ ಪಂಚಾಯತ ವ್ಯಾಪ್ತಿಯ ಕವಲಕ್ಕಿ ಸುತ್ತಮುತ್ತಲಿನ ಸಮಾನ ಮನಸ್ಕರ ರಾಮ ಭಕ್ತರ ತಂಡ ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠೆಯ ದಿನದ ಅಭಿಮಾನದ ಬ್ಯಾನರ್ ಅಳವಡಿಸಿ, ಬಾನೆತ್ತರದ ಭಗವಾಧ್ವಜ, ಕೇಸರಿ ಪತಾಕೆ ಹಾಕಿದ್ದಾರೆ. ಅದರ ಜೊತೆಗೆ ಸುತ್ತಮುತ್ತಲಿನ ಪ್ರೌಢಶಾಲೆ ಮತ್ತು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬಾಲ ರಾಮಾಯಣ ಪುಸ್ತಕ ಮತ್ತು ಸಿಹಿ ತಿಂಡಿ ವಿತರಣೆ ಮಾಡುವುದರ ಮೂಲಕ ಅರ್ಥಪೂರ್ಣ ಕಾರ್ಯಮಾಡಿ ರಾಮ ಭಕ್ತಿಗೆ ಪಾತ್ರರಾಗಿದ್ದಾರೆ.
ಕವಲಕ್ಕಿ ಸುತ್ತಮುತ್ತಲಿನಲ್ಲಿ ಉದ್ಯಮ ಮತ್ತು ಉದ್ಯೋಗ ಮಾಡಿಕೊಂಡಿರುವ ಮಹೇಶ ಗೌಡ, ಎಲ್. ಆರ್. ಹೆಗಡೆ, ಮಹೇಶ ಭಟ್ಟ, ಗಣೇಶ ಗೌಡ ನಗರೆ, ಸುಬ್ರಹ್ಮಣ್ಯ ಗೌಡ, ಲಕ್ಷ್ಮಿಕಾಂತ್ ಹೆಗಡೆ, ಭಾಸ್ಕರ ಗೌಡ, ನಾಗರಾಜ ಗೌಡ, ಅಜಿತ್ ಹೆಗಡೆ, ಗಣೇಶ ಗೌಡ ಈ ಹತ್ತು ಜನ ಸಮಾನ ಮನಸ್ಕರು ಈ ಒಂದು ವಿಶಿಷ್ಟ ಕಾರ್ಯಕ್ರಮ ಆಯೋಜನೆ ಮಾಡಿದವರಾಗಿದ್ದಾರೆ. ಇಡೀ ವಿಶ್ವ ರಾಮ ಮಯವಾಗಿರುವ ಸಂದರ್ಭದಲ್ಲಿ ಇವರೆಲ್ಲರೂ ಒಂದು ದಿನ ಬಿಡುವು ಮಾಡಿಕೊಂಡು ಆಯೋಜನೆ ಮಾಡಿರುವ ಈ ಕಾರ್ಯಕ್ರಮ ಸದಾ ನೆನಪಿನಲ್ಲಿ ಇರುವುದರ ಜೊತೆಗೆ ಭಕ್ತಿ ಪೂರ್ವಕ ಮತ್ತು ವಿದ್ಯಾರ್ಥಿಗಳಿಗೆ ರಾಮಾಯಣದ ಅರಿವು ಮೂಡಿಸುವಲ್ಲಿ ಸಹಕಾರಿ ಆಗಿದೆ.
ಸೋಮವಾರ ಬೆಳಿಗ್ಗೆಯಿಂದ ಸುತ್ತಮುತ್ತಲಿನ ಶಾಲೆಗಳಿಗೆ ಭೇಟಿ ನೀಡಿ ಸರಕಾರಿ ಕನ್ನಡ ಶಾಲೆ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಒಟ್ಟು 200 ಬಾಲ ರಾಮಾಯಣ ಪುಸ್ತಕ, ಸಿಹಿ ತಿಂಡಿ, ಉಳಿದ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ನೀಡಿದ್ದು ಒಟ್ಟು 400 ವಿದ್ಯಾರ್ಥಿಗಳನ್ನು ತಲುಪುವ ಮೂಲಕ ವಿಭಿನ್ನ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠೆ ಪ್ರಯುಕ್ತ ವಿಶ್ವವೇ ಎದ್ದು ನಿಂತಿದೆ ಎಂದರೆ ತಪ್ಪಾಗಲಾರದು. ಹಿಂದು ಸಮಾಜಕ್ಕೆ ಸಂಭ್ರಮವೋ ಸಂಭ್ರಮ. ಮನೆಯಲ್ಲಿ, ಅಂಗಡಿಯಲ್ಲಿ, ಆಟೋ ಚಾಲಕ ಮಾಲಕ ಸಂಘದವರು ಹೀಗೆ ವಿವಿಧ ಸಂಘ ಸಂಸ್ಥೆ, ಕಚೇರಿ ಎಲ್ಲವೂ ದೀಪಾವಳಿಯಂತೆ ದೀಪಾಲಂಕಾರಗೊಂಡಿದೆ. ಈ ಎಲ್ಲಾ ಕಾರ್ಯಕ್ಕಿಂತಲು ಕವಲಕ್ಕಿಯ ಸಮಾನ ಮನಸ್ಕರು ವಿದ್ಯಾರ್ಥಿಗಳಿಗೆ ಬಾಲ ರಾಮಾಯಣ ಪುಸ್ತಕ ವಿತರಣೆ ಮಾಡಿದ್ದು ಮೇಲ್ಪಂಕ್ತಿ ಕಾರ್ಯಕ್ರಮವಾಗಿ ರೂಪು ಗೊಂಡಿದೆ. ಜೊತೆಗೆ ವಿದ್ಯಾರ್ಥಿಗಳ, ರಾಮ ಭಕ್ತರ, ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ದಿನ ಏನಾದರು ವಿಶೇಷ ಕಾರ್ಯಕ್ರಮ ಮಾಡಬೇಕು ಎಂದು ಆಲೋಚನೆ ಮಾಡಿದ್ದೆವು. ಅದರಂತೆ ಯಾವುದೇ ಬೇದಭಾವ ಇಲ್ಲದೆ ಎಲ್ಲ ಸಮಾನ ಮನಸ್ಕರು ಒಟ್ಟು ಗೂಡಿ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಸಿಹಿ ವಿತರಣೆ ಮಾಡಿದ್ದೇವೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ನಾವು ಮಾಡಿರುವ ಕಾರ್ಯಕ್ರಮ ಮನಸ್ಸಿಗೆ ತೃಪ್ತಿ ತಂದಿದೆ.– ಮಹೇಶ ಗೌಡ, ಗುಂಡಿಬೈಲ್——— ಏಕಲವ್ಯ