ದಾಂಡೇಲಿ: ದೇಶದ ಅತಿ ದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರನ್ನು ಬಳಸಿಕೊಂಡು ದೇಶವನ್ನು ಅಭಿವೃದ್ಧಿಗೊಳಿಸಬೇಕಾದ ಸರಕಾರಗಳು ಯುವಜನರಿಗೆ ಹುಸಿ ಭರವಸೆ ನೀಡಿ ವಂಚಿಸುತ್ತಲೇ ಇವೆ. ಶಿಕ್ಷಣ, ಉದ್ಯೋಗ ಸಿಗದೇ ಹತಾಶೆಗೊಂಡಿರುವ ಯುವಜನತೆಗೆ ಆಳುವ ವರ್ಗ ಪರಿಹಾರ ಒದಗಿಸುವ ಬದಲು ಅವರ ಮನಸ್ಸಿನಲ್ಲಿ ಜಾತಿ, ಧರ್ಮಾಂಧತೆ ಬಿತ್ತುತ್ತಿರುವುದು ಅಪಾಯಕಾರಿಯಾದ ಬೆಳವಣಿಗೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
ಅವರು ನಗರದ ಸಿಐಟಿಯು ಕಛೇರಿಯಲ್ಲಿ ಶನಿವಾರ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಜಿಲ್ಲಾ ಸಮಿತಿಯು ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನದ ಲೋಗೊ ಅನಾವರಣಗೊಳಿಸಿ ಮಾತನಾಡಿದರು.
ಉದ್ಯೋಗ ಸೃಷ್ಟಿಯ ಭರಾಟೆಯೊಂದಿಗೆ ಸರಕಾರಗಳು ಕಾರ್ಪೋರೇಟ್ ಕುಳಗಳು ಹಾಗೂ ದೇಶಿ ಹಾಗೂ ವಿದೇಶಿ ಬಂಡವಾಳಿಗರಿಗೆ ಕೈಗಾರಿಕಾ ಸ್ಥಾಪಿಸಲು ಭೂಮಿ ನೀಡುತ್ತಿವೆ. ಆದರೆ ಆ ಕಂಪೆನಿಗಳು ಕೈಗಾರಿಕೆ ಆರಂಭಿಸದೇ ಇರುವುದರಿಂದ ಉದ್ಯೋಗ ಸೃಷ್ಟಿ ಬರೀ ಭಾಷಣದಲ್ಲಿ ಉಳಿಯುತ್ತದೆ. ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಯುವಜನ ಸಂಘಟನೆಯು, ಉದ್ಯೋಗ ಸೃಷ್ಠಿಸಿ, ಸ್ಥಳೀಯರಿಗೆ ಉದ್ಯೋಗ ಒದಗಿಸಲು ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕು. ಉದ್ಯೋಗ ಕೊಡಲಾಗದಿದ್ದರೆ, ನಿರುದ್ಯೋಗಿ ಯುವಜನರಿಗೆ ಮಾಸಿಕ ರೂ. 10,000 ನಿರುದ್ಯೋಗ ಭತ್ಯೆಕೊಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ದೇಶದಲ್ಲಿ ನಿರುದ್ಯೋಗ ಪ್ರಮಾಣ ವಿಪರೀತವಾಗಿ ಏರುತ್ತಿದೆ. ಉದ್ಯೋಗ ಸೃಷ್ಟಿಸಲು ವಿಫಲವಾದ ಕೇಂದ್ರ ಸರಕಾರ ಕೇವಲ ಭಾವನಾತ್ಮಕ ವಿಷಯಗಳನ್ನು ಮುನ್ನಲೆಗೆ ತಂದು ರಾಜಕೀಯ ಲಾಭಕ್ಕೆ ಹವಣಿಸುತ್ತಿರುವುದು ಜನತೆಗೆ ಎಸಗುತ್ತಿರುವ ದ್ರೋಹವಾಗಿದೆ. ಕೇಂದ್ರ ಸರಕಾರ ಲೋಕಸಭೆಯಲ್ಲಿ ನೀಡಿದ ಮಾಹಿತಿಯಂತೆ ಕೇಂದ್ರ ಸರ್ಕಾರದಡಿ 9.79 ಲಕ್ಷ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿಗೊಳಿಸಲು ಇಚ್ಚಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದರು.
ಯುವನಿಧಿ ಗ್ಯಾರಂಟಿ ಯೋಜನೆ ಪರಿಷ್ಕರಣೆಯಾಗಲೇಬೇಕು: ನಿರುದ್ಯೋಗಿ ಯುವಕರಿಗೆ ಯುವನಿಧಿ ಯೋಜನೆ ಜಾರಿಗೆ ರಾಜ್ಯ ಸರಕಾರ ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆಯಾದರೂ, ಕೇವಲ ಹಿಂದಿನ ವರ್ಷ ಉತ್ತೀರ್ಣರಾದವರಿಗೆ ಈ ಯೋಜನೆಯನ್ನು ಅನ್ವಯಿಸಿರುವುದರಿಂದ, ಪದವಿ ಮುಗಿಸಿ ಐದು-ಹತ್ತು ವರ್ಷಗಳಿಂದ ಕೆಲಸ ಸಿಗದ ನಿರುದ್ಯೋಗಿಗಳಿಗೆ ಇದರಿಂದ ಯಾವುದೇ ಆಸರೆ ಸಿಗುವುದಿಲ್ಲ. ಸರಕಾರ ಯುವನಿಧಿ ಗ್ಯಾರಂಟಿ ಯೋಜನೆಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿ, ಅಧ್ಯಯನ ಮುಗಿಸಿ ಕನಿಷ್ಠ 10 ವರ್ಷದಿಂದ ಕೆಲಸ ಸಿಗದಿರುವ ನಿರುದ್ಯೋಗಿ ಯುವಜನರಿಗೆ ಈ ಸೌಲಭ್ಯವನ್ನು ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಶಾಲೆ, ಕಾಲೇಜು ಹಾಗೂ ವಿವಿಧ ಇಲಾಖೆಗಳಲ್ಲಿ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು, ಅತಿಥಿ ಶಿಕ್ಷಕರು, ಗುತ್ತಿಗೆ, ಹೊರಗುತ್ತಿಗೆ ಇತ್ಯಾದಿ ಹೆಸರಿನಲ್ಲಿ ನೌಕರರು ಸೇವೆಸಲ್ಲಿಸುತ್ತಿದ್ದು ಅವರ ಖಾಯಮಾತಿಗೆ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದರಿಂದ ಸಂಕಷ್ಟವನ್ನೆದುರಿಸುತ್ತಿದ್ದಾರೆ. ಕೂಡಲೇ ಸರಕಾರ ಇವರೆಲ್ಲರಿಗೂ ಸೇವಾಭದ್ರತೆ ಒದಗಿಸಬೇಕು ಎಂದರು.
ಈ ಹಿನ್ನೆಲೆಯಲ್ಲಿ “ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ” ಘೋಷಣೆಯಡಿ ಡಿವೈಎಫ್ಐ 12 ನೇ ರಾಜ್ಯ ಸಮ್ಮೇಳನವನ್ನು 2024 ಫೆಬ್ರವರಿ 25,26,27 ರಂದು ಮೂರು ದಿನಗಳ ಕಾಲ ಮಂಗಳೂರಿನಲ್ಲಿ ಹಮ್ಮಿಕೊಂಡಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಯ್ದ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡು ಈ ಮೇಲ್ಕಂಡ ವಿಷಯಗಳ ಕುರಿತು ಚರ್ಚಿಸಿ ನಿರ್ಣಯ ಹಾಗೂ ಕಾರ್ಯಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದರು.
ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ಡಿ ಸ್ಯಾಮ್ಸನ್ ಮಾತನಾಡಿ, ರಾಜ್ಯದಲ್ಲಿ ಎರಡೂವರೆ ಲಕ್ಷ ಹುದ್ದೆಗಳು ಖಾಲಿಯಿದ್ದು ಅವುಗಳ ಭರ್ತಿ ಮಾಡಲು ಹಾಗೂ ಆದ್ಯತಾ ಕ್ಷೇತ್ರವಾರು ಉದ್ಯೋಗ ಸೃಷ್ಟಿ ಮಾಡುವ ದಿಸೆಯಲ್ಲಿ ಸರಕಾರ ಕೈಗೊಳ್ಳುವ ಬಜೆಟ್ ಗಳು ಯಾವುದೇ ಚಕಾರ ಎತ್ತದಿರುವುದು ಯುವಜನರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಸರಕಾರದಿಂದ ದಲಿತ ಸಮುದಾಯದವರಿಗೆ ಮಂಜೂರಾಗಿದ್ದ ಭೂಮಿಯನ್ನು ಪಿಟಿಸಿಎಲ್ ಕಾಯಿದೆ ಉಲ್ಲಂಘಿಸಿ ಉಳ್ಳವರು ಖರೀದಿಸಿದ್ದಾರೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ಮುಂಡಗೋಡ ತಾಲೂಕಿನಲ್ಲಿ ಈ ತರಹದ ಪ್ರಕರಣವನ್ನು ಭೇದಿಸಿ ಮೂಲ ಮಂಜೂರುದಾರ ಫಲಾನುಭವಿಗಳಿಗೆ ಭೂಮಿ ಮರಳಿಸಿದ್ದು ಸ್ವಾಗತಾರ್ಹವಾಗಿದ್ದು ಡಿವೈಎಫ್ಐ ಅವರನ್ನು ಅಭಿನಂಧಿಸುತ್ತದೆ. ಹಾಗೆಯೇ ದಾಂಡೇಲಿ, ಜೋಯಿಡಾ, ಹಳಿಯಾಳ ಪ್ರದೇಶಗಳಲ್ಲಿ ಪರಿಶಿಷ್ಟರಿಂದ ಖರೀದಿಸಿದ ಭೂಮಿಯನ್ನು ಮೂಲ ಮಂಜೂರುದಾರ ಫಲಾನುಭವಿಗಳಿಗೆ ಕೂಡಲೇ ಮರಳಿಸಬೇಕು. ಈ ಕಾಯಿದೆಯನ್ನು ಉಲ್ಲಂಘಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಹಾಗೂ ಡಿಎಚ್ಎಸ್ ಸಂಘಟನೆಗಳು ನಿರಂತರವಾಗಿ ಧ್ವನಿ ಎತ್ತುತ್ತಿವೆ ಎಂದರು.
ಈ ಸಂದರ್ಭದಲ್ಲಿ ಡಿವೈಎಫ್ಐ ಮುಖಂಡರಾದ ಇಮ್ರಾನ್ ಖಾನ್, ಕಾಂತರಾವ್, ಸಲ್ಮೊನ್ ರಾಜ್, ಮಹಮದ್ ಗೌಸ್ ಬಿಚ್ಚುನವರ, ಸುರೇಂದ್ರ ಕಾಂಬಳೆ, ಇರ್ಷಾದ್ ರಾಣೇಬೆನ್ನೂರು, ಸಾಹಿಲ್ ಶೇಖ್, ಅಭಿದ್ ಆರ್, ಇರ್ಷಾದ್ ಬೈಲೂರು, ಪ್ರಸಾದ್ ಹಂಡಿ, ನಯೀಮ್ ಜಮಾದಾರ್, ದಾಮೋದರ್ ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.