ಸಿದ್ದಾಪುರ: ಎಂ.ಜಿ.ಸಿ. ಕಲಾ, ವಾಣಿಜ್ಯ ಹಾಗೂ ಜಿ.ಎಚ್.ಡಿ. ವಿಜ್ಞಾನ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ., ವಿದ್ಯಾರ್ಥಿ ಸಂಸತ್ತು, ಇತಿಹಾಸ ವಿಭಾಗ ಮತ್ತು ಎನ್.ಎಸ್.ಎಸ್. ಘಟಕ ಇವುಗಳ ಸಹಯೋಗದಲ್ಲಿ ಜ.19, ಶುಕ್ರವಾರದಂದು ಬೆಳಿಗ್ಗೆ 11.00 ಗಂಟೆಗೆ ಮಹಾವಿದ್ಯಾಲಯದ ಎ.ವಿ.ಹಾಲ್‌ನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ಯುವ ಸಪ್ತಾಹದ ಅಂಗವಾಗಿ ಪರಂಪರಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಸಮಾರಂಭವನ್ನು ಉದ್ಘಾಟಿಸಿದ ಡಾ. ಶಶಿಭೂಷಣ ಹೆಗಡೆ, ನಮ್ಮ ಪ್ರಾಚೀನ ಇತಿಹಾಸದ ಪರಂಪರೆಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಜಗತ್ತಿನ ಅತ್ಯಂತ ಜೀವಂತ ಪರಂಪರೆ ನಮ್ಮದು ಎನ್ನುವ ಹೆಗ್ಗಳಿಕೆ ಯುವ ಸಮುದಾಯಕ್ಕೆ ಇರಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಯುವಜನತೆ ಮತ್ತು ಪರಂಪರೆ ಎನ್ನುವ ವಿಷಯದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಖ್ಯಾತ ಸಾಹಿತಿ ಸುಬ್ರಾಯ ಮತ್ತಿಹಳ್ಳಿ, ನಮ್ಮ ಪರಂಪರೆ ನಮ್ಮ ಹೆಮ್ಮೆ. ವೈವಿಧ್ಯಮಯ ಸಂಸ್ಕೃತಿ, ಭಾಷೆ, ಉಡುಪುಗಳು ನಮ್ಮ ಅಸ್ಮಿತೆಯ ಪ್ರತೀಕ ಹಾಗೂ ಇತರ ಸಂಸ್ಕೃತಿಯ ಪರಂಪರೆಯನ್ನು ಗೌರವಿಸುವ ಔದಾರ್ಯ ನಮ್ಮದಾಗಿರಬೇಕು. ಪ್ರಬುದ್ಧತೆಯಿಂದ ಯುವ ಸಮುದಾಯ ನಮ್ಮ ಪರಂಪರೆಯ ಇತಿಹಾಸವನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು. ಮನುಷ್ಯ ಮನಸ್ಸುಗಳು ಒಡೆಯದ ಹಾಗೆ, ಕಟ್ಟುವ ಕೆಲಸವನ್ನು ಯುವ ಸಮುದಾಯ ಮಾಡಬೇಕು ಎಂದು ಹೇಳಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸುರೇಶ ಗುತ್ತಿಕರ್ ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ಯಾರ್ಥಿ ಸಂಸತ್ ಉಪಾಧ್ಯಕ್ಷರಾದ ಡಾ. ದೇವನಾಂಪ್ರಿಯ ಎಂ.ಪ್ರಾಸ್ತಾವಿಕ ಮಾತನಾಡಿದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ದೀಪಕ್ ನಾಯ್ಕ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿಯಾದ ಕು. ಭಾವನಾ ಹೆಗಡೆ ಸ್ವಾಗತಿಸಿದರು. ಕು. ಪ್ರೀತಿ ಗೌಡರ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕು. ಪ್ರತೀಕ ಭಟ್ ಮತ್ತು ಕು. ಆಶಿತಾ ಗೌಡರ್ ನಿರೂಪಿಸಿದರು. ಕು. ಅಂಜುಮ್ ಸಾಬ್ ವಂದಿಸಿದರು. ಪರಂಪರಾ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಂದ ಪರಂಪರಾ ಆಹಾರ ಮೇಳ-2024 ಆಯೋಜಿಸಲಾಗಿತ್ತು.