ಹೊನ್ನಾವರ: ಆರ್.ಈ.ಎಸ್ ಪ್ರೌಢಶಾಲೆ ಹಳದೀಪುರದಲ್ಲಿ 10ನೇತರಗತಿ ವಾರ್ಷಿಕ ಪರೀಕ್ಷೆಗಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಸಂಜೆ 4:30ರಿಂದ ರಾತ್ರಿ 9:00ರವರೆಗೆ ವಿಶೇಷ ತರಗತಿ ನಡೆಸುತ್ತಿದ್ದಾರೆ. ಮಕ್ಕಳು ಉತ್ತಮ ಅಂಕಗಳನ್ನು ಪಡೆದು ಪ್ರಗತಿಯನ್ನು ಕಾಣುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಾಕಿಕೊಂಡಿದೆ ಎಂದು ಶಾಲೆಯ ಮುಖ್ಯ ಗುರುಗಳಾದ ಎಸ್.ಎಚ್. ಪೂಜಾರ, ಸಹ ಶಿಕ್ಷಕರಾದ ಚಂದ್ರಪ್ಪ ಅಣ್ಣಪ್ಪನವರ ತಿಳಿಸಿದರು.
ಈ ಕಾರ್ಯಕ್ರಮವು 2016ರಿಂದ ಇಲ್ಲಿಯವರೆಗೂ ನಡೆದುಕೊಂಡು ಬಂದಿದ್ದು, 2022-23ನೇ ಸಾಲಿನ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.96 ಫಲಿತಾಂಶ ಬಂದಿದೆ ಎಂದು ತಿಳಿಸಿದರು. ಪ್ರತಿ ದಿನ 4:30 ಶಾಲೆ ಬಿಟ್ಟ ತಕ್ಷಣ ಓದಿನಲ್ಲಿ ಮುಂದಿರುವ ಮಕ್ಕಳನ್ನು ಮನೆಗೆ ಕಳುಹಿಸಿ ಹಿಂದುಳಿದ ಮಕ್ಕಳನ್ನು ಶಾಲೆಯಲ್ಲಿ ಉಳಿಸಿಕೊಂಡು ಅವರಿಗೆ ಚಹಾ ತಿಂಡಿ ತಿನಿಸುಗಳನ್ನು ಎಲ್ಲಾ ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ವಹಣೆ ಮಾಡುತ್ತಾರೆ. ಇದಕ್ಕೆ ಆಡಳಿತ ಮಂಡಳಿ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು. ಈ ರಾತ್ರಿ ಶಾಲೆ ವಿನೂತನ ಕಾರ್ಯಕ್ರಮ ಮಾಡಲು ಎಲ್ಲಾ ಪಾಲಕರು ಒಪ್ಪಿಗೆ ಪಡೆಯಲಾಗಿದ್ದು, ವೇಳಾಪಟ್ಟಿಯಂತೆ ಎಲ್ಲಾ ವಿಷಯಗಳನ್ನೂ ಅಭ್ಯಾಸ ಮಾಡಿಸಲಾಗುತ್ತದೆ ಮತ್ತು ಹೆಣ್ಣು ಮಕ್ಕಳು ಇರುವುದರಿಂದ ಅವರಿಗೆ ಸಹ ಶಿಕ್ಷಕಿಯರು ಇದ್ದು ಓದಿಸುವ ಕಾರ್ಯ ಮಾಡುತ್ತಾರೆ. ಇನ್ನು ಪರೀಕ್ಷೆ 20ದಿನ ಉಳಿದಿರುವಾಗ ಹೆಣ್ಣುಮಕ್ಕಳನ್ನು ರಾತ್ರಿ 9:00 ಘಂಟೆಯವರೆಗು ಓದಿಸಿ ಪಾಲಕರೊಡನೆ ಮನೆಗೆ ಕಳುಹಿಸಿ ಗಂಡು ಮಕ್ಕಳನ್ನು ಅಲ್ಲೆ ಇಟ್ಟುಕೊಂಡು ಊಟ ಕೊಟ್ಟು 11:00 ಘಂಟೆಯವರೆಗೆ ಓದಿಸಿ ಅಲ್ಲೆ ಶಿಕ್ಷಕರು ಜೊತೆ ಉಳಿದುಕೊಂಡು ಬೆಳಿಗ್ಗೆ 4:30ಕ್ಕೆ ಎಬ್ಬಿಸಿ ಚಹಾ ಬಿಸ್ಕತ್ತು ಕೊಟ್ಟು 8:30ಘಂಟೆಯವರೆಗೂ ಓದಿಸಿ ಮನೆಗೆ ಕಳುಹಿಸಿ,ಪುನಃ 10ಕ್ಕೆ ಶಾಲೆಗೆ ಬಂದು ಯಥಾವತ್ತಾಗಿ ತರಗತಿಗೆ ಮಕ್ಕಳು ಹಾಜರಾಗುತ್ತಾರೆ ಎಂದು ಮುಖ್ಯಶಿಕ್ಷಕ ಎಸ್.ಎಚ್. ಪೂಜಾರ ತಿಳಿಸಿದರು. ಇದರ ಉದ್ದೇಶ ಶಾಲೆಗೆ ಒಳ್ಳೆಯ ಫಲಿತಾಂಶ ಮಕ್ಕಳು ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು. ಈ ಕಾರ್ಯಕ್ರಮವನ್ನು ಕಳೆದ 8ವರ್ಷದಿಂದ ಮಾಡಲಾಗುತ್ತದೆ ಎಂದು ತಿಳಿಸಿದರು . ಶಾಲೆಯ ಎಲ್ಲಾ ಶಿಕ್ಷಕರು ಮಾಡುತ್ತಿರುವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯವಾಗಿದ್ದು, ಅವರಿಗೆ ಶುಭವಾಗಲಿ ಎಂದು ಹಾರೈಸೋಣ.