ಸಿದ್ದಾಪುರ: ಇಂದಿನ ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಮಾತೃಭಾಷೆ ಕನ್ನಡ ವ್ಯಾಕರಣ ಮತ್ತು ಸಾಹಿತ್ಯದ ಸಂಪೂರ್ಣ ಅರಿವು ಹೊಂದಿರಬೇಕೆಂದು ಸಿದ್ದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ನುಡಿದರು.
ಅವರಿಂದು ತಾಲ್ಲೂಕಿನ ಬೇಡ್ಕಣಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಕೋಶ’ ದ ಅಡಿಯಲ್ಲಿ ಏರ್ಪಡಿಸಿದ್ದ ‘ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ವ್ಯಾಕರಣ ಮತ್ತು ಸಾಹಿತ್ಯದ ಕಾರ್ಯಾಗಾರ’ ಉದ್ಘಾಟಿಸಿ ಉಪನ್ಯಾಸ ನೀಡಿದರು. ಪ್ರಾಂಶುಪಾಲರಾದ ಡಾ. ಸತೀಶ ನಾಯ್ಕ ಅಧ್ಯಕ್ಷತೆ ವಹಿಸಿ ಯುವಕರು ಅನಗತ್ಯವಾಗಿ ಸಮಯ ವ್ಯಯ ಮಾಡದೇ ಸತತ ಅಧ್ಯಯನ ಶೀಲರಾದರೆ ಸರಳವಾಗಿ ಗುರಿ ತಲುಪಬಹುದು ಎಂದರು. ಅದೇ ಕಾಲೇಜಿನ ಹಳೆಯ ವಿದ್ಯಾರ್ಥಿ, ಇತ್ತೀಚಿನ GPT ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ವಿಜೇತ ಶಿಕ್ಷಕ ಗಿರೀಶ ಚಂದ್ರಶೇಖರ ನಾಯ್ಕ ಬೇಡ್ಕಣಿ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸವಾಲು ಸಾಧ್ಯತೆ ಹಾಗೂ ಕನ್ನಡ ಸಾಹಿತ್ಯ, ವ್ಯಾಕರಣದ ಕುರಿತು ಉಪನ್ಯಾಸ ನೀಡಿದರು. ಉಪನ್ಯಾಸಕರಾದ ಎನ್.ಟಿ. ನಾಯ್ಕ. ಜೆ.ಎಸ್. ಶಾಸ್ತ್ರಿ, ಅನಿಜ ಎಲ್. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಸಹಪ್ರಾಧ್ಯಾಪಕಿ ಶ್ರೀಮತಿ ವಾಣಿ ಡಿ.ಎಸ್. ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಆರಂಭದಲ್ಲಿ ಕುಮಾರಿ ವಿನೂತಾ ಎನ್. ಗೌಡ ಪ್ರಾರ್ಥಿಸಿ ಸ್ವಾಗತಿಸಿದರು. ಕುಮಾರ ಅಭಯ್ ಕೊಂಡ್ಲಿ ವಂದಿಸಿದರು.