ದಾಂಡೇಲಿ: ಕಾರವಾರದ ಶಿವಾಜಿ ಪದವಿ ಕಾಲೇಜಿನಲ್ಲಿ ಜ:18 ,19 ಕ್ಕೆ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯದ ವಲಯ ಮಟ್ಟದ ಯುವಜನೋತ್ಸವದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರ ತಂಡವು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಎರಡು ಪ್ರಥಮ ಹಾಗೂ ಐದು ದ್ವಿತೀಯ ಬಹುಮಾನಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿದೆ.
ಮೆಹೆಂದಿ ಸ್ಪರ್ಧೆಯಲ್ಲಿ ಅಫೀಫಾ ಹಿರೇಕುಂಬಿ ಹಾಗೂ ಜಾನಪದ ಸಮೂಹ ಗೀತೆ ಸ್ಪರ್ಧೆಯಲ್ಲಿ ಸಂಗೀತಾ ಬೆಡಕೆ ಹಾಗೂ ಸಂಗಡಿಗರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಭಾವಗೀತೆ ಹಾಗೂ ಶಾಸ್ತ್ರೀಯ ಸಂಗೀತಗಳೆರಡರಲ್ಲೂ ಕಾವ್ಯಾ ಭಟ್ ದ್ವಿತೀಯ ಸ್ಥಾನವನ್ನು ಗಳಿಸಿದ್ದಾಳೆ. ಇಂಗ್ಲೀಷ್ ಸಿದ್ಧ ಪಡಿಸಿದ ಭಾಷಣ ಸ್ಪರ್ಧೆಯಲ್ಲಿ ಚಂದ್ರಿಕಾ ಎಸ್., ಏಕಾಂಕ ನಾಟಕದಲ್ಲಿ ಕಾವ್ಯಾ ಕುಲಕರ್ಣಿ ಹಾಗೂ ಸಂಗಡಿಗರು ಮತ್ತು ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಸ್ವಪ್ನಾ ಮಿರಾಶಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಪ್ರಾಚಾರ್ಯ ಡಾ. ಎಂ. ಡಿ. ಒಕ್ಕುಂದ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.