ಕಾರವಾರ: ನಗರದ ದಿವೇಕರ ಕಾಲೇಜಿನಲ್ಲಿ ಎರಡು ದಶಕ ಸೇವೆ ಸಲ್ಲಿಸಿ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಪ್ರೊ. ದಿ. ಜಿ.ವಿ. ಭಟ್ಟ ಸ್ಮರಣಾರ್ಥ ಗ್ರಂಥ ಬಿಡುಗಡೆ ಕಾರ್ಯಕ್ರಮ ಜ.22ರಂದು 10.30ಕ್ಕೆ ದಿವೇಕರ ಕಾಲೇಜಿನ ಸಭಾಂಗನದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಕೇಶವ ಕೆ.ಜಿ. ತಿಳಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದಿವೇಕರ ವಾಣಿಜ್ಯ ಮಹಾವಿದ್ಯಾಲಯ ಮತ್ತು ದಿವೇಕರ ವಾಣಿಜ್ಯ ಮಹಾ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಅದಮ್ಯಚೇತನ ಪ್ರೊ ಜಿ ವಿ ಭಟ್ ಗ್ರಂಥದ ಬಿಡುಗಡೆ ಸಮಾರಂಭವನ್ನು ಏರ್ಪಡಿಸಲಾಗಿದೆ. ಖ್ಯಾತ, ಹಿರಿಯ ಸಾಹಿತಿ ಡಾ.ಜಯಂತ ಕಾಯ್ಕಿಣ, ಹಿರಿಯ ಪತ್ರಕರ್ತ ಜೀ.ಯು. ಭಟ್ಟ ಪಾಲ್ಗೊಳ್ಳಿದ್ದಾರೆ. ಕೆನರಾ ವೆಲ್ ಫೆರ್ ಟ್ರಸ್ಟಿನ ಅಧ್ಯಕ್ಷ ಎಸ್.ಪಿ.ಕಾಮತ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪ್ರೊ. ಜಿ ವಿ ಭಟ್ಟರ ಧರ್ಮಪತ್ನಿ ಅನಸೂಯಾ ಭಟ್, ಗ್ರಂಥದ ಸಂಪಾದಕರಾದ ಜಿ.ವಿ.ಜೋಶಿ ಮತ್ತು ಪ್ರೊ. ಆರ್.ಎಸ್. ಹಬ್ಬು ಉಪಸ್ಥಿತರಿರುವರು ಎಂದರು.
ಪ್ರೊ. ಭಟ್ ಕೆನರಾ ವೆಲ್ ಫೆರ್ ಟ್ರಸ್ಟ್ ಸಂಸ್ಥೆಯ ಅಡಿಯಲ್ಲಿ 1970 ರಲ್ಲಿ ಪ್ರಾರಂಭಿಸಿದ ಮಹಾ ವಿದ್ಯಾಲಯದ ಸ್ಥಾಪಕ ಪ್ರಾಚಾರ್ಯರಾಗಿದ್ದು, ಇಪ್ಪತ್ತೂರುವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1993 ರಲ್ಲಿ ನಿವೃತ್ತಿ ಹೊಂದಿದ್ದು, ಅವರ ಕಾಲಾವಧಿಯಲ್ಲಿ ಮಹಾವಿದ್ಯಾಲಯವು ಕರ್ನಾಟಕ ವಿಶ್ವ ವಿದ್ಯಾಲಯದ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ರೂಪುಗೊಂಡಿತ್ತು. ಮಹಾ ವಿದ್ಯಾಲಯದಲ್ಲಿ ಅರ್ಥ ಶಾಸ್ತ್ರವನ್ನು ಕಲಿಸುತ್ತಿದ್ದ ಅವರು ಅತ್ಯಂತ ಜನಪ್ರಿಯ ಪ್ರಾಧ್ಯಾಪಕರಾಗಿ ಹೆಸರು ಗಳಿಸಿದ್ದರು. ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ್ದ ಪ್ರೊ.ಜಿ ವಿ ಭಟ್ಟರನ್ನು ಆ ವಿದ್ಯಾರ್ಥಿಗಳು ಇಂದಿಗೂ ನೆನೆಯುತ್ತಾರೆ. ಅವರು ಬದುಕಿರುವವರೆಗೂ, ಅನೇಕ ವಿದ್ಯಾರ್ಥಿಗಳು ಕಡತೋಕಾದ ಕೊಂಕೇರಿಯಲ್ಲಿರುವ ಅವರ ಮನೆಗೆ ಹೋಗಿ, ಅವರ ಜನ್ಮ ದಿನವನ್ನು ಆಚರಿಸುತ್ತಿದ್ದು ವಿಶೇಷವಾಗಿದೆ ಎಂದು ವಿವರಿಸಿದರು. ಅವರು ಎಲ್ಲರಿಗೂ ಮಾದರಿಯಾಗಿದ್ದರು. ಕೇವಲ ಪ್ರೀತಿ ಮತ್ತು ಅನುಕಂಪಗಳಿಂದ ಜನಮನವನ್ನು ಅವರು ಗೆದ್ದಿದ್ದರು. ದಿವೇಕರ ಕಾಲೇಜು ಜನರ ಕಾಲೇಜು ಎಂಬ ಭಾವನೆ ಮೂಡುವ ರೀತಿಯಲ್ಲಿ ಅವರು ಈ ಸಂಸ್ಥೆಯನ್ನು ಬೆಳೆಸಿದ್ದು ಒಂದು ಅದ್ಭುತ ಸಾಧನೆಯಾಗಿದೆ. ದಿನ ದಲಿತರ ಬಗ್ಗೆ ಕಾಳಜಿ ಹೊಂದಿದ್ದ ಅವರು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ, ಕಾಲೇಜಿನ ಸಮೀಪದ ಮೀನುಗಾರ ಕಾಲನಿಯನ್ನು ದತ್ತು ತೆಗೆದುಕೊಂಡು, ಅದರ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದರು ಎಂದು ತಿಳಿಸಿದರು. ಹಳೆ ವಿದ್ಯಾರ್ಥಿಗಳಾದ ಸ್ಯಾಮ್‌ಸನ್ ಡೀಸೋಜಾ, ನಾಗೇಶ ರಾವ್, ಅನಿರುದ್ಧ ಹಳದಿಪುರಕರ, ಗ್ರಂಥಪಾಲಕ ಸುರೇಶ ಗುಡಿಮನೆ ಇದ್ದರು.